ಬೆಂಗಳೂರು, ಅ.18 www.bengaluruwire.com : ರಾಜ್ಯದಲ್ಲಿ ಒಟ್ಟು 1.91 ಲಕ್ಷ ಚದರ ಕಿ.ಮೀ ಭೌಗೋಳಿಕ ಪ್ರದೇಶದ ಪೈಕಿ ಕೇವಲ 40,649.30 ಚ.ಕಿ.ಮೀ ಅರಣ್ಯ ಪ್ರದೇಶ ಮಾತ್ರ ಇರೋದು.
ಕರ್ನಾಟಕದ 30 ಜಿಲ್ಲೆಗಳಲ್ಲಿ ಒಟ್ಟು ಭೂಪ್ರದೇಶದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವಿರುವ ಟಾಪ್-5 ಜಿಲ್ಲೆಗಳ ಪಟ್ಟಿಯಲ್ಲಿ ಬೀಜಾಪುರ ಒಟ್ಟಾರೆ ಭೂ ಪ್ರದೇಶದ ಪೈಕಿ ಅರಣ್ಯ ಪ್ರದೇಶ ಕೇವಲ ಶೇ.0.77ನಷ್ಟಿದ್ದು ಮೊದಲ ಸ್ಥಾನದಲ್ಲಿದೆ. ನಂತರ ಗುಲ್ಬರ್ಗಾ (3.10%), ರಾಯಚೂರು (4.39%), ಬೆಂಗಳೂರು ನಗರ (6.88%), ಮೈಸೂರು (7.01%) ಜಿಲ್ಲೆ ಅತಿ ಕಡಿಮೆ ಅರಣ್ಯ ಪ್ರದೇಶವಿರುವ ಜಿಲ್ಲೆಗಳ ಟಾಪ್-5 ಸ್ಥಾನದಲ್ಲಿದೆ.
ಇನ್ನು ಕರ್ನಾಟಕದಲ್ಲಿ ಒಟ್ಟು ಭೂ ಪ್ರದೇಶದ ಪೈಕಿ ಅತಿಹೆಚ್ಚು ಅರಣ್ಯಭೂಮಿ ಹೊಂದಿರುವ ಟಾಪ್-5 ಜಿಲ್ಲೆಗಳಲ್ಲಿ ಉತ್ತರ ಕನ್ನಡ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಒಟ್ಟಾರೆ 10,277 ಚ.ಕಿ.ಮೀ ವಿಸ್ತೀರ್ಣದ ಭೂಮಿಯ ಪೈಕಿ 8,303.77 ಚ.ಕಿ.ಮೀ ಅರಣ್ಯ ಪ್ರದೇಶದವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇಕಡವಾರು ಅರಣ್ಯ ಪ್ರದೇಶ 80.80ರಷ್ಟಿದೆ. ಇದರ ನಂತರದ ಸ್ಥಾನದಲ್ಲಿ ಶಿವಮೊಗ್ಗ (67.11%), ಚಾಮರಾಜನಗರ (65.03%), ಕೊಡಗು (47.87%), ಚಿಕ್ಕಮಗಳೂರು (42.72%) ಟಾಪ್ ಐದನೇ ಸ್ಥಾನದಲ್ಲಿದೆ ಎಂದು 2022-23ನೇ ಸಾಲಿನ ಅರಣ್ಯ ಇಲಾಖೆ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ರಾಜ್ಯದ 30 ಜಿಲ್ಲೆಗಳ ಭೂ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿಯ ಸರಾಸರಿ ನೋಡಿದಾಗ ಶೇ.21.19 ರಷ್ಟಿದೆ. ಈ ಪ್ರಮಾಣವು ದೇಶದಲ್ಲಿನ ಒಟ್ಟಾರೆ ಅರಣ್ಯ ಪ್ರದೇಶದ ಸರಾಸರಿಗಿಂತ ಶೇ.0.52ನಷ್ಟು ಮಾತ್ರ ಕಡಿಮೆಯಿದೆ. ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿನ ಅರಣ್ಯ ಪ್ರದೇಶದ ಸರಾಸರಿ ಶೇ.21.71 ನಷ್ಟಿದೆ. ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವ ಟಾಪ್ -5 ರಾಜ್ಯಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಹಾಗೂ ಜಾರ್ಖಂಡ್ ಸ್ಥಾನಗಳಿಸಿವೆ ಎಂದು ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2021ರ ವರದಿಯಲ್ಲಿ ತಿಳಿಸಿದೆ.
ಕಳ್ಳಬೇಟೆ, ಶ್ರೀಗಂಧ, ರಕ್ತಚಂದನ ಕಳ್ಳ ಸಾಗಾಣೆ ಪ್ರಕರಣಗಳು :
ಅರಣ್ಯದಲ್ಲಿ ಅಕ್ರಮವಾಗಿ ಶ್ರೀಗಂಧ, ರಕ್ತಚಂದನ, ಬೀಟೆ, ವನ್ಯಜೀವಿ ಬೇಟೆ, ಕಳ್ಳಸಾಗಣೆಯಂತಹ ಕೃತ್ಯಗಳು ಪರಿಣಾಮಕಾರಿಯಾಗಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. 2022-23ನೇ ಸಾಲಿನ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ 877 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ವನ್ಯಜೀವಿ ಅಪರಾಧ ಪ್ರಕರಣಗಳು 123, ಶ್ರೀಗಂಧ ಕಳ್ಳತನ- ಕಳ್ಳ ಸಾಗಾಣೆಯಂತಹ 85 ಪ್ರಕರಣ, ಬೀಟೆ 32, ರಕ್ತಚಂದನ 8 ಕೇಸ್ ಗಳು ಬುಕ್ ಆಗಿವೆ.
ವಿವಿಧ ನ್ಯಾಯಾಲಯಗಳಲ್ಲಿದೆ 6,068 ಪ್ರಕರಣಗಳು :
5 ರಾಷ್ಟ್ರೀಯ ಉದ್ಯಾನವನ, 36 ಅಭಯಾರಣ್ಯಗಳು (5 ಹುಲಿ ಸಂರಕ್ಷಿತ ಪ್ರದೇಶಗಳು ಒಳಗೊಂಡಂತೆ), 17 ಸಂರಕ್ಷಣಾ ಮೀಸಲು ಪ್ರದೇಶ ಹಾಗೂ 1 ಸಮುದಾಯ ಮೀಸಲು ಪ್ರದೇಶಗಳ ರಕ್ಷಣೆ ಮತ್ತು ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕಿರಿಯ ನ್ಯಾಯಾಲಯ, ಜೆಎಂಎಫ್ ಸಿ ಹಂತದಿಂದ ಸುಪ್ರೀಂಕೋರ್ಟ್ ವೆರೆಗೆ ಒಟ್ಟಾರೆ 6,068 ಪ್ರಕರಣಗಳು ವಿವಿಧ ಹಂತದಲ್ಲಿ ಇನ್ನೂ ಬಾಕಿ ಉಳಿದಿದೆ. ಕೆಲವೊಮ್ಮೆ ರಾಜ್ಯದ ಸರ್ಕಾರಿ, ಖಾಸಗಿ ಪ್ರಮುಖ ಯೋಜನೆಗಳಿಗೆ ರಾಜ್ಯದ ಸಸ್ಯ ಸಂಪತ್ತನ್ನು ಬಲಿ ಕೊಡುತ್ತಿರುವುದು ಕಳವಳಕಾರಿ ವಿಚಾರವಾಗಿದೆ.
ರಾಜ್ಯದಲ್ಲಿದೆ 87 ದೇವರಕಾಡುಗಳು :
ಧಾರ್ಮಿಕ ಮತ್ತು ಪರಿಸರ ವ್ಯವಸ್ಥೆಗಳಿಂದ ಬಹಳ ವಿಶಿಷ್ಟ ಮತ್ತು ಮಹತ್ವದ್ದಾಗಿರುವ ದೇವರಕಾಡು (ದೈವಿವನ)ಗಳನ್ನು ಪ್ರತಿ ಜಿಲ್ಲೆಗೊಂದರಂತೆ ಅಭಿವೃದ್ಧಿಪಡಿಸುವ ಯೋಜನೆ 2010-11ನೇ ಸಾಲಿನಿಂದ ಆರಂಭಿಸಲಾಗಿದೆ. ಮಾರ್ಚ್ 2023ರ ವರೆಗೆ ರಾಜ್ಯದಲ್ಲಿ 87 ದೇವರಕಾಡುಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಣೆ ಮಾಡಲಾಗುತ್ತಿದೆ. ಈ ಕಾಡುಗಳು ಅಮೂಲ್ಯವಾದ ಪರಿಸರ ವ್ಯವಸ್ಥೆಗಳನ್ನು ಅವುಗಳ ಪ್ರಾಚೀನ ಪರಿಸ್ಥಿತಿಗಳಲ್ಲಿ ಪವಿತ್ರ ತೋಪುಗಳಾಗಿ ಸಂರಕ್ಷಸಲು ಹಾಗೂ ಅವುಗಳ ನೈಸರ್ಗಿಕ ವಿಕಸನ ಪ್ರಕ್ರಿಯೆಯನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರೆಸಲು ಈ ಯೋಜನೆಯನ್ನು ಅರಣ್ಯ ಇಲಾಖೆ ಜಾರಿಗೆ ತಂದಿದೆ.
2022-23ನೇ ಸಾಲಿನ ಅಂತ್ಯಕ್ಕೆ ಅರಣ್ಯ ಇಲಾಖೆಯಲ್ಲಿ ಗ್ರೂಪ್ ಎ ನಿಂದ ಗ್ರೂಪ್-ಡಿ ತನಕ ಒಟ್ಟಾರೆ 14,845 ಮಂಜೂರಾತಿಯಾದ ಅಧಿಕಾರಿ, ಸಿಬ್ಬಂದಿ ಹುದ್ದೆಯಿದ್ದು, 8,425 ಹುದ್ದೆಗಳು ಭರ್ತಿಯಾಗಿದ್ದರೆ, 6,410 ಹುದ್ದೆಗಳು ಖಾಲಿಯಿವೆ. ಅಲ್ಲದೆ 2,839 ಮಂದಿ ದಿನಗೂಲಿ ಆಧಾರದ ಮೇಲೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
40,649.30 ಚ.ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿರುವ ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿಗಳು ಹಾಗೂ ಅಮೂಲ್ಯ ಸಸ್ಯ ಸಂಪತ್ತು ಉಳಿಸುವ ದೃಷ್ಟಿಯಿಂದ ಈಗಿರುವ ಅಧಿಕಾರಿಗಳು, ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು, ಕಾರ್ಯನಿರ್ವಹಣೆಗೆ ಏನೇನೂ ಸಾಲದಾಗಿದೆ. ಖಾಲಿಯಿರುವ ಹುದ್ದೆಗೆಳನ್ನು ಸರ್ಕಾರ ಆದಷ್ಟು ಶೀಘ್ರದಲ್ಲಿ ತುಂಬುವ ಅಗತ್ಯವಿದೆ.