ಬೆಂಗಳೂರು, ಜು.04 www.bengaluruwire.com : ಅಕ್ರಮ ಮಾರ್ಗ ಯಾವತ್ತಿದ್ದರೂ ಅಪಾಯಕಾರಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ‘ಬಿ’ ಖಾತೆ ಯ ಸ್ವತ್ತುಗಳನ್ನು (B Khata Property) ‘ಎ’ ಖಾತೆ ಮಾಡಿಕೊಂಡಿರುವ 9,736 ಸಂಶಯಾತ್ಮಕ ನಮೂದುಗಳನ್ನು ಪಾಲಿಕೆಯ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ ಪರಿಶೀಲನಾ ಸಮಿತಿಯು ಪತ್ತೆಹಚ್ಚಿದೆ. ಇದರಿಂದ ಅಕ್ರಮ ಮಾರ್ಗದಲ್ಲಿ ’ಎ’ ಖಾತೆ ಮಾಡಿಕೊಂಡಿದ್ದವರಿಗೆ ಸಂಕಷ್ಟ ಎದುರಾಗಿದೆ.
ನಗರದಲ್ಲಿ ಪಾಲಿಕೆಯ ಹೊಸ ವಲಯ ಸೇರಿದಂತೆ 8 ವಲಯಗಳ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ‘ಬಿ’ ಖಾತಾ ಸ್ವತ್ತುಗಳನ್ನು ‘ಎ’ ಖಾತೆಯೆಂದು ನಮೂದು ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ ಕಂದಾಯ ವಿಭಾಗದ ವಿವಿಧ ಹಂತ ಅಧಿಕಾರಿಗಳ ಹೆಡೆಮುರಿ ಕಟ್ಟಲು ಬಿಬಿಎಂಪಿ ಆಯುಕ್ತರು 21-02-2023ರಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯ್ ಪುರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಪರಿಶೀಲನಾ ಸಮಿತಿಗೆ ಇಂತಹ ಅಕ್ರಮ ಪ್ರಕರಣಗಳನ್ನು ಪತ್ತೆ ಹಚ್ಚಲು ಪರಿಶೀಲನಾ ಸಮಿತಿ ರಚಿಸಿ ಆದೇಶಿಸಿದ್ದರು. ಆ ಸಮಿತಿಗೆ ಪಾಲಿಕೆಯ 8 ವಲಯಗಳ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿರುವ ‘ಎ’ ಖಾತಾ ನಮೂದುಗಳನ್ನು ಪರಿಶೀಲಿಸಿ ವರದಿ ನೀಡಲು 64 ಉಪ ವಿಭಾಗಗಳ ಎಆರ್ ಒ (ಸಹಾಯಕ ಕಂದಾಯ ಅಧಿಕಾರಿ)ಗಳು ಸಮಿತಿಗೆ ಮಾಹಿತಿ ನೀಡುವಂತೆ ಗಡುವು ನೀಡಿತ್ತು.
ಆದರೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಂದ ಕಾರಣ, ಸಮಿತಿ ಅಧ್ಯಕ್ಷರು ನಗರದ ಬಿಬಿಎಂಪಿಯ 64 ಉಪ ವಿಭಾಗಗಳಲ್ಲಿನ ಕಂದಾಯ ಸಿಬ್ಬಂದಿ ಮತ್ತು ಅಧಿಕಾರಿಗಳು ಚುನಾವಣಾ ಕೆಲಸಕ್ಕೆ ನಿಯೋಜಿಸಿದ ಕಾರಣ ಕೆಲ ಕಾಲ ಅಕ್ರಮ ಎ- ಖಾತೆಯನ್ನು ಮಾಡಿದ ಪ್ರಕರಣಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ಒಂದು ವಾರದ ಹಿಂದೆ 64 ಉಪ ವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳು ವರದಿಯನ್ನು ಪರಿಶೀಲನಾ ಸಮಿತಿಗೆ ಸಲ್ಲಿಸಿದ್ದಾರೆ.
ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ಸಂಶಯಾಸ್ಪದ ನಮೂದುಗಳಿವೆ ?
ವಲಯಗಳು | ಅನುಮಾನಾಸ್ವದ ನಮೂದುಗಳು ಪತ್ತೆ |
ಬೊಮ್ಮನಹಳ್ಳಿ | 4,008 |
ರಾಜರಾಜೇಶ್ವರಿ ನಗರ | 3,666 |
ಮಹದೇವಪುರ | 925 |
ಯಲಹಂಕ | 540 |
ಬೆಂಗಳೂರು ಪೂರ್ವ | 453 |
ಬೆಂಗಳೂರು ಪಶ್ಚಿಮ | 139 |
ದಾಸರಹಳ್ಳಿ | 4 |
ಬೆಂಗಳೂರು ದಕ್ಷಿಣ | 1 |
ಒಟ್ಟು | 9,736 |
ಬಿಬಿಎಂಪಿಯ 8 ವಲಯಗಳ ಪೈಕಿ ಬೊಮ್ಮನಹಳ್ಳಿ ವಲಯದಲ್ಲೇ ಅತಿಹೆಚ್ಚು ಅಂದರೆ 4,008 ‘ಎ’- ಖಾತಾ ರಿಜಿಸ್ಟರ್ ನಲ್ಲಿ ಬೋಗಸ್ ಎಂಟ್ರಿಗಳನ್ನು ಮಾಡಿ ‘ಎ’ ಖಾತಾ ಮಾಡಿಕೊಟ್ಟಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ. ಅದು ಬಿಟ್ಟರೆ ಪಾಲಿಕೆ ಹೊಸ ವಲಯಗಳಲ್ಲೊಂದಾದ ರಾಜರಾಜೇಶ್ವರಿ ನಗರದಲ್ಲಿ ಬರೋಬ್ಬರಿ 3,666 ‘ಎ’- ಖಾತಾ ರಿಜಿಸ್ಟರ್ ನಲ್ಲಿ ಸಂಶಯಾತ್ಮಕ ನಮೂದುಗಳು ಕಂಡು ಬಂದಿದೆ. ಉಳಿದಂತೆ ಮಹದೇವಪುರದಲ್ಲಿ 925, ಯಲಹಂಕದಲ್ಲಿ 540, ಬೆಂಗಳೂರು ಪೂರ್ವದಲ್ಲಿ 453, ಪಶ್ಚಿಮ ವಲಯದಲ್ಲಿ 139, ದಾಸರಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಕಡಿಮೆ ಅಂದರೆ 4 ಮತ್ತು 1 ಬೋಗಸ್ ಎ ಖಾತಾಗಳಿವೆ ಎಂದು ಪರಿಶೀಲನಾ ಸಮಿತಿಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರಿಶೀಲನಾ ಸಮಿತಿ ಅಧ್ಯಕ್ಷರೂ, ಹಾಗೂ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಆಗಿರುವ ಜಯರಾಮ್ ರಾಯಪುರೆ ವಲಯ ಆಯುಕ್ತರಾಗಿರುವ ಬೆಂಗಳೂರು ದಕ್ಷಿಣ ವಲಯದಲ್ಲಿ ಕೇವಲ ಒಂದೇ ಒಂದು ಬೋಗಸ್ ಖಾತೆಯಿದೆ ಎಂಬ ವಿಷಯವೇ ಆಶ್ಚರ್ಯ ಮತ್ತು ಅನುಮಾನ ಮೂಡಿಸುವಂತಿದೆ.
ಬೇಲಿಯೇ ಎದ್ದು ಹೊಲ ಮೇಯ್ದವರಿಂದ ವರದಿ ಪಡೆಯುವುದು ಎಷ್ಟು ಸರಿ? :
ಕಂದಾಯ ಇಲಾಖೆಯ ಎರ್ ಆರ್ ಒ ಹಂತದ ಅಧಿಕಾರಿಗಳು ಸಾಮಾನ್ಯವಾಗಿ ‘ಬಿ’ ಖಾತೆ ವಿತರಿಸಲು ಅಲ್ಲದೆ ಆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರವಿದೆ. ಅಲ್ಲದೆ ಕಂದಾಯ ವಿಭಾಗದಡಿಯಲ್ಲಿ ಕೆಲವು ಅಧಿಕಾರಿ ಸಿಬ್ಬಂದಿ ಮಧ್ಯವರ್ಥಿಗಳ ಜೊತೆಗೂಡಿ ಅಕ್ರಮವಾಗಿ ಬಿ ಖಾತಾಗಳನ್ನು ಎ ಖಾತಾ ಮಾಡಿಕೊಡಲು ಸಾಧ್ಯವಾಗಿರುವಾಗ, ಕಂದಾಯ ವಿಭಾಗದಲ್ಲಿನ ಅದೇ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪರಿಶೀಲನಾ ಸಮಿತಿಯು ಬಳಸಿಕೊಂಡು ಅವರ ಕೈಯ್ಯಿಂದಲೇ ಪ್ರಾಮಾಣಿಕವಾದ ವರದಿಯನ್ನು ಪಡೆಯುವುದೇ ಒಂದು ರೀತಿ ಹಾಸ್ಯಾಸ್ಪದ ರೀತಿಯದ್ದಾಗಿದೆ ಎಂಬ ಅಭಿಪ್ರಾಯಗಳು ನಾಗರೀಕ ವಲಯದಿಂದ ವ್ಯಕ್ತವಾಗಿವೆ.
ಒಟ್ಟಾರೆ 8 ವಲಯಗಳ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಬೋಗಸ್ ಎ ಖಾತಾಗಳ ಆಸ್ತಿ ಮಾಲೀಕರಿಗೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡಲಿದ್ದು, ಬಳಿಕ ಆ ಖಾತೆಗಳನ್ನು ಪುನಃ ‘ಬಿ’ ಖಾತಾಗಳಾಗಿ ಮಾಡಲು ಕ್ರಮ ಕೈಗೊಳ್ಳಲಿದ್ದು, ಲಕ್ಷಾಂತರ ರೂಪಾಯಿ ಲಂಚ, ಅಕ್ರಮ ಮಾರ್ಗ ನೀಡಿ ‘ಎ’ ಖಾತಾ ಪಡೆದುಕೊಂಡವರಿಗೆ ಸಂಕಷ್ಟ ಎದುರಾಗಿದೆ. ಇದಲ್ಲದೆ ‘ಎ’ ಖಾತಾ ಮಾಡಿಕೊಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆಯೂ ಕಾನೂನು ಕ್ರಮದ ತೂಗುಗತ್ತಿ ಸಾಧ್ಯತೆಯಿದೆ.
2007ಕ್ಕೆ ಮೊದಲು ‘ಬಿ’ ಖಾತೆ ಎಂಬುದಿರಲಿಲ್ಲ :
ನಗರದಲ್ಲಿ ಒಟ್ಟಾರೆ 19 ಲಕ್ಷ ಆಸ್ತಿಗಳು ಬಿಬಿಎಂಪಿಯ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದೆ. ಆ ಪೈಕಿ ‘ಬಿ’ ಖಾತೆಗಳಿರುವ 6.16 ಲಕ್ಷ ಆಸ್ತಿಗಳಿವೆ. ಅಸಲಿಗೆ 2007ಕ್ಕಿಂತ ಮೊದಲು ನಗರದಲ್ಲಿ ‘ಬಿ’ ಖಾತೆ ಎನ್ನುವ ಪರಿಪಾಠವೇ ಇರಲಿಲ್ಲ. ಅಷ್ಟರವರೆಗೆ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಎಲ್ಲ ಆಸ್ತಿಗಳಿಗೂ ‘ಎ’ ಖಾತಾ ನೀಡಲಾಗುತ್ತಿತ್ತು. ಯಾವಾಗ ಬಿಎಂಪಿಯು ಬಿಬಿಎಂಪಿ ಆಯಿತೋ, ಈ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಿಗಳಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಸದೆಯೇ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಹೆಚ್ಚಾಯಿತು. ಇದರಿಂದ ಅವೈಜ್ಞಾನಿಕವಾಗಿ ಎಲ್ಲೆಡೆ ಅನಧಿಕೃತ ಬಡಾವಣೆಗಳು ತಲೆ ಎತ್ತಿದವು. ಹೀಗಾಗಿ ಬಿಬಿಎಂಪಿಗೆ ಆದಾಯವೂ ಖೋತಾ ಆಗಿತ್ತು.
2006ರಲ್ಲಿ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಭೂಪರಿವರ್ತನೆಯಾಗದ ನಿವೇಶನಗಳಿಗೆ ‘ಎ’ ಖಾತಾ ನೀಡಬಾರದೆಂದು ಸುಗ್ರೀವಾಜ್ಞೆ ಹೊರಡಿಸಲಾಯಿತು. ಆನಂತರ ಕೇವಲ ತೆರಿಗೆ ಸಂಗ್ರಹಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆಯೇ ನಿರ್ಮಿಸಿರುವ ಬಡಾವಣೆಗಳಲ್ಲಿನ ನಿವೇಶನಗಳು, ಭೂಪರಿವರ್ತನೆ ಮಾಡದೆ ಕಟ್ಟಡ ನಿರ್ಮಿಸಿರುವ ನಿವೇಶನಗಳನ್ನು ಬಿ-ವಹಿಯಲ್ಲಿ ದಾಖಲಿಸುವ ಪದ್ಧತಿ ಆರಂಭವಾಯಿತು. ಇದು ಒಂದು ರೀತಿ ‘ಬಿ’ ಖಾತೆ ಹೊಂದಿರುವ ಆಸ್ತಿ ಮಾಲೀಕರಿಗೆ ನುಂಗಲಾರದ ತುತ್ತಾಯಿತು. ಅಲ್ಲಿಂದ 18 ವರ್ಷ ಆಗುತ್ತಾ ಬಂತು ಈತಕ ರಾಜ್ಯ ಸರ್ಕಾರದ ಕಂದಾಯ ಕಾಯಿದೆಗೆ ತಿದ್ದುಪಡಿ ತಂದಿರದ ಕಾರಣ ಲಕ್ಷಾಂತರ ಆಸ್ತಿ ಮಾಲೀಕರು ಇನ್ನು ಸಮಸ್ಯೆಯ ಸುಳಿಯಲ್ಲಿ ನರಳುತ್ತಿದ್ದಾರೆ.
‘ಬಿ’ ಖಾತಾ ಇದ್ದರೆ ಸಮಸ್ಯೆ ಏನು? :
2007ಕ್ಕಿಂತ ಮೊದಲು ನಗರದಲ್ಲಿ ‘ಬಿ’ ಖಾತಾ ವ್ಯವಸ್ಥೆಯೇ ಜಾರಿಯಲ್ಲಿರಲಿಲ್ಲ. ಅಲ್ಲಿಯವರೆಗೆ ‘ಬಿ’ ಖಾತಾ ಸ್ವತ್ತುಗಳಲ್ಲಿ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಗುವುದಿಲ್ಲ. ಈ ಆಸ್ತಿಗಳ ಮಾರಾಟದ ಸಂದರ್ಭದಲ್ಲೂ ಸೂಕ್ತ ಬೆಲೆ ಸಿಗುವುದಿಲ್ಲ. ಇದಿಷ್ಟೇ ಅಲ್ಲ, ಕಾನೂನಿನ ಪ್ರಕಾರ ನಕ್ಷೆ ಮಂಜೂರಾತಿ, ಒಸಿ, ಸಿಸಿ ನೀಡಲು ಅವಕಾಶವಿಲ್ಲ. ಆದ್ದರಿಂದ, ಮನೆ ಕಟ್ಟಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗದೆ ಆಸ್ತಿ ಮಾಲೀಕರು ಈಗಲೂ ಪರದಾಡುತ್ತಿದ್ದಾರೆ. ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಪಡೆದು, ತೊಂದರೆಗೆ ಸಿಲುಕಿದ್ದಾರೆ.
ಇಂತಹವರಲ್ಲಿ ಕೆಲವರು ತಮ್ಮ ಆಸ್ತಿಗಳನ್ನು ‘ಎ’ ಖಾತಾಗಳನ್ನು ಮಾಡಲು ವಾಮ ಮಾರ್ಗದಲ್ಲಿ ಮಧ್ಯವರ್ತಿಗಳು ಹಾಗೂ ಬಿಬಿಎಂಪಿಯ ಕಂದಾಯ ವಿಭಾಗದ ಭ್ರಷ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಶುರುಮಾಡಲು ಹುಟ್ಟಿಕೊಂಡಿದ್ದೇ ಬೋಗಸ್ ‘ಎ’ ಖಾತಾ ನಮೂದುಗಳು.
ಅಕ್ರಮ ‘ಎ’ ವಹಿಗೆ ನಮೂದುಗಳು ಹೇಗಾಗುತ್ತದೆ? :
ಬೆಂಗಳೂರು ಮಹಾನಗರ ಪಾಲಿಕೆಗೆ 110 ಹಳ್ಳಿಗಳು, 7 ನಗರ ಸಭೆ ಹಾಗೂ ಒಂದು ಪುರಸಭೆ ಸೇರ್ಪಡೆಯಾಗಿ 2007ರಲ್ಲಿ ಬಿಬಿಎಂಪಿಯಾದ ಬಳಿಕ ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಯಲಹಂಕ ವಲಯಗಳಲ್ಲಿ ‘ಬಿ’ ಖಾತೆಯನ್ನು ಅಕ್ರಮ ಮಾರ್ಗಗಳಿಂದ ‘ಎ’ ಖಾತೆಯನ್ನಾಗಿ ಮಾಡುವ ಪ್ರಕರಣಗಳು ಹಿಂದಿನಿಂದಲೂ ತೆರೆಮರೆಯಲ್ಲಿ ನಡೆದುಕೊಂಡು ಬರುತ್ತಲೇ ಇದೆ. ಹಳೆಯ ನಗರಸಭೆ, ಪುರಸಭೆ ಹಾಗೂ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕಂದಾಯ ಕಟ್ಟಿಸಿಕೊಳ್ಳಲು ಒಂದೊಂದು ಕಡೆ ಒಂದೊಂದು ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಂದಾಯ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ದುಷ್ಟಕೂಟ, ವಾಮ ಮಾರ್ಗದಿಂದ ಪಾಲಿಕೆಯ ‘ಎ’ ವಹಿಯಲ್ಲಿ ಅಕ್ರಮವಾಗಿ ಹೊಸದಾಗಿ ಸಾವಿರಾರು ಆಸ್ತಿಗಳ ವಿವರವನ್ನು ನಮೂದು ಮಾಡುತ್ತಾ ಲಕ್ಷಾಂತರ ರೂಪಾಯಿ ಸಂಪಾದಿಸಿಕೊಳ್ಳುತ್ತಾ ಬಂದಿದ್ದಾರೆ.
ವಿಶೇಷವೆಂದರೆ ಈ “ಎ” ವಹಿಯಲ್ಲಿ ದಿನಾಂಕ ನಮೂದು ಮಾಡುವ ಪದ್ಧತಿಯಿರದ ಕಾರಣ ನಗರದಾದ್ಯಂತ ಹಲವು ವಲಯಗಳಲ್ಲಿ ಅದರಲ್ಲೂ ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ವಲಯಗಳಲ್ಲಿ ಈಗಲೂ ಬಿ- ಖಾತಾ ಆಸ್ತಿಗಳನ್ನು ಎ-ಖಾತಾ ಅಥವಾ ವಹಿಗಳಲ್ಲಿ ನಮೂದು ಮಾಡುವ ಪರಿಪಾಠವಿದೆ. ಈ ಎಲ್ಲಾ ಎಂಟ್ರಿಗಳನ್ನು ನಗರದಾದ್ಯಂತ ಎಲ್ಲಾ ವಲಯಗಳಲ್ಲೂ ಕಂಪ್ಯೂಟರೀಕರಣಕ್ಕೆ ಒಳಪಡಿಸಿ, ಅಲ್ಲಿಂದ ಕಂಪ್ಯೂಟರೀಕೃತ ಪ್ರತಿ ನೀಡುವ ಕ್ರಮ ಜಾರಿ ಮಾಡದಿದ್ದರೆ, ಬೋಗಸ್ ಎ ಖಾತೆ ಮಾಡುವ ಪರಿಪಾಠ ನಿಲ್ಲುವುದಿಲ್ಲ ಎನ್ನುತ್ತಾರೆ ಪಾಲಿಕೆ ಅಧಿಕಾರಿಯೊಬ್ಬರು.
ಅಕ್ರಮ-ಸಕ್ರಮ ‘ಎ’ ಖಾತಾ ಮತ್ತು ‘ಬಿ’ ಖಾತಾ ಗೂ ಸಂಬಂಧವಿಲ್ಲ :
‘ಬಿ ಖಾತಾ ಆಸ್ತಿಗಳಿಗೆ ‘ಎ’ ಖಾತಾ ನೀಡುವುದಕ್ಕೂ ಅಕ್ರಮ-ಸಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಕಟ್ಟಡ ಬೈಲಾ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳೂ ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ. ‘ಎ’ ಖಾತಾ ನಿವೇಶನದಲ್ಲಿ ನಿಯಮ ಉಲ್ಲಂಸಿ ಕಟ್ಟಡ ನಿರ್ಮಿಸಿದ್ದರೂ, ಅದು ಅಕ್ರಮ ಕಟ್ಟಡ ಎನಿಸಿಕೊಳ್ಳುತ್ತದೆ. ಕೆಎಂಸಿ ಕಾಯಿದೆಯಂತೆ ತೆರಿಗೆ ಸಂಗ್ರಹಕ್ಕಷ್ಟೆ ನಮೂನೆ ‘ಎ’ ಮತ್ತು ನಮೂನೆ ‘ಬಿ’ ನಲ್ಲಿ ನಿರ್ವಹಿಸಲಾಗುತ್ತಿದೆ. ಇವು ಚರಾಸ್ತಿ ದಾಖಲೆಗಳೇ ಹೊರತು, ಹಕ್ಕಿಗೆ ಸಂಬಂಧಪಟ್ಟ ದಾಖಲೆಗಳಲ್ಲ. ಹಾಗಾಗಿ, ‘ಬಿ’ ಖಾತಾಗಳಲ್ಲಿನ ಆಸ್ತಿಗಳಿಗೂ ಸುಧಾರಣಾ ವೆಚ್ಚ ಪಾವತಿಸಿಕೊಂಡು ಅವುಗಳನ್ನು ‘ಎ’ ನಮೂನೆಯಲ್ಲಿ ನೋಂದಣಿ ಮಾಡಲು 2022ರಲ್ಲಿ ಆಗಿನ ಮುಖ್ಯಕಾರ್ಯದರ್ಶಿ ರವಿಕುಮಾರ್ ತೀರ್ಮಾನಿಸಿದ್ದರು. ಬಿಬಿಎಂಪಿಯ ಕೇಂದ್ರ ಭಾಗದಲ್ಲಿ ಪ್ರತಿ ಚ.ಮೀ ವಿಸ್ತೀರ್ಣದ ನಿವೇಶನಕ್ಕೆ 200 ರೂ. ಹಾಗೂ ಹೊರವಲಯದಲ್ಲಿ 250 ರೂ. ಸುಧಾರಣಾ ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿತ್ತು. ಈ ಆಸ್ತಿಗಳಿಗೆ ‘ಎ’ ಖಾತಾ ನೀಡುವುದರಿಂದ ಪಾಲಿಕೆಗೆ ಅಂದಾಜು 2 ಸಾವಿರ ಕೋಟಿ ರೂ. ಆದಾಯ ಹರಿದು ಬರುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಈ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಅದನ್ನು ಜಾರಿಗೊಳಿಸಲು ಈಗಲೂ ಸಾಧ್ಯವಾಗಿಲ್ಲ.
ಖಾತೆ ಎಂದರೇನು? ಇದರಿಂದಾಗುವ ಅನುಕೂಲಗಳೇನು? :
ತೆರಿಗೆ ಸಂಗ್ರಹಕ್ಕೆ ಪ್ರತಿ ಆಸ್ತಿಗೆ ಸಂಬಂಧಿಸಿದಂತೆ ಈ ಖಾತೆಯನ್ನು ತೆರೆಯಲಾಗುತ್ತದೆ. ಕೆಎಂಸಿ ಕಾಯಿದೆಯಲ್ಲಿ ಖಾತೆ ಎನ್ನುವ ಪದಕ್ಕೆ ಯಾವುದೇ ವ್ಯಾಖ್ಯಾನ ಇಲ್ಲವೇ ವಿವರಣೆ ನೀಡಿಲ್ಲ. ಆದರೆ, ಕಟ್ಟಡ ಯೋಜನೆಯನ್ನು ಮಂಜೂರು ಮಾಡಲು ಖಾತಾ ದಾಖಲೆಯೂ ಅಗತ್ಯ ಎಂಬ ನಿಯಮ ರೂಪಿಸಲಾಗಿದೆ. ಆಸ್ತಿಯ ಮಾಲೀಕರು, ಅದರ ವಿಸ್ತೀರ್ಣ, ಸ್ಥಳ, ಆಸ್ತಿ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ಅದು ಒಳಗೊಂಡಿರುತ್ತದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಪರವಾನಗಿಗೆ ಅರ್ಜಿ ಸಲ್ಲಿಸಲು, ವಿದ್ಯುತ್, ನೀರಿನ ಸಂಪರ್ಕ ಪಡೆಯಲು, ಆಸ್ತಿ ಮಾರಾಟ ಮಾಡಲು. ಹೀಗೆ ಹಲವು ಉದ್ದೇಶಗಳಿಗೆ ಖಾತಾ ದಾಖಲೆ ಅಗತ್ಯವಾಗಿದೆ.
ಸಾಮಾಜಿಕ ಕಾರ್ಯಕರ್ತರೇನು ಏನು ಹೇಳ್ತಾರೆ? :
“ಅಕ್ರಮವಾಗಿ ‘ಬಿ’ ಖಾತೆಯ ಆಸ್ತಿಯನ್ನು ಅಕ್ರಮವಾಗಿ ’ಎ’ ಮಾಡಿಕೊಟ್ಟ ಅಧಿಕಾರಿಗಳನ್ನೇ ಬೋಗಸ್ ಖಾತೆ ಪತ್ತೆ ಹಚ್ಚಲು ನೇಮಿಸಿ “ಬಿಬಿಎಂಪಿಯ ಪರಿಶೀಲನಾ ಸಮಿತಿ”ಯು ಅವರಿಂದ ವರದಿ ಪಡೆದಿರುವುದು ಹೇಗಿದೆಯೆಂದರೆ, ಕಳ್ಳರೇ ಕಳ್ಳ ರಿಪೋರ್ಟ್ ಕೊಟ್ಟಂತೆ. ಅಧಿಕಾರಿಗಳು ಜನರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು, ಇದೀಗ ಅವರ ವಿರುದ್ಧವೇ ವರದಿ ಕೊಟ್ಟಿರುವುದಿರಂದ ಅಂತಹ ಆಸ್ತಿ ಮಾಲೀಕರು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟದಂತಾಗಿದೆ. ಇದೀಗ ಇಂತಹ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ ಅಕ್ರಮ ಎ ಖಾತೆ, ಬಿ ಖಾತೆ ಮಾಡಿದಂತೆ, ತಪ್ಪಿತಸ್ಥ ಕಂದಾಯ ಅಧಿಕಾರಿಗಳಿಗೆ ಕೇವಲ ನೋಟಿಸ್ ನೀಡಿ ಕ್ರಮ ಕೈಗೊಳ್ಳುವ ಬದಲು ಅಂತಹ ಅಧಿಕಾರಿಗಳ ವಿರುದ್ಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಸಬೇಕು. ಇದಕ್ಕೆ ಬಾಧಿತ ನಾಗರೀಕರು ತನಿಖೆಗೆ ಸಹಕಾರ ನೀಡಬೇಕು. ಆಗ ತಪ್ಪಿತಸ್ತ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯಾಗಲು ಸಾಧ್ಯವಾಗಲಿದೆ.”
– ಎಸ್.ಅಮರೇಶ್, ಸಾಮಾಜಿಕ ಕಾರ್ಯಕರ್ತರು
ಎಆರ್ ಒಗಳು ನೀಡಿದ ಮಾಹಿತಿಯ ಬಗ್ಗೆ ಪುನರ್ ಪರಿಶೀಲನೆ :
“ಬಿಬಿಎಂಪಿಯ ಪರಿಶೀಲನಾ ಸಮಿತಿಗೆ 64 ಉಪ ವಿಭಾಗಗಳ ಎಆರ್ ಒಗಳು ನೀಡಿದ ವರದಿಯು ಸಂಪೂರ್ಣವಿಲ್ಲ ಎಂಬ ಅನುಮಾನದ ಹಿನ್ನಲೆಯಲ್ಲಿ, ಅವರುಗಳು ನೀಡಿದ ವರದಿಯನ್ನು ಸಂಪೂರ್ಣವಾಗಿ ಪುನರ್ ಪರಿಶೀಲನೆಗೆ ಒಳಪಡಿಸಲಿದ್ದೇವೆ. ಅಲ್ಲದೆ 9,736 ಅಕ್ರಮ ಖಾತೆಗಳನ್ನು ಬಿ ಖಾತೆಗೆ ಮಾಡಲು ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅನುಮಾನಾಸ್ಪದವಾಗಿ ಎ ವಹಿಯಲ್ಲಿ ದಾಖಲು ಮಾಡಲಾದ ನಮೂದುಗಳನ್ನು ಪರಿಶೀಲಿಸುವ ಪ್ರಕ್ರಿಯೆ ಮುಂದುವರೆಸಲಿದ್ದೇವೆ.”
– ಜಯರಾಮ್ ರಾಯಪುರ, ಪರಿಶೀಲನಾ ಸಮಿತಿ ಅಧ್ಯಕ್ಷರು ಮತ್ತು ಹಣಕಾಸು ವಿಭಾಗದ ವಿಶೇಷ ಆಯುಕ್ತ, ಬಿಬಿಎಂಪಿ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.