ಬೆಂಗಳೂರು, ಮಾ.24 www.bengaluruwire.com : ರಾಜ್ಯದಲ್ಲಿ ಈ ಆರ್ಥಿಕ ವರ್ಷದಲ್ಲಿ ಫೆಬ್ರವರಿವರೆಗೆ ಬರೋಬ್ಬರಿ 81.72 ಕೋಟಿ ಲೀ. ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಮದ್ಯಪ್ರಿಯರು ಅತಿಹೆಚ್ಚು ಮದ್ಯ ಖರೀದಿಸಿದ ಕಾರಣ ರಾಜ್ಯ ಸರ್ಕಾರದ ಆದಾಯವೂ ಹೆಚ್ಚಾಗಿದೆ. 11 ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಗೆ ಬರೋಬ್ಬರಿ 27,032 ಕೋಟಿ ರೂ. ರಾಜಸ್ವ ಹರಿದು ಬಂದಿದೆ. ಇಲಾಖೆಯ ಉನ್ನತ ಮೂಲದ ಮಾಹಿತಿ ಪ್ರಕಾರ ಮಾರ್ಚ್ ತಿಂಗಳ 23ರ ವರೆಗೆ ಇಲಾಖೆಗೆ 29,000 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಈ ಮಾಸಾಂತ್ಯದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ರಾಜ್ಯ ಸರ್ಕಾರವು ಈ ಹಿಂದೆ ನೀಡಿದ ವಾರ್ಷಿಕ 29,000 ಕೋಟಿ ರೂ.ಗಳ ಗುರಿಯನ್ನು ಅಬಕಾರಿ ಇಲಾಖೆ ತಲುಪಿದಂತಾಗಿದೆ. ಆದರೆ ಪರಿಷ್ಕೃತ ಗುರಿ 32,000 ಕೋಟಿ ರೂ.ನಷ್ಟು ರಾಜಸ್ವ ಸಂಗ್ರಹವಾಗುವುದು ಬಹುತೇಕ ಅನುಮಾನವಾಗಿದೆ. ರಾಜ್ಯದಲ್ಲಿ ತೈಲ ಬೆಲೆ, ದೈನಂದಿನ ಧವಸ ಧಾನ್ಯಗಳ ರೇಟ್, ಗ್ಯಾಸ್ ಹೀಗೆ ಎಲ್ಲಾ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಆದರೆ ಈ ಬೆಲೆ ಏರಿಕೆ ಇದ್ಯಾವುದೂ ಮದ್ಯ ಮಾರಾಟಕ್ಕೆ ತೊಂದರೆಯಾಗಿಲ್ಲ. 2022ರ ಏಪ್ರಿಲ್ ನಿಂದ 2023ರ ಫೆಬ್ರವರಿಗಿನ ಅವಧಿಯಲ್ಲಿ 54.78 ಕೋಟಿ ಲೀ. ಭಾರತೀಯ ತಯಾರಿತ ಮದ್ಯ (IML – ಐಎಂಎಲ್) ಹಾಗೂ 26.94 ಕೋಟಿ ಲೀ. ಬಿಯರ್ ಭರ್ಜರಿ ಮಾರಾಟವಾಗಿ ಅಬಕಾರಿ ಇಲಾಖೆಗೆ ಉತ್ತಮ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯದ ಮಾರಾಟದಲ್ಲಿ ಶೇ.13.94ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ. ಅಂದರೆ ಇಲಾಖೆ ಆದಾಯ ಹೆಚ್ಚಾಗಿರುವುದು ಕಂಡು ಬಂದಿದೆ. ಐಎಮ್ಎಲ್ ಮದ್ಯವಿರುವ ಒಂದು ರಟ್ಟಿನ ಬಾಕ್ಸ್ ನಲ್ಲಿ 8.64 ಲೀ. ಮದ್ಯವಿದ್ದರೆ, ಒಂದು ಬಿಯರ್ ರಟ್ಟಿನ ಬಾಕ್ಸ್ ನಲ್ಲಿ 7.8 ಲೀ. ಮದ್ಯವಿರುತ್ತದೆ.
ಕಳೆದ ವರ್ಷಕ್ಕಿಂತ 3307.44 ಕೋಟಿ ರೂ. ಹೆಚ್ಚುವರಿ ಸಂಗ್ರಹ :
2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 32,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದೆ. ಆದರೆ 2023ರ ಫೆಬ್ರವರಿ ವರೆಗೆ ಅಬಕಾರಿ ಇಲಾಖೆಯು 27,032 ಕೋಟಿ ರೂ.ನಷ್ಟು ರಾಜಸ್ವವನ್ನು ಸಂಗ್ರಹಿಸಿದೆ. 2021-22ನೇ ಸಾಲಿಗೆ ಹೋಲಿಸಿದರೆ ರಾಜಸ್ವ ಸಂಗ್ರಹದಲ್ಲಿ 3307.44 ಕೋಟಿ ರೂ. ನಷ್ಟು ಹೆಚ್ಚುವರಿಯಾಗಿ ಇಲಾಖೆಗೆ ಆದಾಯ ಬಂದಿದೆ.
ಗುಂಡು ಪ್ರಿಯರು ಈ 11 ತಿಂಗಳಲ್ಲಿ 54.78 ಕೋಟಿ ಲೀಟರ್ (596.50 ಲಕ್ಷ ರಟ್ಟಿನ ಬಾಕ್ಸ್) ನಷ್ಟು ಭಾರತೀಯ ತಯಾರಿತ ಮದ್ಯ (ಐಎಮ್ ಎಲ್)ವನ್ನು ಖರೀದಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 37.54 ಲಕ್ಷದಷ್ಟು ಹೆಚ್ಚಿನ ಬಾಕ್ಸ್ ಮದ್ಯ ಮಾರಾಟವಾಗಿದೆ. ಇನ್ನು ವಿವಿಧ ಬ್ರಾಂಡ್ ಗಳ ಬಿಯರ್ ಖರೀದಿಗೆ ರಾಜ್ಯದಲ್ಲಿನ ಹೆಚ್ಚಿನ ಒಲವು ತೋರಿದ್ದಾರೆ. 2022-23ನೇ ಸಾಲಿನ ಏಪ್ರಿಲ್ ನಿಂದ ಫೆಬ್ರವರಿವರೆಗಿನ 11 ತಿಂಗಳಲ್ಲಿ 26.95 ಕೋಟಿ ಲೀ. ಬಿಯರ್ (345.48 ಲಕ್ಷ ರಟ್ಟಿನ ಬಾಕ್ಸ್) ಮಾರಾಟವಾಗಿದೆ. ಇದು 2021-22ರ ವರ್ಷದಲ್ಲಿ ಇದೇ ಅವಧಿಯಲ್ಲಿ ಕೇವಲ 17.97 ಕೋಟಿ ಲೀ.ನಷ್ಟು ಬಿಯರ್ (230.46 ಲಕ್ಷ ರಟ್ಟಿನ ಬಾಕ್ಸ್) ಮಾರಾಟವಾಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ 8.97 ಕೋಟಿ ಲೀ. ಬಿಯರ್ ಹೆಚ್ಚುವರಿಯಾಗಿ ಮಾರಾಟವಾಗಿದೆ.
ಬಿಯರ್ ಮಾರಾಟದಲ್ಲಿ ಶೇ.49.91ರಷ್ಟು ಏರಿಕೆ :
ಕರೋನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಜನವರಿ ತಿಂಗಳಿನಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಆರ್ಥಿಕ ಸಂಪನ್ಮೂಲ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದೇ ಹಾದಿಯಲ್ಲಿ ಅಬಕಾರಿ ಇಲಾಖೆಯೂ ಸಾಗುತ್ತಿದೆ. ಕಳೆದ ವರ್ಷದ ಏಪ್ರಿಲ್ ನಿಂದ 2023ರ ಫೆಬ್ರವರಿವರೆಗಿನ ಹನ್ನೊಂದು ತಿಂಗಳಿನಲ್ಲಿ ವಿವಿಧ ಬ್ರಾಂಡ್ ಗಳ ಐಎಂಎಲ್ ಮದ್ಯ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಬಿಯರ್ ಗೆ ಮದ್ಯಪ್ರಿಯರು ಹೆಚ್ಚು ಒತ್ತು ನೀಡಿರುವುದು ಕಂಡು ಬಂದಿದೆ. ಬಿಯರ್ ಮಾರಾಟ ಹೋದ ವರ್ಷಕ್ಕೆ ಹೋಲಿಸಿದರೆ ಈ 11 ತಿಂಗಳಿನಲ್ಲಿ ಶೇ.49.91ರಷ್ಟು ಹೆಚ್ಚಾಗಿದೆ. ಇನ್ನು ಭಾರತೀಯ ತಯಾರಿತ ಮದ್ಯ ಮಾರಾಟವು ಶೇ.6.29ರಷ್ಟು ಮಾತ್ರ ಏರಿಕೆ ದಾಖಲಿಸಿದೆ.
ಅಕ್ರಮ ಮದ್ಯ ಹಂಚಿಕೆಗೆ ಚುನಾವಣಾ ಆಯೋಗದ ಕಡಿವಾಣ?:
ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಮತದಾರರನ್ನು ತಮ್ಮ ಸೆಳೆಯಲು ಆಸೆ, ಆಮೀಷವೊಡ್ಡಲು ಅಕ್ರಮವಾಗಿ ಮದ್ಯ ಖರೀದಿ ಹಾಗೂ ಇತರ ಅನ್ಯ ಮಾರ್ಗಗಳಿಂದ ನಕಲಿ ಮದ್ಯವನ್ನು ಹಂಚುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ವಿಚಕ್ಷಣಾ ತಂಡಗಳನ್ನು ಈಗಾಗಲೇ ಸಿದ್ಧಪಡಿಸಿದ್ದು, ಅಕ್ರಮವಾಗಿ ಮದ್ಯ ಹಂಚುವಿಕೆಗೆ ಕಡಿವಾಣ ಹಾಕಲು ಆಯೋಗದ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.