ಬೆಂಗಳೂರು, ಫೆ.13 www.bengaluruwire.com : ಯಲಹಂಕ ಏರ್ ಫೋರ್ಸ್ ಸ್ಟೇಷನ್ ಸುತ್ತಲಿನ ಬಾನಂಗಳ ಗುಡುಗು, ಸಿಡಿಲಿನ ಆರ್ಭಟದಂತೆ ಲೋಹದ ಹಕ್ಕಿಗಳು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಅಬ್ಬರಿಸಲು ಆರಂಭಿಸಿವೆ.
ರಾಜಧಾನಿಯ 14ನೇ ಆವೃತ್ತಿಯ ಏರೊ ಇಂಡಿಯಾ 2023ರ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಚಾಲನೆ ನೀಡಿದರು.
ಈ ಮೂಲಕ ಐದು ದಿನಗಳ ಕಾಲ ದೇಶ ವಿದೇಶಗಳ ಯುದ್ಧ ವಿಮಾನಗಳ ಹಾರಾಟ, ಯುದ್ಧೋಪಕರಣ ಹಾಗೂ ಶಸ್ತ್ರಾಸ್ತ್ರಗಳ ಪ್ರದರ್ಶನ, ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದ ವಿಚಾರ ಸಂಕಿರಣ, ರಕ್ಷಣಾ ಸಚಿವರ ಸಭೆ ಮತ್ತಿತರ ಕಾರ್ಯಕ್ರಮಗಳಿಗೆ ರಾಜಧಾನಿ ಸಾಕ್ಷಿಯಾಗಲಿದೆ.
ಮೊದಲಿಗೆ ಫ್ಲೈಪಾಸ್ಟ್ ರಚನೆಯ ಮಾದರಿಯಲ್ಲಿ ಭಾರತದ ಬಾವುಟ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ವಾಯುಪಡೆ ಹಾಗೂ ಏರ್ ಶೋ ಬಾವುಟವನ್ನು ಹೊತ್ತ ಮೂರು ಎಂಐ17 ಹೆಲಿಕಾಪ್ಟರ್ ಗಳು ಆಕಾಶದಲ್ಲಿ ಹಾರುತ್ತ ಏರ್ ಶೋ ಪ್ರಧಾನ ವೇದಿಕೆ ಮುಂಭಾಗ ಹಾರಿಬಂದರೆ ಹಿನ್ನಲೆಯಲ್ಲಿ ಮೂರು ಸೂರ್ಯಕಿರಣ್ ವಿಮಾನಗಳು ತ್ರಿವರ್ಣ ಧ್ವಜದ ಬಣ್ಣದ ಹೊಗೆಯನ್ನು ಸೂಸಿ, ನೀಲಾಕಾಶದಲ್ಲಿ ಭಾರತದ ಬಾವುಟದ ಚಿತ್ತಾರವನ್ನು ಮೂಡಿಸಿದವು.
ಬಳಿಕ ಸ್ವದೇಶಿ ನಿರ್ಮಿತ 15 ಹೆಲಿಕಾಪ್ಟರ್ ಗಳು ಹಾರಾಟ ನಡೆಸಿ ಆತ್ಮನಿರ್ಭರ್ ಭಾರತ ಪರಿಕಲ್ಪನೆ ಹಿನ್ನಲೆಯಲ್ಲಿ ದೇಶದ ರಕ್ಷಣಾ ಸಾಮರ್ಥ್ಯವನ್ನು ವಿಶ್ವಕ್ಕೆ ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋರಿಸಿದವು. ಎಚ್ ಎಎಲ್ (HAL) ನ ಸ್ವದೇಶಿ ನಿರ್ಮಿತ 7 ತರಬೇತಿ ವಿಮಾನಗಳಾದ ಎಲ್ ಸಿಎ ಎಸ್ ಪಿಟಿ ಏರ್ ಕ್ರಾಫ್ಟ್, ಎರಡು ಎಚ್ ಟಿಟಿ ವಿಮಾನಗಳು, ಎರಡು ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್, ಹಾಕ್-ಐ, ಹಿಂದೂಸ್ಥಾನ್ 228 ಏರ್ ಕ್ರಾಫ್ಟ್ ಗುರುಕುಲ ಫಾರ್ಮೇಶನ್ ನಲ್ಲಿ ವೀಕ್ಷಕರ ಮುಂಭಾಗ 500 ಅಡಿ ಎತ್ತರದಲ್ಲಿ 12 ಗಂಟೆಯ ಆಕಾರದಲ್ಲಿ ಹಾರಿ ಮನರಂಜಿಸಿದವು.
ಇನ್ನು ಬಾಣದ ಮುಂಭಾಗದ ಆಕಾರದಲ್ಲಿ ನೇತ್ರ ಫಾರ್ಮೇಶನ್ ಮೂಲಕ ಎಂಬ್ರಾಯರ್-145 (AEW&C), ಎರಡು ಸುಖೋಯ್ 30 ಎಂಕೆಐ ಹಾಗೂ ಎರಡು ಮಿಗ್ 29 ಯುದ್ಧ ವಿಮಾನಗಳು ಹಾರಾಡಿದಾಗ ಕಾರ್ಯಕ್ರಮದಲ್ಲಿ ಅಗಸದತ್ತ ನೋಟ ನೆಟ್ಟವರು ಪುಳಕಿತರಾದರು. ಮೂರು ಸುಖೋಯ್-30 ಯುದ್ಧ ವಿಮಾನ ಡಯಾಸ್ ನಲ್ಲಿ ಕೂತವರು ಕೂತಿದ್ದರೆ, ಹಿಂಭಾಗದಿಂದ ಆಕಾಶದಲ್ಲಿ ವೇಗವಾಗಿ ಸಂಚರಿಸಿ ಬಾನಿನಲ್ಲಿ ಶಿವನ ತ್ರಿಶೂಲದಂತೆ ಹೊಗೆ ಉಗುಳಿ ನೋಡುಗರನ್ನು ಬೆರಗುಗೊಳಿಸಿತು.
ಶುಭ್ರ ತಿಳಿ ಬಣ್ಣದ ಆಗಸದಿಂದ ವಂಚಿತ ಪ್ರೇಕ್ಷಕ :
ಇನ್ನು ಉದ್ಘಾಟನಾ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ಯುದ್ಧ ವಿಮಾನ, 9 ಸೂರ್ಯಕಿರಣ್ ವಿಮಾನಗಳು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಸಿ17 ಗ್ಲೋಬಲ್ ಮಾಸ್ಟರ್ ಜೊತೆ ಗಾಂಭೀರ್ಯ ಸೂರ್ಯಕಿರಣ ವಿಮಾನವು ಸಾಗಿತು. ಬೇರೆ ದಿನಗಳಿಗಿಂತ ಸೋಮವಾರ ಆಗಸವು ಸ್ವಲ್ಪ ಮಟ್ಟಿಗೆ ಮೋಡದಿಂದ ಕೂಡಿದ ಕಾರಣ ಶುಭ್ರ ಆಕಾಶವಿರಲಿಲ್ಲ. ಹೀಗಾಗಿ ಯುದ್ಧ ವಿಮಾನಗಳು ಪ್ರಧಾನ ವೇದಿಕೆಯ ಬಳಿ ಪ್ರದರ್ಶಿಸಿದ ಕೆಲವು ವೈಮಾನಿಕ ಕಸರತ್ತುಗಳು ವೀಕ್ಷಕರಿಗೆ ಸರಿಯಾಗಿ ಗೋಚರಿಸಲಿಲ್ಲ.
2021ರ ಏರ್ ಶೋಗಿಂತ ದೊಡ್ಡ ಪ್ರಮಾಣದ ಏರ್ ಶೋ :
ಕರೋನಾ ಸೋಂಕಿನ ಬಳಿಕ ನಡೆಯುತ್ತಿರುವ ಪೂರ್ಣ ಪ್ರಮಾಣ ಏರ್ ಶೋ ಇದಾಗಿದ್ದು, 2021ರಲ್ಲಿ ನಡೆದ ಏರ್ ಶೋಗಿಂತ ಈ ಬಾರಿಯ ವೈಮಾನಿಕ ಪ್ರದರ್ಶನ ಸಾಕಷ್ಟು ವಿಭಿನ್ನ ಹಾಗೂ ದೊಡ್ಡ ರೀತಿಯಲ್ಲಿ ನಡೆಯಲಿದೆ. “ದಿ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟಿಸ್” (ಶತಕೋಟಿ ಅವಕಾಶದ ಹಾದಿ) ಎಂಬ ಪರಿಕಲ್ಪನೆಯಲ್ಲಿ ಈ ಬಾರಿಯ ಏರ್ ಶೋ ಆಯೋಜಿಸಲಾಗಿದೆ. ಹಿಂದೆ 55 ರಾಷ್ಟ್ರಗಳು ಈಗ 98 ದೇಶಗಳು ಏರೊ ಇಂಡಿಯಾದಲ್ಲಿ ಭಾಗಿಯಾಗುತ್ತಿದೆ. ರಕ್ಷಣಾ ಇಲಾಖೆಯು ಆಯೋಜಿಸಿರುವ ಬಂಧನ್ ಒಡಂಬಡಿಕೆ ಕಾರ್ಯಕ್ರಮದಲ್ಲಿ ಕಳೆದ ಸಲ 201 ಎಂಒಯು ನಡೆದಿದ್ದರೆ ಈ ಸಲ ವಿವಿಧ ಯುದ್ಧ ಸಾಮಗ್ರಿ ತಯಾರಿಕೆಗೆ ಸಂಬಂಧಿಸಿದಂತೆ 75 ಸಾವಿರ ಕೋಟಿ ರೂ. ಮೌಲ್ಯದ 251 ಒಡಂಬಡಿಕೆಗಳು ನಡೆಯಲಿವೆ.
ಕಳೆದ ಕೆಲವು ವರ್ಷಗಳಿಂದ ಯಲಹಂಕ ವಾಯುನೆಲೆಯಲ್ಲಿ ಆತ್ಮನಿರ್ಭರ್ ಭಾರತ್ ಹಿನ್ನಲೆಯಲ್ಲಿ ಏರ್ ಶೋ ಆಯೋಜಿಸಲಾಗುತ್ತಿದೆ.
2021ರಲ್ಲಿ ಯಲಹಂಕ ವಾಯುನೆಲೆಯ ಪ್ರದರ್ಶನ ಪ್ರದೇಶ 23 ಸಾವಿರ ಚದರ ಮೀಟರ್ ಇದ್ದರೆ ಈ ಬಾರಿ 35 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಪ್ರದರ್ಶನ ನಡೆಯಲಿದೆ. ಹಿಂದೆ 64 ವೈಮಾನಿಕ ಹಾರಾಟಗಳಿದ್ದರೆ, ಈ ಬಾರಿ 67 ಏರ್ ಡಿಸ್ಪ್ಲೇ ಇರಲಿದೆ. ಕಳೆದ ಬಾರಿ 19 ಸ್ಥಿರ ಪ್ರದರ್ಶನಗಳಿದ್ದರೆ ಈ ಬಾರಿ 36 ಸ್ಥಿರ ಪ್ರದರ್ಶನವಿರಲಿದೆ. 600 ಪ್ರದರ್ಶಕರು 2021ರಲ್ಲಿ ಭಾಗವಹಿಸಿದ್ದರೆ ಈ ಬಾರಿ ಬರೋಬ್ಬರಿ 809 ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ.
ಮೊದಲ ದಿನ ಉದ್ಘಾಟನಾ ದಿನವಾದ್ದರಿಂದ ಬ್ಯುಸಿನೆಸ್ ಪಾಸ್ ಹೊಂದಿದವರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ವಿವಿಧ ದೇಶಗಳ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಏರ್ ಶೋನಲ್ಲಿ ಪಾಲ್ಗೊಂಡಿದ್ದರು.