ಬೆಂಗಳೂರು, ಜ.2 www.bengaluruwire.com : ವೈಕುಂಠ ಏಕಾದಶಿಯ ಪ್ರಯುಕ್ತ ಸೋಮವಾರ ನಗರದಲ್ಲಿರುವ ಮಲ್ಲೇಶ್ವರ ಟಿಟಿಡಿ, ಇಸ್ಕಾನ್ ಸೇರಿದಂತೆ ನಾನಾ ವೆಂಕಟೇಶ್ವರ ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಜನರು ಮಾರುದ್ದ ಸರತಿ ಸಾಲಿನಲ್ಲಿ ನಿಂತು ಭಗವಾನ್ ಮಹಾವಿಷ್ಣುವಿನ ದರ್ಶನ ಮಾಡಿ ಶ್ರೀದೇವರನ್ನು ಕಣ್ತುಂಬಿಕೊಂಡರು.
ಮಾರ್ಗಶಿರ್ಷ ತಿಂಗಳ ಶುಕ್ಲ ಪಕ್ಷದ ಏಕಾದಶಿಯನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಹಿಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹೀಗಾಗಿ ಇಂದಿನ ದಿನ ಬ್ರಾಹ್ಮೀ ಮುಹೂರ್ತದಲ್ಲಿ ವೆಂಕಟೇಶ್ವರನ ದರ್ಶನ ಮಾಡಲು ಬೆಳಗ್ಗೆ 3 ಗಂಟೆಯಿಂದಲೇ ನಗರದ ಹಲವು ದೇವಸ್ಥಾನಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಹಿಂದಿನ ಎರಡು ವರ್ಷಗಳಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡಿದ ಕಾರಣಕ್ಕೆ ವೈಕುಂಠ ಏಕಾದಶಿಯಂದು ಭಕ್ತರ ಸಂಖ್ಯೆ ಸಾಕಷ್ಟು ಕಡಿಮೆಯಿತ್ತು. ಆದರೆ ಈ ಬಾರಿ ಹಲವು ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಸಡಗರದಿಂದ ದೇವರ ದರ್ಶನಕ್ಕೆ ಕಾತುರರಾಗಿ ಕಾಯುತ್ತಿದ್ದರು.
ವೈಕುಂಠ ಏಕಾದಶಿಯ ಹಿನ್ನಲೆಯಲ್ಲಿ ಮಲ್ಲೇಶ್ವರದಲ್ಲಿರುವ ಟಿಟಿಡಿ ವೆಂಕಟೇಶ್ವರನ ದೇವಸ್ಥಾನದಲ್ಲಿ ವೇದಪಾರಾಯಣ, ನಾದಸ್ವರ, ವಿಷ್ಣುಸಹಸ್ರ ಪಾರಾಯಣ, ಸಂಗೀತ, ಭಜನೆ, ಹರಿಕಥೆ, ಭರತನಾಟ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ಇಸ್ಕಾನ್ ನಲ್ಲಿನ ಶ್ರೀನಿವಾಸ ಗೋವಿಂದ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ದಿನದಂದು ಬೆಳಗ್ಗೆ 3 ಗಂಟೆಯಿಂದಲೇ ಗೋವಿಂದನಿಗೆ ಸುಪ್ರಭಾತ ಸೇವೆ, ಮಂಗಳಾರತಿ, ಬೆಳಗಿನ ಜಾವ 3.45ರಿಂದ 5 ಗಂಟೆಯವರೆಗೆ ಶ್ರೀನಿವಾಸ ಗೋವಿಂದ ಅಭಿಷೇಕ, 5 ರಿಂದ 5.45ರ ತನಕ ಲಕ್ಷ್ಮಿನಾರಾಯಣ ಅಲಂಕಾರ ಮಾಡಿದ ಉತ್ಸವ ಮೂರ್ತಿಯನ್ನು ವೈಕುಂಠ ದ್ವಾರದ ತನಕ ಮೆರವಣಿಗೆಯನ್ನು ಕೊಂಡೊಯ್ಯಲಾಗಿತ್ತು. ಆನಂತರ ವೈಕುಂಠ ದ್ವಾರ ಕಾರ್ಯಕ್ರಮಗಳು ಜರುಗಿದವು.
ವೈಕುಂಠದ ಸ್ವರ್ಗದ ಬಾಗಿಲು ತೆಗೆಯುವ ದಿನವಾದ ವೈಕುಂಠ ಏಕಾದಶಿಯ ದಿನದಂದು ಉಪವಾಸ ಮಾಡಿ, ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಬಲವಾದ ನಂಬಿಕೆ ಹಿಂದುಗಳಲ್ಲಿದೆ. ವೈಕುಂಠ ಏಕಾದಶಿಯ ದಿನ ಬಾಲಾಜಿಯ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರಗೆ ಬರುವುದರಿಂದ ಏಳು ಜನ್ಮದಲ್ಲಿ ಮಾಡಿದ ಪಾಪಗಳೂ ಪರಿಹಾರವಾಗುತ್ತದೆ. ಅಲ್ಲದೇ, ಈ ದಿನ ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ಭಕ್ತರು ತಮ್ಮ ತಲೆಯನ್ನು ತಾಕಿಸಿ ಬರುತ್ತಾರೆ. ಇದಕ್ಕೆ ಕಾರಣ ತಮಗೆ ಸಾಕಷ್ಟು ಒಳಿತಾಗುತ್ತದೆ ಎಂದು ಹೇಳುತ್ತಾರೆ ಪುರೋಹಿತರು. ವೈಕುಂಠ ಏಕಾದಶಿ ದಿನದಂದು ಶ್ರೀ ಮನ್ ಮಹಾವಿಷ್ಣು ತನ್ನ ಗರುಡ ವಾಹನದ ಮೇಲೆ ಕೂತು ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ಪ್ರತೀತಿಯಿದೆ.
ಬೆಂಗಳೂರಿನಲ್ಲಿ ವೈಕುಂಠ ಏಕಾದಶಿ ದಿನವಾದ ಸೋಮವಾರ ಪದ್ಮನಾಭ ನಗರದಲ್ಲಿರುವ ದೇವಗಿರಿ ದೇವಸ್ಥಾನ, ಕೆ.ಆರ್.ಮಾರ್ಕೇಟ್ ಬಳಿಯಿರುವ ಕೋಟೆ ವೆಂಕಟರಮಣ ದೇವಸ್ಥಾನ, ಶ್ರೀನಗರದಲ್ಲಿರುವ ವೆಂಕಟೇಶ್ವರನ ದೇವಸ್ಥಾನ, ಕೆಂಗೇರಿ ಉಪನಗರದ ಗಣೇಶ ದೇವಸ್ಥಾನದಲ್ಲಿನ ವೆಂಕಟೇಶ್ವರ ಸೇರಿದಂತೆ ನಾನಾ ದೇವಸ್ಥಾನಗಳಲ್ಲಿ ಶ್ರೀಮನ್ ಮಹಾವಿಷ್ಣುವಿನ ಮೂರ್ತಿಗೆ ವೈಭದ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಇನ್ನು ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಜ.2ರ ವೈಕುಂಠ ಏಕಾದಶಿಯ ದಿನದಿಂದು ಬೆಳಗಿನ ಜಾವ 1.30ರಿಂದಲೇ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ವ ದರ್ಶನ ಟಿಕೇಟ್ ಪಡೆದುಕೊಂಡವರಿಗೆ ವೈಕುಂಠ ದ್ವಾರ ದರ್ಶನಕ್ಕೆ ವಿಶೇಷ ಅವಕಾಶ ಒದಗಿಸಲಾಗಿದೆ. ಜ.11ರ ವರೆಗೆ ಈ ವಿಶೇಷ ದರ್ಶನ ವ್ಯವಸ್ಥೆಯನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (TTD) ಆಯೋಜನೆ ಮಾಡಿದೆ.