ಹಾಲಿವುಡ್ ಅಡ್ವಿಂಚರ್ ಸಿನಿಮಾಗಳಲ್ಲಿ ಅಪರಿಚಿತರು ಸಮುದ್ರದ ದ್ವೀಪದಲ್ಲಿ ಸಿಲುಕಿಕೊಂಡಾಗ ಅಲ್ಲಿನ ಕಾಡು ಜನರು ತಮ್ಮ ಸ್ವಯಂರಕ್ಷಣೆಗಾಗಿ ಹೊರಗಿನಿಂದ ಬಂದವರನ್ನು ಹಿಡಿದು ಕಟ್ಟಿಹಾಕಿ ಚಿತ್ರಹಿಂಸೆ ನೀಡುವುದನ್ನು ಅಥವಾ ಅತಿಥ್ಯ ನೀಡಿ ಕಳುಹಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಆಸ್ಟ್ರೇಲಿಯನ್ ಯೂಟ್ಯೂಬರ್, ನಿಜ ಜೀವನದಲ್ಲಿ ಅಂತಹ ಸಾಹಸ ಮಾಡಿ ತಮಗಾದ ಅನುಭವವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಯುಟ್ಯೂಬರ್ ಬ್ರೋಡಿ ಮಾಸ್, ಇತ್ತೀಚೆಗೆ ಆಸ್ಟ್ರೇಲಿಯಾದ ಹೊರಗಿರುವ ಉತ್ತರ ವನವಾಟುವಿನ ದ್ವೀಪ ಸಮೂಹದಲ್ಲಿನ ‘ಮರೆತುಹೋದ ದ್ವೀಪಗಳಿಗೆ’ ಬೋಟ್ ಬಳಸಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಬೋಟ್ ನಿಂದ ಇಳಿದ ಕೂಡಲೇ ಸ್ಥಳೀಯ ದ್ವೀಪದ ಬುಡಕಟ್ಟು ಜನಾಂಗದವರು ಬಿಲ್ಲು – ಬಾಣ, ಕೋಲುಗಳನ್ನು ಹಿಡಿದು ಗುಂಪು ಗುಂಪಾಗಿ ಇವರತ್ತ ಓಡಿಬಂದಿದ್ದರು. ಈ ವಿಡಿಯೋವನ್ನು ಉತ್ತರ ವನವಾಟುವಿನ ದ್ವೀಪ ಸಮೂಹದ ಪೈಕಿ ಕ್ವಾಕಿಯಾ ದ್ವೀಪದಲ್ಲಿ ಚಿತ್ರೀಕರಿಸಲಾಗಿದೆ.
ವನವಾಟು ದ್ವೀಪದ ಸಮುದ್ರ ತೀರದಿಂದ ಕ್ವಾಕಿಯಾ ಎಂಬ ನಿಗೂಢ ಮತ್ತು ಅಭೇದ್ಯ ದ್ವೀಪಕ್ಕೆ ದೋಣಿಯಲ್ಲಿ ಹೊರಡುವ ಮುನ್ನ ಬ್ರೋಡಿ ಮಾಸ್ ವಿಡಿಯೋ ಮಾಡಿದ್ದು, “ನಾವು ವನವಾಟುವಿನ ಉತ್ತರದ ದ್ವೀಪದ ಗುಂಪಿನಲ್ಲಿದ್ದೇನೆ, ಇಲ್ಲಿ ಯಾವುದೇ ಅಂಗಡಿಗಳಿಲ್ಲ, ಯಾವುದೇ ಸ್ವಾಗತವಿಲ್ಲ, ಮತ್ತು ನಾವು ಸಮುದ್ರ ಅಥವಾ ಭೂಮಿಯಿಂದ ಹಿಡಿಯಬಹುದಾದ ಎಲ್ಲವನ್ನೂ ನಾವು ತಿನ್ನುತ್ತೇವೆ” ಎಂದು ಅವರು ಹೇಳುತ್ತಾರೆ.
5.39 ನಿಮಿಷದ ವಿಡಿಯೋವನ್ನು YouTube ನಲ್ಲಿ ಅಪಲೋಡ್ ಮಾಡಿದ 11 ದಿನಗಳಲ್ಲಿ 3.2 ದಶಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ 6,127 ಜನರು ಕಮೆಂಟ್ ಮಾಡಿದ್ದಾರೆ.
ಸಮಾಜದ ಮುಖ್ಯ ವಾಹಿನಿಯಲ್ಲಿರುವ ಮನುಷ್ಯರು ಭೇಟಿ ನೀಡದ ಈ ಕ್ವಾಕಿಯಾ ದ್ವೀಪಕ್ಕೆ ಬೋಟಿನಲ್ಲಿ ಬಂದಿಳಿದಾಗ ಮೈಪೂರ್ತಿ ಕಪ್ಪು ಬಣ್ಣ ಬಳಿದುಕೊಂಡ ಅಲ್ಲಿನ ಕಾಡಿನ ಬುಡಕಟ್ಟು ಜನರು ತಮ್ಮ ಸಾಂಪ್ರದಾಯಿಕ ವೇಷದಲ್ಲಿ ಗುಂಪಾಗಿ ಬಂದು ಬ್ರೋಡಿಮಾಸ್ ಅವರನ್ನು ತಾವಿರುವ ತಾಣಕ್ಕೆ ಎಳೆದೊಯ್ಯುವ ದೃಶ್ಯವು ಸೆರೆಹಿಡಿಯಲಾಗಿದೆ. ಅಂತಿಮವಾಗಿ ಆ ಬುಡಕಟ್ಟು ಸಮುದಾಯ ಹಿರಿಯರು ಇವರನ್ನು ಆತ್ಮೀಯವಾಗಿ ಆಮಂತ್ರಿಸಿ ತಮ್ಮ ವಿಶಿಷ್ಠ ಸಂಸ್ಕೃತಿಯಂತೆ ನೃತ್ಯ ಮಾಡಿ ಸತ್ಕರಿಸುವುದನ್ನು ಕಂಡು ಯುಟ್ಯೂಬರ್ ಬ್ರೋಡಿ ಮಾಸ್ ಪುಳಕಿತಗೊಳ್ಳುತ್ತಾರೆ. ಅವರೂ ಆ ಜನರೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸುತ್ತಾರೆ.
ಈ ವಿಡಿಯೋವನ್ನು ಪ್ರಾರಂಭದಲ್ಲಿ ಕಂಡ ಹಲವರು ಬ್ರೋಡಿ ಮಾಸ್ ಅವರನ್ನು ಬುಡಕಟ್ಟು ಜನಾಂಗದವರು ಸಾಯಿಸಲು ಕೊಂಡೊಯ್ಯುತ್ತಿದ್ದಾರೋ ಅಥವಾ ತಮ್ಮ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆದೊಯ್ಯುತ್ತಿದ್ದಾರೋ ಎಂದು ಗೊಂದಲಕ್ಕೊಳಗಾಗಿ ಕೆಲವರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಯೂಟ್ಯೂಬರ್ ಬ್ರೋಡಿ ಮಾಸ್ ಪ್ರಾಚೀನ ಬುಡಕಟ್ಟು ಜನಾಂಗದವರೊಂದಿಗಿನ ಭೇಟಿಯನ್ನು ‘ತಮ್ಮ ಜೀವನದಲ್ಲಿಯೇ ಇದೊಂದು ಅತ್ಯಂತ ವಿಶಿಷ್ಟ ಕಾಡಿನ ಅನುಭವವಾಗಿದೆ’ ಎಂದು ಹೇಳಿದ್ದಾರೆ.