ಬೆಂಗಳೂರು, ಡಿ.5 www.bengaluruwire.com : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಪಶ್ಚಿಮ ವಲಯದ ವಾಹನ ಸವಾರರಿಗೆ ಅಗತ್ಯವಾಗಿದ್ದ ನಗರದ ಪಾದರಾಯನಪುರ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ರವರು ತಿಳಿಸಿದರು.
ಪಾದರಾಯನಪುರ ಮುಖ್ಯ ರಸ್ತೆ ಅಗಲೀಕರಣ ಕುರಿತಂತೆ ಇಂದು ವಿಧಾನಸೌಧದ 3ನೇ ಮಹಡಿಯ ಸಮಿತಿ ಕೊಠಡಿ-313ರಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರ್ಸಿ ವೃತ್ತ(ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆ)ದಿಂದ ವಿಜಯನಗರ ಪೈಪ್ ಲೈನ್ ವರೆಗೆ ಒಟ್ಟು 1.8 ಕಿ.ಮೀ ಉದ್ದದ ಪಾದರಾಯನಪುರ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡುವ ಸಲುವಾಗಿ ಪಾಲಿಕೆಯ ಅಭಿಯಂತರರು, ನಗರ ಯೋಜನೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಗಳ ಜೊತೆ ಸಭೆ ನಡೆಸಲಾಯಿತು ಎಂದು ಹೇಳಿದರು.
ಪಾದರಾಯನಪುರ ರಸ್ತೆ ಅಗಲೀಕರಣದಲ್ಲಿ ಯಾವುದೇ ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ. ರಸ್ತೆ ಅಗಲೀಕರಣ ಮಾಡುವ ವಿಚಾರವಾಗಿ 2017ರಲ್ಲಿ ಟಿಡಿಆರ್ ನೀಡಲು ಸ್ಥಳೀಯರಲ್ಲಿ ಒಪ್ಪಿಸಲಾಗಿತ್ತು. ಆದರೆ ಟಿಡಿಆರ್ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸುಪ್ರೀಂ ಕೋರ್ಟ್ ನ ಸೂಚನೆಯ ಮೇರೆಗೆ ಪ್ರಸ್ತುತವಿರುವ ದರದಂತೆ ಸ್ಥಳೀಯರಿಗೆ ಪರಿಹಾರದ ಮೊತ್ತವನ್ನು ನೀಡಲಾಗುವುದು ಎಂದರು.
ಬಡ ವರ್ಗದ ಜನ ವಾಸಿಸುವ ಸ್ಥಳದಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾದರೆ ಹಾಗೂ ನಾಗರಿಕತೆಯನ್ನು ಹೆಚ್ಚಿನ ಮಟ್ಟಕ್ಕೆ ಕೊಂಡಯ್ಯಬೇಕಾದರೆ ರಸ್ತೆಗಳು ಹಾಗೂ ಮೂಲಭೂತಸೌಕರ್ಯ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪಾದರಾಯನಪುರ ರಸ್ತೆ ಅಗಲೀಕರಣ ಮಾಡಿದಲ್ಲಿ ಸ್ಥಳೀಯ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗಲಿದೆ. ಇದರಿಂದ ಚಾಮರಾಜಪೇಟೆ, ವಿಜಯನಗರ ಹಾಗೂ ಗೋವಿಂದರಾಜನಗರದ ಸುತ್ತಮುತ್ತಲಿನ ಜನಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಒಂದು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣ:
ಪಾದರಾಯನಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಲಾಗುವುದು. ಆ ಬಳಿಕ ಖಾಸಗಿ ಸ್ವತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಹಂತ-ಹಂತವಾಗಿ ನೀಡಲಾಗುವುದು ಎಂದು ಹೇಳಿದರು.
ರಸ್ತೆ ಅಗಲೀಕರಣದ ವಿವರ:
ಚಾಮರಾಜಪೇಟೆ ವ್ಯಾಪ್ತಿಯ ಸಿರ್ಸಿ ವೃತ್ತ(ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆ)ದಿಂದ ವಿಜಯನಗರ ಪೈಪ್ ಲೈನ್ ವರೆಗೆ ಒಟ್ಟು 1.8 ಕಿ.ಮೀ ಉದ್ದದ ಪಾದರಾಯನಪುರ ಮುಖ್ಯ ರಸ್ತೆಯನ್ನು 24 ಮೀಟರ್ ಗೆ ಅಗಲೀಕರಣ ಮಾಡುವ ಸಲುವಾಗಿ ಒಟ್ಟಾರೆ 1,63,190 ಚ.ಅಡಿ ಜಾಗದ ಅವಶ್ಯಕತೆಯಿದೆ. ಅದರಲ್ಲಿ 1,13,875 ಚ.ಅಡಿ(ಸುಮಾರು 140 ಆಸ್ತಿಗಳು) ಖಾಸಗಿ ಸ್ವತ್ತುಗಳು ಬರಲಿದ್ದು, ಅದಕ್ಕಾಗಿ 140 ಕೋಟಿ ರೂ. ಪರಿಹಾರ ನೀಡಬೇಕಿದೆ. ಉಳಿದಂತೆ ಬಿಬಿಎಂಪಿ, ಕೆಪಿಟಿಸಿಎಲ್, ಜಲಮಂಡಳಿ, ಪೊಲೀಸ್ ಇಲಾಖೆಯ ಸರ್ಕಾರಿ ಜಾಗವಿದ್ದು, ರಸ್ತೆ ಅಗಲೀಕರಣಕ್ಕೆ ಸುಮಾರು 240 ಕೋಟಿ ರೂ. ವೆಚ್ಚವಾಗಲಿದೆ.
ರಸ್ತೆ ಮಾರ್ಗದಲ್ಲಿ 1 ರೈಲ್ವೆ ಒವರ್ ಬ್ರಿಡ್ಜ್, 1 ರಾಜಕಾಲುವೆ ಬ್ರಿಡ್ಜ್ ಹಾಗೂ 2 ಕಲ್ವರ್ಟ್ ಗಳು ಬರಲಿವೆ. ರಸ್ತೆಯ ಎರಡೂ ಬದಿ 1.50 ಮೀಟರ್ ಮಳೆ ನೀರು ಕಾಲುವೆ ಹಾಗೂ 2.50 ಮೀಟರ್ ಪಾದಚಾರಿ ಮಾರ್ಗ ಬರಲಿದ್ದು, ಸಮಗ್ರವಾಗಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ.
ಸಭೆಯಲ್ಲಿ ಸ್ಥಳೀಯ ಶಾಸಕರಾದ ಜಮೀರ್ ಅಹ್ಮದ್ ಖಾನ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಪಾಲಿಕೆಯ ಅಭಿಯಂತರರು, ನಗರ ಯೋಜನೆ ವಿಭಾಗದ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.