ಉಡುಪಿ, ಡಿ.1 www.bengaluruwire.com : ಗಣಿ ಮತ್ತು ವಿಜ್ಞಾನ ಇಲಾಖೆ (Mines And Geology Department) ಯ ಸಾಕಷ್ಟು ಕಠಿಣ ಕಾನೂನು ಜಾರಿಯಲ್ಲಿದ್ದಗ್ಯೂ ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಕಾರಿಕೆ ಹಲವು ಕಡೆ ನಡೆಯುತ್ತಿದೆ. ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಪಡುಕೆರೆಯಲ್ಲಿ ಅಕ್ರಮ ಗಣಿಕಾರಿಕೆ ವಿರುದ್ಧ ಗ್ರಾಮಸ್ಥರು ಬುಧವಾರ ತಿರುಗಿ ಬಿದ್ದಿದ್ದಾರೆ.
ಕೋಟತಟ್ಟು ಗ್ರಾಮದ ಸರ್ವೆ ನಂಬರ್ 211/8 ರಲ್ಲಿ ಸತ್ಯನಾರಾಯಣ ಬಾಸ್ರಿ ಮತ್ತು ಸಹೋದರರಿಗೆ ಸೇರಿದ ಸುಮಾರು ಒಂದೂವರೆ ಎಕರೆ ಜಾಗದಲ್ಲಿದ್ದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆಲಮಟ್ಟದಿಂದ 18 ಅಡಿ ಆಳದವರೆಗೆ ಅನಧಿಕೃತವಾಗಿ ಮರಳು ತೆಗೆದು ಕೆಂಪು ಮಣ್ಣನ್ನು ತಂದು ಆ ಆಳದ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡುತ್ತಿದ್ದಾರೆ.
ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಗಾಲದಲ್ಲಿ ಬಾವಿಯ ನೀರು ಕಲುಷಿತವಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಹಾಗೂ ಕೋಟ ಪೊಲೀಸ್ ಠಾಣೆಗೆ ಈ ಬಗ್ಗೆ ಗ್ರಾಮಸ್ಥರು ಲಿಖಿತ ದೂರು ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇಲ್ಲಿಂದ ಅಕ್ರಮವಾಗಿ ಮರಳನ್ನು ತೆಗೆದು ಲಾರಿಯ ಮುಖಾಂತರ ಕುಂದಾಪುರದ ಕುಂಭಾಷಿ ಬಳಿಯ ಕೊರಾಡಿಗೆ ಕಾನೂನು ಬಾಹಿರವಾಗಿ ಮರಳು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಆ ಜಾಗದ ಮಾಲೀಕರಿಗೆ ಅಕ್ರಮವಾಗಿ ಮರಳು ತೆಗೆಯದಂತೆ ಗ್ರಾಮಸ್ಥರು ತಿಳಿಹೇಳಿದ್ದರು. ಆದರೂ ಕೆಲವು ದಿನ ಮರಳು ತೆಗೆಯುವುದನ್ನು ನಿಲ್ಲಿಸಿ ಪುನಃ ಮರಳು ಬಗೆದು ಸಾಗಿಸುವುದನ್ನು ಮುಂದುವರೆಸಿದ್ದರು. ಹಾಗಾಗಿ ಈ ಬಗ್ಗೆ ತಹಸೀಲ್ದಾರ್ ಕಚೇರಿಗೆ ದೂರು ನೀಡಿದ್ದೇವೆ ಎಂದು ಸ್ಥಳೀಯರಾದ ರಾಮ ಬಂಗೇರ ‘ಬೆಂಗಳೂರು ವೈರ್’ ಗೆ ತಿಳಿಸಿದ್ದಾರೆ.
ಪ್ರತಿ ಲೋಡಿನ ಈ ಮರಳಿಗೆ ಮಾರುಕಟ್ಟೆಯಲ್ಲಿ 45 ಸಾವಿರ ರೂ.ಗಳನ್ನು ಬ್ರೋಕರ್ ಗಳಿಸುತ್ತಿದ್ದ. ಆದರೆ ಜಾಗದ ಮಾಲೀಕರಿಗೆ ಪ್ರತಿ ಲೋಡಿಗೆ 8 ಸಾವಿರ ರೂ. ಹಣವನ್ನು ನೀಡುತ್ತಿದ್ದರು. ಮರಳು ತೆಗೆದ ಜಾಗದಲ್ಲಿ ಹೊರಗಿನಿಂದ ಕೆಂಪು ಮಣ್ಣನ್ನು ತಂದು ತುಂಬುತ್ತಿದ್ದರು. ನೈಸರ್ಗಿಕವಾಗಿ ನೂರಾರು ವರ್ಷಗಳಿಂದ ನಿರ್ಮಾಣವಾಗಿರುವ ಮರಳಿನ ರಚನೆಗೆ ಅಕ್ರಮ ಮರಳು ಗಣಿಕಾರಿಕೆ ಕೊಡಲಿ ಪೆಟ್ಟು ನೀಡಿದೆ. ಮುಂದೆ ಇದರಿಂದಾಗಿ ನಮ್ಮ ಮನೆ ಸುತ್ತಮುತ್ತಲ ಜಾಗದಲ್ಲಿನ ಬಾವಿ ನೀರಿಗೆ ಸಂಚಕಾರ ಬಂದರೂ ಆಶ್ಚರ್ಯವಿಲ್ಲ ಎಂದು ಬಂಗೇರ ವಿವರಿಸಿದರು.
ಇಲ್ಲಿನ ಒಂದೂವರೆ ಎಕರೆ ಜಾಗದಲ್ಲಿದ್ದ ಮರಳು ಬಹಳ ನುಣುಪಾಗಿದ್ದು ಗಾಜು ತಯಾರಿಕೆ, ಪಿಂಗಾಣಿ ಸಾಮಗ್ರಿಗಳ ತಯಾರಿಕೆ ಅನುಕೂಲವಾಗಿತ್ತು. ಆದ ಕಾರಣ ಅಕ್ರಮವಾಗಿ ಇಲ್ಲಿದ್ದ ಬೆಲೆ ಬಾಳುವ ಮರಳನ್ನು ಸಾಗಿಸಲಾಗಿದೆ. ಸಮತಟ್ಟಾಗಿದ್ದ ಈ ಜಾಗದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ಮಣ್ಣು ಕುಸಿತ ಸಂಭವಿಸಿ ಈ ಭಾಗದಲ್ಲಿ ಓಡಾಟ ಕಷ್ಟವಾಗಿದೆ ಎಂದು ಮತ್ತೊಬ್ಬ ಗ್ರಾಮಸ್ಥರು ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ.
ಈ ಪ್ರಕರಣದ ಕುರಿತಂತೆ ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರ್ ಮೂರ್ತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜೊತೆಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ಮಾಡಿ ಕ್ರಮವಹಿಸಲು ತಿಳಿಸಿದ್ದಾಗಿ ‘ಬೆಂಗಳೂರು ವೈರ್’ ಪ್ರತಿಕ್ರಿಯೆ ನೀಡಿದ್ದಾರೆ.
ಪಡುಕೆರೆಯ ಈ ಪರಿಸರದಲ್ಲಿ ನವಿಲು, ಹಕ್ಕಿಪಕ್ಷಿಗಳು, ಸರೀಸೃಪಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಸ್ಥಳದಲ್ಲಿ ಏಕಾಏಕಿ ಮರಳು ಗಣಿಗಾರಿಕೆ ಪ್ರಾರಂಭವಾದ ಮೇಲೆ ಈ ಜೀವಿಗಳ ವಾಸಸ್ಥಾನಕ್ಕೂ ಕುತ್ತು ಬಂದಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಅನಧಿಕೃತ ಮರಳುಗಾರಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಅಶ್ವಿನಿಯವರನ್ನು ದೂರವಾಣಿ ಮುಖಾಂತರ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೂ, ಯಾವುದೇ ಪ್ರತಿಕ್ರಿಯೆ ನೀಡಲು ಲಭ್ಯರಾಗಿಲ್ಲ.
ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ವಿವರ :
ಸರ್ಕಾರದ ಅಂಕಿ- ಅಂಶಗಳ ಪ್ರಕಾರ, 2020-21ರಲ್ಲಿ 3,451 ಅಕ್ರಮ ಮರಳುಗಾರಿಕೆ ಪ್ರಕರಣಗಳು ದಾಖಲಾಗಿದ್ದರೆ, ಅದರ ಹಿಂದಿನ ವರ್ಷ 3,193 ಪ್ರಕರಣಗಳು ದಾಖಲಾಗಿವೆ. 2018-19ರಲ್ಲಿ 3,869 ಪ್ರಕರಣಗಳನ್ನು ಗುರುತಿಸಲಾಗಿದೆ. ಜನವರಿ ಮತ್ತು ಆಗಸ್ಟ್ 2021 ರ ನಡುವೆ ರಾಜ್ಯದಲ್ಲಿ 290 ಅಕ್ರಮ ಮರಳು ಸಾಗಣೆ ಪ್ರಕರಣಗಳು ಮತ್ತು 35 ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.