ಬೆಂಗಳೂರು, ನ.9 www.bengaluruwire.com : ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಮಿಸುತ್ತಿರುವ “Y” ಆಕಾರದ ಮೇಲ್ಸೇತುವೆ ಕಾರ್ಯ ಗಜಪ್ರಸವದಂತೆ ಎರಡು ವರ್ಷಗಳ ಬಳಿಕ 2023ರ ಜನವರಿಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.
ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ 390 ಮೀಟರ್ ಫ್ಲೈಓವರ್ ಸೇರಿದಂತೆ 520 ಮೀಟರ್ ಗ್ರೇಡ್ ಸಪರೇಟರ್ ಹಾಗೂ ಓಕಳಿಪುರ ನಿಂದ ರಾಜಾಜಿನಗರದ ಕಡೆಗೆ ಸಂಚರಿಸುವ 420 ಮೀಟರ್ ಕೆಳಸೇತುವೆ (Underpass) ಕಾಮಗಾರಿ 2019 ಏಪ್ರಿಲ್ ನಲ್ಲಿ ಪ್ರಾರಂಭವಾಗಿತ್ತು. 24-04-2020ಕ್ಕೆ ಮೇಲ್ಸೇತುವೆ ಹಾಗೂ ಕಳಸೇತುವೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು. ಆದರೆ ಎರಡು ವರ್ಷ ತಡವಾದರೂ 33 ಕೋಟಿ ರೂ. ಯೋಜನೆ ಸಮಯಕ್ಕೆ ಸರಿಯಾಗಿ ಮುಗಿದಿಲ್ಲ.
ಮಾಗಡಿ ರಸ್ತೆ (ಹಳೆಯ ಮೈಸೂರು ರಸ್ತೆ) ಮಿನರ್ವ ಮಿಲ್ ಬಳಿ ಬಿಬಿಎಂಪಿಯ ಗ್ರೇಡ್ ಸಪರೇಟರ್ ಕಾಮಗಾರಿ ಆರಂಭವಾದ ಮೇಲಿಂದ ಈ ರಸ್ತೆಯಿಂದ ಮೆಜಿಸ್ಟಿಕ್ ಹೋಗಬೇಕೆಂದರೆ ವಾಹನ ಸವಾರರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸುಜಾತ ಥಿಯೇಟರ್ ರಸ್ತೆಯಲ್ಲಿ ಸಂಚರಿಸಿ, ರಾಜಾಜಿನಗರ ಪ್ರವೇಶದ್ವಾರದ ಮೇಲ್ಭಾಗ ಯೂ ಟರ್ನ್ ಹೊಡೆದು ಓಕಳಿಪುರದ ಕಡೆಗೆ ಹೋಗಬೇಕಿತ್ತು. ಇದರಿಂದ ಒಂದೆರಡು ನಿಮಿಷದಲ್ಲಿ ಸಾಗಬೇಕಾದ ಹಾದಿ ವಾಹನ ದಟ್ಟಣೆ ಅವಧಿಯಲ್ಲಿ 5-10 ನಿಮಿಷದಿಂದ ಕಾಲುಗಂಟೆ ಆಗುತ್ತಿತ್ತು. ಇದರಿಂದ ವಾಹನ ಸವಾರರಂತೂ ಹೈರಾಣಾಗಿದ್ದಾರೆ. ಯಾವಗಪ್ಪಾ ಈ ಯೋಜನೆ ಪೂರ್ಣವಾಗುತ್ತೆ ಅಂತ ಕಾಯುತ್ತಿದ್ದವರಿಗೆ ಈ ವಿಷ್ಯ ಸ್ವಲ್ಪ ರಿಲೀಫ್ ನೀಡಿಲಿದೆ.
“ಮಿನರ್ವ ಮಿಲ್ ಬಳಿ ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ವರೆಗಿನ ವೈ ಜಂಕ್ಷನ್ ಕಾಮಗಾರಿ ಕೆಪಿಟಿಸಿಎಲ್, ಬೆಸ್ಕಾಂ ಹೆವಿ ವೋಲ್ಟೇಜ್ ಮಾರ್ಗ ಬದಲಾವಣೆ, ಕರೋನಾ ಸೋಂಕು, ಲಾಕ್ ಡೌನ್ ಮತ್ತಿತರ ಕಾರಣಾಂತರಗಳಿಂದ ವಿಳಂಬವಾಗಿದೆ ನಿಜ. 2016-17ರ ನಗರೋತ್ಥಾನ ಅನುದಾನದಡಿ 33 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಆದರೆ ಮುಂದಿನ ವರ್ಷ ಜನವರಿ 2023ರ ವೇಳೆಗೆ ಈ ಮೇಲ್ಸೇತುವೆ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.”
– ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ)
ಕಾಮಗಾರಿ ಆರಂಭವಾದಾಗ ಈ ಸ್ಥಳದಲ್ಲಿ ವಾಹನಗಳು ಗಂಟೆಗೆ 6 ಸಾವಿರ ಚಲಿಸುತ್ತಿದ್ದಿದ್ದು ಪ್ರಸ್ತುತ 10 ಸಾವಿರ ವಾಹನಗಳಿಗೆ ಏರಿಕೆಯಾಗಿದೆ. ಆದರೆ ವೈ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಮುಗಿದರೆ ಕೇವಲ ಮೂರು ನಿಮಿಷದಲ್ಲಿ ಓಕಳಿಪುರದ ಕಡೆಗೆ ಸಾಗಬಹುದು. ಪ್ರಸ್ತುತ ವೈ ಜಂಕ್ಷನ್ ಮೇಲ್ಸೇತುವೆಗೆ ಬಣ್ಣ ಬಳಿಯಲಾಗುತ್ತಿದ್ದು, ಡಾಂಬರ್ ಮತ್ತು ಎಲೆಕ್ಟ್ರಿಕ್ ಕೆಲಸಗಳು ಬಾಕಿಯಿದೆ ಎನ್ನುತ್ತಾರೆ ಬಿಬಿಎಂಪಿ ರಸ್ತೆ ವಿಭಾಗದ ಅಧಿಕಾರಿಗಳು.
ನಗರದಲ್ಲಿ ಪ್ರಥಮ ಬಾರಿಗೆ ಕ್ಲಿಷ್ಟಕರ ಎಂಜಿನಿಯರಿಂಗ್ ವಿನ್ಯಾಸದ 110 ಮೀ. ಕಾಂಕ್ರಿಟ್ ಸ್ಲಾಬ್ ನಿರ್ಮಾಣ :
ಬೆಂಗಳೂರಿನಲ್ಲೇ ಮೊದಲ ಬಾರಿಗೆ ವೈ ಜಂಕ್ಷನ್ ಮೇಲು ಸೇತುವೆಯಲ್ಲಿ 390 ಮೀಟರ್ ಉದ್ದದ ಮೇಲುಸೇತುವೆ (ಒಟ್ಟು ಫ್ಲೈಓವರ್ ಉದ್ದ 520 ಮೀ.)ಯ ಪೈಕಿ 110 ಮೀಟರ್ ಉದ್ದದ ಆಬ್ಲಿಗೇಟರಿ ಸ್ಪಾನ್ (Obligatory Span) ಎಂಬ ಕ್ಲಿಷ್ಟ ಎಂಜಿನಿಯರಿಂಗ್ ವಿನ್ಯಾಸದ ದೊಡ್ಡ ಕಾಂಕ್ರೀಟ್ ಸ್ಲಾಬ್ ಹಾಕಲಾಗಿದೆ. ಈ ಸ್ಲಾಬ್ ನ ಕಬ್ಬಿಣ ಕಟ್ಟುವ ವಿನ್ಯಾಸ ಪ್ರತಿ ಒಂದು ಮೀಟರ್ ಗೆ ಬದಲಾಗುತ್ತೆ. ಕೇವಲ ಈ ಫ್ಲೈಓವರ್ ನ ಕಬ್ಬಿಣ ಕಟ್ಟಲು 6 ತಿಂಗಳು ಸಮಯ ಹಿಡಿಯಿತು ಎನ್ನುತ್ತಾರೆ ರಸ್ತೆ ವಿಭಾಗದ ಎಂಜಿನಿಯರ್ ಒಬ್ಬರು.
ಭಾರೀ ವಿದ್ಯುತ್ ಕೇಬಲ್ ಗಳ ಸ್ಥಳಾಂತರ ವಿಳಂಬ :
ಬಿಬಿಎಂಪಿ ಮಾಗಡಿ ರಸ್ತೆ – ಓಕಳಿಪುರದ ಮಧ್ಯೆ ಕಾಮಗಾರಿ ಆರಂಭಿಸುವ ಪ್ರಾರಂಭದಲ್ಲೇ ಕೆಪಿಟಿಸಿಎಲ್ 440 ವೋಲ್ಟ್ಸ್ ಸಾಮರ್ಥ್ಯದ ಕೇಬಲ್ ಹಾಗೂ ಬೆಸ್ಕಾಂ ಕೇಬಲ್ ಇದ್ದ ಕಾರಣ ಆ ಕೇಬಲ್ ವರ್ಗಾವಣೆ ಮಾಡುವ ವಿಚಾರದಲ್ಲೆ ಒಂದು ವರ್ಷ ಸಮಯ ವ್ಯರ್ಥವಾಯಿತು. ಹೀಗಾಗಿ ಓಕಳಿಪುರದ ಕಡೆಯಿಂದ ರಾಜಾಜಿನಗರ ಕಡೆಗೆ ಸಾಗುವ ಅಂಡರ್ ಪಾಸ್ ಕಾಮಗಾರಿ ವಿಳಂಬವಾಗಿ ಕೊನೆಗೆ ಕಳೆದ ವರ್ಷ ಸೆಪ್ಟೆಂಬರ್ 11ರಿಂದ ಅಂಡರ್ ಪಾಸ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆನಂತರವಷ್ಟೆ ಟ್ರಾಫಿಕ್ ಪೊಲೀಸರು ವಾಟಾಳ್ ನಾಗರಾಜ್ ರಸ್ತೆಯ ಭಾಗದಲ್ಲಿ ವೈ ಜಂಕ್ಷನ್ ನಿರ್ಮಿಸಲು ಅನುವು ಮಾಡಿಕೊಟ್ಟರು.
ಕರೋನಾ ಸೋಂಕಿನಿಂದ ಮೊದಲ ಅಲೆಯಲ್ಲಿ ಮೂರು ಲಾಕ್ ಡೌನ್ ನಿಂದ 8 ತಿಂಗಳು ಸಮಯ ವ್ಯರ್ಥವಾಯಿತು. ಆನಂತರವಷ್ಟೇ ಕಾರ್ಮಿಕರಿಂದ ಕಾಮಗಾರಿ ನಡೆಸಲು ಅನುಮತಿ ದೊರೆಯಿತು ಎಂದು ಪ್ರಾಜೆಕ್ಟ್ ವಿಳಂಬಕ್ಕೆ ಅಧಿಕಾರಿಗಳು ಕಾರಣ ನೀಡಿದ್ದಾರೆ.
ಲುಲು ಮಾಲ್ ಮತ್ತೊಂದು ಅಂಡರ್ ಪಾಸ್ ಕೆಲಸ ಬಾಕಿ :
ಇನ್ನು ರಸ್ತೆ ಪಕ್ಕದಲ್ಲೇ ಇರುವ ಲುಲು ಮಾಲ್ ಗೆ ತೆರಳಲು ಈಗಾಗಲೇ ಮಾಲ್ ನವರೇ ರಾಜಾಜಿನಗರದ ಕಡೆಯಿಂದ ಮಾಲ್ ತನಕ ಸಾಕಲು ಅಂಡರ್ ಪಾಸ್ ನಿರ್ಮಿಸಿ ವಾಹನ ಸಂಚಾರಕ್ಕೆ ಬಳಕೆಯಾಗುತ್ತಿದೆ. ಆದರೆ ಲಾಲು ಮಾಲ್‌ನಿಂದ ಮಾಗಡಿ ರಸ್ತೆ ಕಡೆಗೆ ಸಾಗುವ ಕೆಳಸೇತುವೆ (ಇಂಟಿಗ್ರೇಟೆಡ್) ಕಾಮಗಾರಿ ಇನ್ನು ಬಾಕಿಯಿದೆ. ಆದರೆ ಈ ಎರಡು ಕಾಮಗಾರಿಗಳನ್ನು ಲುಲು ಮಾಲ್ ನವರೇ ವಹಿಸಿಕೊಂಡಿದ್ದರು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಒಟ್ಟಾರೆ 2020ರಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷದ ಬಳಿಕ ಮುಗಿಯುತ್ತಿದೆ. ಈ ರೀತಿ ದೊಡ್ಡ ದೊಡ್ಡ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಬೆಂಗಳೂರಿಗೆ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇಮಕವಾಗಬೇಕು :
“ಬೆಂಗಳೂರು ಮೆಟ್ರೋ ಸಿಟಿ. ಸಾಕಷ್ಟು ಬೆಳೆಯುತ್ತಿದೆ. ಇಷ್ಟು ದೊಡ್ಡ ರಾಜಧಾನಿಗೆ ಪ್ರತ್ಯೇಕ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ಉಸ್ತುವಾರಿ ಅಗತ್ಯವಿದೆ. ಹಿಂದೆ ಮುಖ್ಯ ಕಾರ್ಯದರ್ಶಿಗಳಾಗಿದ್ದ ಟಿ.ಎಂ.ವಿಜಯ್ ಭಾಸ್ಕರ್ ತಿಂಗಳಿಗೊಮ್ಮೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಮತಿ ಸಭೆ ನಡೆಸುತ್ತಿದ್ದರು. ಆ ಸಭೆಗಳು ಪುನಃ ಪ್ರಾರಂಭವಾಗಬೇಕು. ಇಲ್ಲವಾದಲ್ಲಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ವೈ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ರೀತಿ ಹಲವು ಯೋಜನೆಗಳ ಜಾರಿಯು ವಿಳಂಬವಾಗಲಿದೆ. ಇದರಿಂದ ತೆರಿಗೆದಾರರ ಹಣ, ಸಮಯ ವ್ಯರ್ಥವಾಗಿ, ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಕಾರಣವಾಗಲಿದೆ.” – ಡಾ.ಭಾಸ್ಕರ್ ರಾವ್, ಆಪ್ ಪಕ್ಷದ ಮುಖಂಡ (ಮಾಜಿ ಪೊಲೀಸ್ ಆಯುಕ್ತ)