ಬೆಂಗಳೂರು, ಅ.6 www.bengaluruwire.com : ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಲನಚಿತ್ರ ಸೆ.30ರಂದು ಬಿಡುಗಡೆಯಾಗಿ ಕೇವಲ 6 ದಿನಗಳಲ್ಲೇ 80 ಕೋಟಿ ರೂ. ಕಲೆಕ್ಷನ್ ಆಗಿದೆ. ಚಿತ್ರಪ್ರೇಮಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಲ್ಲರ ಮನೆಗೆದ್ದಿದೆ.
ಅ.7ರ ಶುಕ್ರವಾರಕ್ಕೆ ಫಿಲಮ್ ರಿಲೀಸ್ ಆಗಿ ಒಂದ ವಾರ ಮುಗಿಯುವುದರ ಒಳಗಾಗಿ ಇಷ್ಟು ದೊಡ್ಡ ಮೊತ್ತ ಸಂಗ್ರಹವಾಗಿದೆ. ನವರಾತ್ರಿಯ ಸಾಲು ಸಾಲು ರಜೆಗಳಿಂದಾಗಿ ಕಲೆಕ್ಷನ್ ಕೂಡ ಹೆಚ್ಚಾಗಿದೆ. ಕನ್ನಡ ಭಾಷೆಯ ‘ಕಾಂತಾರ’ ಚಲನಚಿತ್ರ ರಾಜ್ಯದ 300 ಥಿಯೇಟರ್, ಮುಂಬೈನ 33, ಕೇರಳ ಹಾಗೂ ತಮಿಳುನಾಡಿನಲ್ಲಿ ತಲಾ 10 ಸಿನಿಮಾ ಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡ ಭಾಷೆಯಲ್ಲಿನ ಈ ಸಿನಿಮಾವೊಂದರಿಂದಲೇ ಬಾಕ್ಸ್ ಆಫೀಸ್ ಕಲೆಕ್ಷನ್ 200 ಕೋಟಿ ರೂ. ಗಡಿ ದಾಟಬಹುದೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕರಾವಳಿಯ ಧಾರ್ಮಿಕ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ ದೈವದ ಕೋಲವನ್ನು ಬಹಳ ಪರಿಣಾಮಕಾರಿಯಾಗಿ ತೋರಿಸುವ ಚಿತ್ರ ಹಿಂದಿ, ಮಲೆಯಾಳಂ, ತೆಲುಗು, ತಮಿಳು ಸೇರಿ ನಾಲ್ಕು ಭಾಷೆಗಳಲ್ಲಿ ಬರಲಿದೆ. ತೆಲಗು ಮತ್ತು ಹಿಂದಿ ಭಾಷೆಗೆ ಡಬ್ ಆದ ‘ಕಾಂತಾರ’ ಸಿನಿಮಾ ಕೇಂದ್ರ ಸೆನ್ಸರ್ ಮಂಡಳಿಗೆ ಹೋಗಿದ್ದು, ಸೆನ್ಸರ್ ಪ್ರಮಾಣಪತ್ರ ಬರಬೇಕಿದೆಯಷ್ಟೆ. ಇನ್ನು ತಮಿಳು ಹಾಗೂ ಮಲಯಾಳಮ್ ಭಾಷೆಯ ಚಿತ್ರಗಳು ಸದ್ಯದಲ್ಲಿಯೇ ಸೆನ್ಸರ್ ಮಂಡಳಿಗೆ ಕಳುಹಿಸಲಾಗುತ್ತಿದೆ ಎಂದು ಬೆಂಗಳೂರು ವೈರ್ ಗೆ ಮೂಲಗಳು ತಿಳಿಸಿವೆ.
ಅಮೆಜಾನ್ ಒಟಿಟಿ ಫ್ಲಾಟ್ ಫಾರಮ್ ಗಳಲ್ಲೂ ಸಿನಿಮಾ ವಿತರಣೆಗೆ ಹೊಂಬಾಳೆ ಪ್ರೊಡಕ್ಷನ್ ಹೌಸ್ ಮಾತುಕತೆ ನಡೆಸಿದ್ದು, ಒಟಿಟಿಯಲ್ಲೂ ಚಿತ್ರಪ್ರೇಮಿಗಳು ಈ ಸಿನಿಮಾವನ್ನು ನೋಡಬಹುದಾಗಿದೆ.
“ಕಾಂತಾರ” ಪದದ ಅರ್ಥ ಏನಂದರೆ ನಿಗೂಢ ಕಾಡು. ಕಾಂತಾರ ಸಿನಿಮಾ ಮಾಡುವುದೇ ಒಂದು ಸವಾಲು ಆಗಿತ್ತು. ಅದರಲ್ಲೂ ನಾಡಿನ ನಂಬಿಕೆ, ಆಚಾರ, ವಿಚಾರಗಳಿಗೆ, ದೈವರಾಧನೆಗೆ ಎಲ್ಲೂ ಧಕ್ಕೆಯಾಗದಂತೆ, ಅದರ ಶ್ರೇಷ್ಠತೆ, ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದನ್ನು ನಿಭಾಯಿಸುವುದರಲ್ಲಿ ಚಿತ್ರತಂಡ ಗೆಲುವು ಸಾಧಿಸಿದೆ.
ಈ ಸಿನಿಮಾ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡಿರುವ ನಟ ರಿಷಬ್ ಶೆಟ್ಟಿ, ತಾವು ಸಣ್ಣ ವಯಸ್ಸಿಂದಲೂ ದೈವ, ದೇವರುಗಳ ಬಗ್ಗೆ ಭಕ್ತಿ ಇಟ್ಟುಕೊಂಡವನು. ಅವುಗಳನ್ನು ಆರಾಧಿಸುತ್ತಾ ಬಂದವನು. ದೈವರಾಧನೆ ಜತೆಗೆ ಬೆಳೆದವನು. ದೈವಗಳ ಕೃಪೆಯಿಂದ ಎಲ್ಲರ ಸಹಕಾರದಿಂದ ‘ಕಾಂತಾರ’ ಸಿನಿಮಾ ಸಾಕಾರಗೊಂಡಿದೆ. ಈ ಸಿನಿಮಾ ನಾವು ಮಾಡಿದ್ದು ಎಂದು ನಾನು ಹೇಳುವುದಿಲ್ಲ. ನಾವು ನಂಬಿರುವ ದೈವಗಳೇ ಮಾಡಿಸಿದ್ದು ಎಂದಷ್ಟೆ ಹೇಳಬಲ್ಲೆ ಎಂದು ಭಾವುಕತೆಯಿಂದ ತಿಳಿಸಿದ್ದರು.
ಈ ಸಿನಿಮಾ ದೈವ ನರ್ತಕ ಕುಟುಂಬಕ್ಕೆ ಅರ್ಪಣೆ: ಇಡೀ ಚಲನಚಿತ್ರವನ್ನು ದೈವ ನರ್ತಕರು ಹಾಗೂ ಅವರ ಕುಟುಂಬಕ್ಕೆ ಸಮರ್ಪಿಸಿದ್ದೇನೆ. ದೈವದ ಸೇವೆ ಮಾಡುವಂತದ್ದು ವಿಶೇಷ ಮತ್ತು ಪುಣ್ಯದ ಕಾರ್ಯ. ಕಾಂತಾರ ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸದ್ದು ಮಾಡಿದೆ. ಆನೇಕ ವರ್ಷಗಳಿಂದ ಊರಿಗೆ ಬಾರದ, ದೈವಗಳ ಕೋಲ, ನೇಮಗಳಲ್ಲಿ ಪಾಲ್ಗೊಳ್ಳದ ಹಲವಾರು ಮಂದಿ ಇದೀಗ ಊರಿಗೆ ಬರಬೇಕು, ನಮ್ಮ ಮನೆತನದ, ಊರಿನ ಕೋಲ, ನೇಮಗಳಲ್ಲಿ ಪಾಲ್ಗೊಳುವಂತೆ ಪ್ರೇರೇಪಣೆ ಬಂದಿರುವುದಾಗಿ ದೂರವಾಣಿ ಕರೆ, ಮೆಸೇಜ್‌ಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅವರಿಗೆಲ್ಲ ‘ಕಾಂತಾರ’ ಸಿನಿಮಾ ಪ್ರೇರಣೆ ನೀಡಿದೆ ಎಂದಿದ್ದಾರೆ.
ಈ ಚಿತ್ರದ ನಾಯಕಿ ಸಪ್ತಮಿ ಗೌಡಗೆ ನಟಿಸುವ ವೇಳೆ ಕೋಲ, ನೇಮಗಳ ಬಗ್ಗೆ ತಿಳಿದಿರಲಿಲ್ಲ. ಆದರೆ ಚಿತ್ರದಲ್ಲಿ ಪಾತ್ರ ಮಾಡುವ ಸಂದರ್ಭದಲ್ಲಿ ಇದರ ಬಗ್ಗೆ ತಿಳಿದುಕೊಂಡು ಅದರಲ್ಲಿನ ಆಚಾರ, ವಿಚಾರ, ನಂಬಿಕೆಗಳನ್ನು ಚಾಚೂ ತಪ್ಪದೆ ಶ್ರದ್ಧೆಯಿಂದ ಪಾತ್ರ ನಿರ್ವಹಿಸಿದ್ದಾರಂತೆ. ಇನ್ನೂ ಮುಂದೆಯೂ ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಕರಾವಳಿಯ ಕೋಲ, ನೇಮಗಳಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.
ಹೊಂಬಾಳೆ ಪ್ರೊಡಕ್ಷನ್ ನಿಂದ ಕಾಂತಾರ-2..?
ಕಾಂತಾರ ಚಲನಚಿತ್ರ ಅದ್ಭುತ ಯಶಸ್ಸು ಕಾಣುತ್ತಿರುವಂತೆಯೇ ಇದೀಗ ಕಾಂತಾರ-2 ಚಿತ್ರ ಬರಲಿದೆಯೇ ಎಂಬ ಕುತೂಹಲ ಚಿತ್ರರಸಿಕರನ್ನು ಕಾಡುತ್ತಿದೆ. ಆದರೆ ಈತನಕ ‘ಕಾಂತಾರ-2 ಹೆಸರಿನ ಟೈಟಲ್ ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಲ್ಲ ಎಂದು ತಿಳಿದುಬಂದಿದೆ.
ಕಾಂತಾರ-2 ಸಿನಿಮಾ ಕುರಿತ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿರುವ ಚಿತ್ರದ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾ ರಿಲೀಸ್ ಮಾಡಿದ್ದೇವೆ. ನಮ್ಮ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಚಿತ್ರಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಕಾಂತಾರ-2 ಸಿನಿಮಾ ಬಗ್ಗೆ ಈಗ ಏನನ್ನೂ ಹೇಳಲಾರೆ. ಇದನ್ನು ದೈವೇಚ್ಛೆಗೆ ಬಿಟ್ಟಿದ್ದೇನೆ. ದೈವದ ಇಚ್ಛೆ ಇದ್ದರೆ ಬರಬಹುದು ಎಂದ ಹೇಳುವ ಮೂಲಕ ಸಾಧ್ಯತೆಗಳನ್ನು ಮುಕ್ತವಾಗಿ ತೆರೆದಿಟ್ಟಿದ್ದಾರೆ. ಒಟ್ಟಿನಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಿಂದ ಕಾಂತಾರ ಹವಾ ಹಾಗೂ ಕನ್ನಡ ಚಿತ್ರರಂಗದ ಹೆಸರು ಮತ್ತಷ್ಟು ಹೆಚ್ಚಾಗಲಿದೆ.