ಬೆಂಗಳೂರು, ಸೆ.17 www.bengaluruwire.com : ರಾಜಧಾನಿ ಬೆಂಗಳೂರು ಒಂದು ಕಾಲದಲ್ಲಿ ನೂರಾರು ಕೆರೆಗಳಿದ್ದರೂ, ಹಲವು ಕೆರೆಗಳು ಸದ್ದಿಲ್ಲದೆ ಒತ್ತುವರಿಯಾಗಿ ಅವುಗಳ ಮೇಲೆ ರಸ್ತೆ, ಕಟ್ಟಡ, ಕಾಂಪ್ಲೆಕ್ಸ್ ನಿಂತುಕೊಂಡಿದ್ದರೆ, ಮತ್ತೊಂದೆಡೆ ರಾಜಕಾಲುವೆ ದಾರಿಗಳೇ ಹಲವು ಕಡೆ ಮುಚ್ಚಿಹೋಗಿವೆ. ಹೀಗಾಗಿ ನಗರದಲ್ಲಿ ಕೆಲವು ಹೊತ್ತು ಜೋರು ಮಳೆ ಸುರಿದರೂ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗುತ್ತಿದೆ. ಬಿದ್ದ ಮಳೆ ನೀರು ಮೋರಿ ಸೇರುತ್ತಿದೆ.
ಇದನ್ನು ಮನಗಂಡ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ನರೇಗಾ ಯೋಜನೆಯಡಿ ಆನೇಕಲ್ ತಾಲೂಕು ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಗೆ ಬಿದ್ದ ಮಳೆ ನೀರನ್ನೇ ಸದ್ಬಳಕೆ ಮಾಡಿಕೊಳ್ಳಲು ಮಳೆ ನೀರು ಜಲಾಶಯವನ್ನು ನಿರ್ಮಿಸಿ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದ್ದಾರೆ.
ರಾಜ್ಯದ ಅನೇಕ ಕಡೆ ನರೇಗಾ ಯೋಜನೆ ಹಣವನ್ನು ರಸ್ತೆ ನಿರ್ಮಾಣ ಮತ್ತು ಗುಂಡಿ ತೆಗೆಯುವಂತಹ ಕಾಮಗಾರಿಗಳ ನೆಪದಲ್ಲಿ ದುರ್ಬಳಕೆ ಮಾಡಿಕೊಂಡಿರುವ ಸಾಕಷ್ಟು ದೂರುಗಳಿವೆ. ಇಂತಹ ಆರೋಪಗಳ ನಡುವೆಯೇ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ನರೇಗಾದ ನೆರವಿನಲ್ಲೇ ಶಾಶ್ವತ ನೀರಿನ ಸೆಲೆಯ ತಾಣವನ್ನೇ ನಿರ್ಮಿಸಿದೆ. ಅಂದರೆ ಬೆಂಗಳೂರು ಸುತ್ತಮುತ್ತ ಸುರಿದು ಹರಿಯುವ ಮಳೆ ನೀರು ಸದ್ಬಳಕೆ ಮಾಡಿಕೊಳ್ಳಲು ಕಿರು ಅಣೆಕಟ್ಟೆಯನ್ನೇ ನಿರ್ಮಿಸಲಾಗಿದೆ. ಈ ಕಿರು ಜಲಾಶಯದಿಂದಾಗಿ ಸಣ್ಣಪುಟ್ಟ ಕಣಿವೆಗಳ ಮೂಲಕ ಹರಿದು ಪೋಲಾಗುವ ನೀರನ್ನು ಸೂಕ್ತ ರೀತಿ ಬಳಸಿಕೊಳ್ಳಲು ಸಾಧ್ಯವಾಗಲಿದೆ.
ಬೆಂಗಳೂರು ಸುತ್ತಮುತ್ತ ಸುರಿಯುವ ಮಳೆ ನೀರು ವೃಥಾ ತಮಿಳುನಾಡಿನ ಮೂಲಕ ಸಮುದ್ರ ಸೇರುವುದನ್ನು ತಪ್ಪಿಸಿ ಸದ್ಬಳಕೆ ಮಾಡಿಕೊಂಡಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರ ಪರಿಕಲ್ಪನೆಯನ್ನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ಅವರು ನರೇಗಾ ಮುಖ್ಯಸ್ಥರು ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಶಿಲ್ಪಾನಾಗ್ ಸಹಕಾರ ಮತ್ತು ವಿಶೇಷ ಆಸಕ್ತಿಯಿಂದಾಗಿ ಈ ಮಳೆನೀರು ಆಧಾರಿತ ಜಲಾಶಯ ಇದೀಗ ತಲೆ ಎತ್ತಿ ನಿಂತಿದೆ. ಆ ಮೂಲಕ ನರೇಗಾ ಹಣವನ್ನು ಹೀಗೂ ಬಳಸಿಕೊಳ್ಳಬಹುದು ಎಂದು ನರೇಗಾದಲ್ಲಿ 31ನೇ ಸ್ಥಾನದಲ್ಲಿರುವ ಚಾಮರಾಜನಗರ ಜಿಲ್ಲಾಪಂಚಾಯಿತಿಯನ್ನೇ ನಾಚಿಸುವ ರೀತಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ ಜಲಜೀವನ್, ನರೇಗಾ ಯೋಜನೆಯಡಿ ಬೆಂಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ 200 ಕೆರೆಗಳ ಸಂಪೂರ್ಣ ಅಭಿವೃದ್ಧಿ ಮಾಡಿ, ಅಂತರ್ಜಲ ಮಟ್ಟ ಏರಿಕೆ ಮಾಡಿ ಪ್ರತಿಯೊಬ್ಬರಿಗೂ ಗುಣಮಟ್ಟದ ನೀರು ಒದಗಿಸಲು ಯೋಜಿಸಲಾಗಿದೆ. ಅದರಂತೆ ರಾಜಕಾಲುವೆ ಒತ್ತುವರಿ ತೆರವು, ಶುದ್ಧೀಕರಣ ಹಾಗೂ ಕೆರೆಗಳಲ್ಲಿ ಹೂಳು ತೆಗೆದು ಆ ಕೆರೆಗಳ ಪುನರುಜ್ಜೀವನ ಮಾಡಲಾಗುತ್ತದೆ. ಈ 200 ಕೆರೆಗಳ ಸಮೀಕ್ಷೆ ನಡೆಸಿ, ಕಾರ್ಯಯೋಜನೆ ನೀಡುವಂತೆ ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಗೆ ತಿಳಿಸಲಾಗಿದೆ. ಆ ಸಂಸ್ಥೆಯು ನೀಡುವ ಸಮೀಕ್ಷೆ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಮೊದಲನೆಯದಾಗಿ ಆನೇಕಲ್ ತಾಲೂಕಿನಲ್ಲಿ ಮಳೆ ನೀರು ಕಿರು ಅಣೆಕಟ್ಟೆ ನಿರ್ಮಿಸಲಾಗಿದೆ.”
– ಎಲ್.ಕೆ.ಅತೀಕ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
446 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಸಂಜೀವಿನಿಯಂತಾಗಿದೆ :
ಸುಮಾರು 1.2 ಕೋಟಿ ರೂ ವೆಚ್ಚದಲ್ಲಿ ಈ ಕಿರು ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಬೆಂಗಳೂರು ಜಿಲ್ಲಾ ಪಂಚಾಯತಿ ನರೇಗಾ ಮೂಲಕ ನೆರವು ಒದಗಿಸಿದೆ. ಹಾಗೆಯೇ ಇದರ ನಿರ್ಮಾಣ ಕಾಲದಲ್ಲಿ ಕಾಮಗಾರಿಯ ಮೂಲಕ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡಿದೆ. ಉಳಿದಂತೆ ಯುನೈಟೆಡ್ ವೆ (United Way) ಮತ್ತು ಕಾಂಟಿನೆಂಟಲ್ (continental) ಎಂಬ ಖಾಸಗಿ ಸಂಸ್ಥೆಗಳಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನೆರವು ಪಡೆದು ಕಿರು ಜಲಾಶಯ ನಿರ್ಮಿಸಲಾಗಿದೆ. ಈ ಮೂಲಕ ಯುನೈಟೆಡ್ ವೆ ಮತ್ತು ಕಾಂಟಿನೆಂಟಲ್ ಸಂಸ್ಥೆಗಳು ಮಳೆ ನೀರು ಸದ್ಬಳಕೆ ಮಾಡುವ ವಿನೂತನ ಯೋಜನೆಗೆ ಸಿಎಎಸ್ ಆರ್ ನೆರವು ನೀಡಿ ಸಾಮಾಜಿಕ ಹೊಣೆಗಾರಿಕೆಯನ್ನೂ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿವೆ.
2500 ಎಕರೆ ಜಲಾನಯನ ಪ್ರದೇಶ ಹೊಂದಿರುವ ಈ ಅಣೆಕಟ್ಟೆಯಿಂದ ಸುಮಾರು 446 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸಬಹುದಾಗಿದೆ. ಬೆಂಗಳೂರು ದಕ್ಷಿಣ ಭಾಗದ ಸಾವಿರಾರು ಕುಟುಂಬಗಳಿಗೆ ಜೀವನದಿಯಂತೆ ಗೋಚರವಾಗುತ್ತಿದೆ. ಸಾವಿರಾರು ಕುಟುಂಬಗಳಿಗೆ ದಿನಬಳಕೆ ನೀರನ್ನು ಈ ಮಳೆನೀರು ಜಲಾಶಯ ಪೂರೈಸಲಿದೆ.
ಏನಿದು ಮಳೆನೀರು ಜಲಾಶಯ ಯೋಜನೆ?
ಬೆಂಗಳೂರು ದಕ್ಷಿಣ ಭಾಗದ ಆನೇಕಲ್ ತಾಲೂಕಿನ ಸುತ್ತಮುತ್ತ ಬೇಸಿಗೆ ಬಂತೆಂದರೆ ಸಾಕು ನೀರಿನ ಬವಣೆ ವಿಪರೀತ. ಇಲ್ಲಿ ಭಾರೀ ಮಳೆ ಸುರಿದರೂ ನೀರು ನಿಲ್ಲುವುದಿಲ್ಲ. ಕಾರಣ ಇಲ್ಲಿ ಬೆಟ್ಟ, ಗುಡ್ಡ ಕಣಿವೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹರಿದು ಬರುವ ನೀರು ಸಣ್ಣಪುಟ್ಟ ಕೆರೆ ತೊರೆಗಳ ಮೂಲಕ ತಮಿಳುನಾಡು ಸೇರುತ್ತದೆ. ಇದನ್ನು ಅರಿತು, ಆ ಮಳೆ ನೀರನ್ನು ಬಳಸಿಕೊಳ್ಳಲು ಯಾವುದೇ ಪ್ರಚಾರವಿಲ್ಲದೆ ಕಿರು ಅಣೆಕಟ್ಟೆಯನ್ನ ನಿರ್ಮಿಸಲಾಗಿದೆ.
ಜಲಾಶಯದಿಂದಾಗುವ ಲಾಭಗಳೇನು ?
ಸಾವಿರಾರು ಎಕರೆ ಪ್ರದೇಶದ ರೈತರಿಗೆ ನೀರು ಬೇಸಿಗೆಯಲ್ಲೂ ಲಭ್ಯವಾಗಲಿದೆ. ಜೀವ ವೈವಿಧ್ಯತೆಯ ರಕ್ಷಣೆಗೆ ಅವಕಾಶವಾಗಲಿದೆ. ಸಣ್ಣ ಪುಟ್ಟ ಕೆರೆಕಟ್ಟೆಗಳ ಸಂರಕ್ಷಣೆ, ಅಂತರ್ಜಲ ಅಭಿವೃದ್ಧಿಗೆ ಸಹಾಯಕವಾಗಲಿದೆ. ಕಾವೇರಿ ನೀರಿನ ಸದ್ಬಳಕೆಗೆ ಅವಕಾಶವಾಗುತ್ತದೆ. ಬಹಳ ಪ್ರಮುಖವಾಗಿ ಕೆರೆಕುಂಟೆಗಳ ಒತ್ತುವರಿಗೆ ತಡೆ ಬೀಳಲಿದೆ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು.
ಅಧಿಕಾರಿಗಳು ಏನಂತಾರೆ?
“ಬೆಂಗಳೂರಿನಲ್ಲಿ ಮುಂದೆ ಎದುರಾಗಬಹುದಾದ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಇಲಾಖೆ ಮುಖ್ಯಸ್ಥರಾದ ಅತೀಕ್ ಅವರ ಮಾರ್ಗದರ್ಶನದಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದ್ದು, ಇದನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು. “
– ಸಂಗಪ್ಪ, ಬೆಂಗಳೂರು ಜಿಲ್ಲಾಪಂಚಾಯಿತಿ ಸಿಇಒ