ನವದೆಹಲಿ, ಸೆ.16 www.bengaluruwire.com : ನೀವು ಬಳಸುವ ಮೊಬೈಲ್ ಫೋನ್ ಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಆಪ್ ಗಳಿಂದ ನಿಮಗೆ ತಿಳಿಯದಂತೆ ಮಾಹಿತಿ ಕದಿಯುವ ಹೊಸ ಟ್ರೋಜನ್ ವೈರಸ್ ದೇಶದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ (Android Smart Phone) ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಮ್ (CERT) ಎಚ್ಚರಿಕೆ ನೀಡಿದೆ. ಹೀಗಾಗಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಈ ಬಗ್ಗೆ ಆದಷ್ಟು ಜಾಗೃತೆವಹಿಸಬೇಕು ಎಂದು ಸಲಹೆ ನೀಡಿದೆ.
ಹೊಸ ಮೊಬೈಲ್ ಬ್ಯಾಂಕಿಂಗ್ ‘ಟ್ರೋಜನ್’ ವೈರಸ್ ಸೋವಾ (SOVA) ಆಂಡ್ರಾಯ್ಡ್ ಫೋನ್ನಲ್ಲಿ ನಮಗೆ ಗೊತ್ತಿಲ್ಲದಂತೆ ಸೇರಿಕೊಂಡು, ಮೊಬೈಲ್ ಫೋನ್ ಬಳಕೆದಾರರನ್ನು ಪೀಡಿಸಬಹುದು. ಈ ವೈರಸ್ ಒಂದು ಬಾರಿ ನಿಮ್ಮ ಫೋನ್ ಒಳಗೆ ಸೇರಿಕೊಂಡರೇ, ಅದನ್ನು ಅನ್‌ಇನ್‌ಸ್ಟಾಲ್ ಮಾಡುವುದು ಬಲು ಕಷ್ಟ.
ಈ ಟ್ರೋಜನ್ ವೈರಸ್ 2021 ಸೆಪ್ಟೆಂಬರ್ ನಲ್ಲೇ ಕಾಳಸಂತೆಯಲ್ಲಿ ಮಾರಾಟಕ್ಕೆ ಮೊದಲ ಲಭ್ಯವಾಗಿತ್ತು. ಈ ವರ್ಷದ ಜುಲೈ ತಿಂಗಳಲ್ಲಿ ಭಾರತದ ಸೈಬರ್ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಈಗ ಬಂದಿರುವ ಟ್ರೋಜನ್ ವೈರಸ್ ಅದರ ಐದನೇ ವರ್ಷನ್ (ಆವೃತ್ತಿ)ಗೆ ಅಪ್ ಗ್ರೇಡ್ ಆಗಿದೆ ಎಂದು ಸಿಇಆರ್ ಟಿ ತಿಳಿಸಿದೆ.
ಈ ವೈರಸ್ ಮೊದಲು ಅಮೆರಿಕ, ಸ್ಪೇನ್ ಹಾಗೂ ರಷ್ಯಾ ನಂತಹ ದೇಶಗಳನ್ನು ತನ್ನ ಗುರಿಯಾಗಿ ಕೇಂದ್ರೀಕರಿಸಿತ್ತು. ಆದರೆ ಜುಲೈ 2022 ರಲ್ಲಿ ಅದು ಭಾರತವೂ ಸೇರಿದಂತೆ ಹಲವಾರು ಇತರ ದೇಶಗಳನ್ನು ತನ್ನ ಗುರಿಗಳ ಪಟ್ಟಿಗೆ ಸೇರಿಸಿಕೊಂಡಿದೆ. ಬಳಕೆದಾರರು ತಮ್ಮ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಿದಾಗ ಮತ್ತು ಬ್ಯಾಂಕ್ ಖಾತೆಗಳಿಗೆ ಪ್ರವೇಶಿಸಿದಾಗ ಈ ಮಾಲ್‌ವೇರ್ ಅವರ ಸಹಿಯನ್ನು ನಕಲು ಮಾಡುವಷ್ಟು ಅಪಾಯಕಾರಿಯಾಗಿದೆ ಎಂದು ಸಿಇಆರ್ ಟಿ ಹೇಳಿದೆ.
ಅಮೆಜಾನ್, ಕ್ರೋಮ್ ನಂತಹ ಪ್ರಸಿದ್ಧ ಆಂಡ್ರಾಯ್ಡ್ ಆಪ್ ಗಳ ಲೋಗೋಗಳನ್ನು ಬಳಕೆ ಮಾಡಿಕೊಂಡು ಆ ಆಂಡ್ರಾಯ್ಡ್ ಆಪ್ ಗಳ ಹಿಂದೆ ನಿಗೂಢವಾಗಿದ್ದುಕೊಂಡು ಈ ಟ್ರೋಜನ್ ವೈರಸ್ ಬಳಕೆದಾರರ ಮೊಬೈಲ್ ನಿಂದ ಮಾಹಿತಿ ಕದಿಯುವಷ್ಟು ಸಬಲವಾಗಿದೆ.
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಹೇಗೆ ಎಚ್ಚರಿಕೆವಹಿಸಬೇಕು ?
SOVA ಯ ಹೊಸ ಆವೃತ್ತಿಯು, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಅಥವಾ ವ್ಯಾಲೆಟ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಮೊಬೈಲ್ ಆಪ್ ಗಳನ್ನು ಗುರಿಯಾಗಿಸಿಕೊಂಡಿದೆ. ಈ ವೈರಸ್ನಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ ಗ್ರಾಹಕರು, ಅಧಿಕೃತ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಿಂದ ಮಾತ್ರ ಆಪ್ ಗಳನ್ನು ಡೌಲ್ ಮಾಡಿಕೊಳ್ಳಬೇಕು. ಆಪ್ ಇನ್ ಸ್ಟಾಲ್ ಮಾಡಿಕೊಳ್ಳುವ ಮುನ್ನ ಆಪ್ಲಿಕೇಶನ್ ಗಳನ್ನು ಎಷ್ಟು ಜನ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು. ಆ ಆಪ್ ಕುರಿತ ರಿವ್ಯೂ ಹಾಗೂ ಹೆಚ್ಚಿನ ಮಾಹಿತಿ ವಿಭಾಗಕ್ಕೆ ತೆರಳಿ ಪರಿಶೀಲಿಸಿದ ಬಳಿಕವಷ್ಟೆ ಮುಂದುವರೆಯಬೇಕು. ಆಪ್ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಅನುಮತಿಯನ್ನು ಮಾತ್ರ ನೀಡಬೇಕು. ವಿಶ್ವಾಸಾರ್ಹವಲ್ಲದ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡಬಾರದು. ವಿಶ್ವಾಸಾರ್ಹವಲ್ಲದ ಲಿಂಕ್‌ಗಳನ್ನು ಒತ್ತದಂತೆ ಜಾಗರೂಕತೆವಹಿಸಬೇಕು. ಬಹುತೇಕ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ಗಳ ರೀತಿಯಲ್ಲಿ ಈ ಸೋವಾ ವೈರಸ್ ಅನ್ನು ಎಸ್ಎಂಎಸ್ ಮೂಲಕ ಕೂಡ ಹರಡಲಾಗುತ್ತಿದೆ. ಹಾಗಾಗಿ ಇಂತಹ ಎಸ್ಎಂಎಸ್ ಲಿಂಕ್ ಗಳನ್ನು ಒತ್ತಿ ತೊಂದರೆಗೆ ಸಿಲುಕಿಕೊಳ್ಳಬಾರದು ಎಂದು ಸಿಇಆರ್ ಟಿ ಸಾರ್ವಜನಿಕರಿಗೆ ಮಹತ್ವ ಸಲಹೆ ನೀಡಿದೆ.