ಬೆಂಗಳೂರು, ಸೆ.7 www.bengaluruwire.com : ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಸೆಯಾಗಿ ನಿಂತಿದ್ದ ಅರಣ್ಯ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ(62) ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಗೌರವಾರ್ಥ ರಾಜ್ಯ ಸರ್ಕಾರ, ಇಂದು ರಾಜ್ಯಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಿದೆ.
ಉಮೇಶ್ ಕತ್ತಿಯವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಕೋವಿಡ್-19 ಮಾರ್ಗಸೂಚಿಗಳ ಅನ್ವಯ ನೆರವೇರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಗಳು ಇರುವುದಿಲ್ಲ. ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲು ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಿದೆ. ಅಲ್ಲದೆ ಉಮೇಶ್ ಕತ್ತಿಯವರು ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯವರು.
ಈ ಪ್ರಯುಕ್ತ ಇಂದು ಬೆಳಗಾವಿಯ ಶಾಲಾ ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಮಂಗಳವಾರ ತಡರಾತ್ರಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಅಲ್ಲಿಯೇ ಕುಸಿದು ಬಿದ್ದಿದ್ದರು. 10 ನಿಮಿಷಗಳಾದರೂ ಹೊರಬಾರದಿದ್ದಾಗ ಅವರ ಕುಟುಂಬದವರು ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ ಕತ್ತಿಯವರು ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿದ್ದರು. ನಂತರ ಕೂಡಲೇ ಅವರನ್ನು ಹತ್ತಿರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೀವ್ರನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಮಧ್ಯರಾತ್ರಿ ವೇಳೆಗೆ ಉಮೇಶ್ ಕತ್ತಿಯವರು ನಿಧನರಾದರು.
ಸಚಿವ ಉಮೇಶ್ ಕತ್ತಿಯವರಿಗೆ ಪತ್ನಿ ಶೀಲಾ, ನಿಖಿಲ್ ಹಾಗೂ ಸ್ನೇಹಾ ಎಂಬ ಮಕ್ಕಳಿದ್ದಾರೆ. ಮೃತರ ಸಾವಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟ ಸಹದ್ಯೋಗಿಗಳು, ರಾಜಕೀಯ ನಾಯಕರು, ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕತ್ತಿಯವರ ಹುಟ್ಟೂರಲ್ಲಿ ಶೋಕ ಮಡುಗಟ್ಟಿದೆ.