ಬೆಂಗಳೂರು, ಜು.01 (www.bengaluruwire.com) : ರಾಜ್ಯದ ಎಲ್ಲೆಡೆ ವ್ಯಾಪಾರ- ವ್ಯವಹಾರ ಹೊಸ ಆರ್ಥಿಕ ವರ್ಷದಿಂದ ಭರ್ಜರಿಯಾಗಿ ನಡೀತಿರುವ ಮಧ್ಯೆ ಮದ್ಯದ ವಹಿವಾಟು ಮತ್ತು ಮಾರಾಟವೂ ರಾಜ್ಯದಲ್ಲಿ ಜೋರಾಗಿ ನಡೆದಿದೆ. ಮದ್ಯಪ್ರಿಯರು ಅತಿಹೆಚ್ಚು ಮದ್ಯ ಖರೀದಿಸಿದ ಕಾರಣ ರಾಜ್ಯ ಸರ್ಕಾರದ ಆದಾಯವೂ ಹೆಚ್ಚಾಗಿದೆ. ಏಪ್ರಿಲ್ ನಿಂದ ಜೂನ್ ತಿಂಗಳ ಮೂರು ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಗೆ 7,574 ಕೋಟಿ ರೂ. ಆದಾಯ ಹರಿದು ಬಂದಿದೆ.
ರಾಜ್ಯದಲ್ಲಿ ತೈಲ ಬೆಲೆ, ದೈನಂದಿನ ಧವಸ ಧಾನ್ಯಗಳ ರೇಟ್, ಗ್ಯಾಸ್ ಹೀಗೆ ಎಲ್ಲಾ ಬೆಲೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಆದರೆ ಈ ಬೆಲೆ ಏರಿಕೆ ಇದ್ಯಾವುದೂ ಮದ್ಯ ಮಾರಾಟಕ್ಕೆ ತೊಂದರೆಯಾಗಿಲ್ಲ. ಈ ವರ್ಷದ ಏಪ್ರಿಲ್ನಿಂದ ಜೂನ್ ವರೆಗಿನ 3 ತಿಂಗಳ ಅವಧಿಯಲ್ಲಿ ಭರ್ಜರಿ ಗುಂಡು ಮಾರಾಟವಾಗಿ ಅಬಕಾರಿ ಇಲಾಖೆಗೆ ಉತ್ತಮ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯದ ಮಾರಾಟದಲ್ಲಿ ಶೇ.26.12ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ವರ್ಷಕ್ಕಿಂತ 1667 ಕೋಟಿ ರೂ. ಹೆಚ್ಚುವರಿ ಸಂಗ್ರಹ :
2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 29,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದೆ. ಹಿಂದಿನ ಈ ಬಾರಿ ಕೇವಲ ಮೂರು ತಿಂಗಳಿನಲ್ಲಿ 7,574.22 ಕೋಟಿ ರೂ. ಆದಾಯ ಸಂಗ್ರಹಿಸಿದ್ದು, 2021-22ನೇ ಸಾಲಿಗೆ ಹೋಲಿಸಿದರೆ ರಾಜಸ್ವ ಸಂಗ್ರಹದಲ್ಲಿ 1,667.29 ಕೋಟಿ ರೂ.ನಷ್ಟು ಹೆಚ್ಚುವರಿಯಾಗಿ ಇಲಾಖೆಗೆ ಆದಾಯ ಬಂದಿದೆ.
ಗುಂಡು ಪ್ರಿಯರು ಈ ಮೂರು ತಿಂಗಳಲ್ಲಿ 14.79 ಕೋಟಿ ಲೀಟರ್ (171.20 ಲಕ್ಷ ಬಾಕ್ಸ್) ನಷ್ಟು ಭಾರತೀಯ ತಯಾರಿತ ಮದ್ಯ (ಐಎಮ್ ಎಲ್)ವನ್ನು ಖರೀದಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 17.01 ಲಕ್ಷದಷ್ಟು ಹೆಚ್ಚಿನ ಬಾಕ್ಸ್ ಮದ್ಯ ಮಾರಾಟವಾಗಿದೆ.
ಇನ್ನು ವಿವಿಧ ಬ್ರಾಂಡ್ ಗಳ ಬಿಯರ್ ಖರೀದಿಗೆ ರಾಜ್ಯದಲ್ಲಿನ ಹೆಚ್ಚಿನ ಒಲವು ತೋರಿದ್ದಾರೆ. 2021-22ನೇ ಸಾಲಿನ ಏಪ್ರಿಲ್ ನಿಂದ ಜೂನ್ ವರೆಗಿನ 3 ತಿಂಗಳಲ್ಲಿ 35.39 ಲಕ್ಷ ಲೀಟರ್ ಬಿಯರ್ (45.38 ಲಕ್ಷ ಬಾಕ್ಸ್) ಮಾರಾಟವಾಗಿದ್ದರೆ, ಈ ವರ್ಷ 8.14 ಕೋಟಿ ಲೀಟರ್ ಬಿಯರ್ (104.42 ಲಕ್ಷ ಬಾಕ್ಸ್) ಸೇಲ್ ಆಗಿದೆ.
ಬಿಯರ್ ಮಾರಾಟದಲ್ಲಿ ಶೇ.130ರಷ್ಟು ಏರಿಕೆ :
ಕರೋನಾ ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಜನವರಿ ತಿಂಗಳಿನಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಆರ್ಥಿಕ ಸಂಪನ್ಮೂಲ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇದೇ ಹಾದಿಯಲ್ಲಿ ಅಬಕಾರಿ ಇಲಾಖೆಯೂ ಸಾಗುತ್ತಿದೆ. ಕಳೆದ ವರ್ಷದ ಏಪ್ರಿಲ್ ನಿಂದ ಜೂನ್ ವರೆಗಿನ ಮೂರು ತಿಂಗಳಿನಲ್ಲಿ ವಿವಿಧ ಬ್ರಾಂಡ್ ಗಳ ಬಿಯರ್ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಬಿಯರ್ ಗೆ ಮದ್ಯಪ್ರಿಯರು ಹೆಚ್ಚು ಒತ್ತು ನೀಡಿರುವುದು ಕಂಡು ಬಂದಿದೆ. ಬಿಯರ್ ಮಾರಾಟ ಹೋದವರ್ಷಕ್ಕೆ ಹೋಲಿಸಿದರೆ ಈ 3 ತಿಂಗಳಿನಲ್ಲಿ ಶೇ.130ರಷ್ಟು ಹೆಚ್ಚಾಗಿದೆ. ಇನ್ನು ಭಾರತೀಯ ತಯಾರಿತ ಮದ್ಯ ಮಾರಾಟವು ಶೇ.11.03ರಷ್ಟು ಏರಿಕೆ ದಾಖಲಿಸಿದೆ.