ಬೆಂಗಳೂರು, ಜೂ.30 www.bengaluruwire.com :
ನಮ್ಮ ಮೆಟ್ರೊ ಮೂರನೇ ಹಂತದ ಪ್ರಸ್ತಾವಿತ ಯೋಜನೆ ಮಾರ್ಗದಲ್ಲಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಎರಡು ಮೇಲ್ಸೇತುವೆ ಯೋಜನೆಯು ಬರುತ್ತಿರುವುದು ಎರಡೂ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಮೂರನೇ ಹಂತದಲ್ಲಿ 44.65 ಕಿ.ಮೀ ಉದ್ದದ ಒಟ್ಟು ಎರಡು ಕಾರಿಡಾರ್ ಬರುತ್ತಿದೆ. ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ 12.5 ಕಿ.ಮೀ ಮೆಟ್ರೊ ಮಾರ್ಗ ಹಾಗೂ ಜೆ.ಪಿನಗರ 4ನೇ ಹಂತದಿಂದ ಕೆಂಪಾಪುರದವರೆಗಿನ 32.15 ಕಿ.ಮೀ ಮಾರ್ಗ ಬರಲಿದೆ.
ಜೆ.ಪಿನಗರ 4ನೇ ಹಂತದಲ್ಲಿನ ಮೆಟ್ರೊ ರೈಲು ಮಾರ್ಗವು ಪಾಲಿಕೆಯ ಹೊರವರ್ತುಲ ರಸ್ತೆಯಲ್ಲೇ ಸಾಗುವುದರಿಂದ ಅದೇ ಮಾರ್ಗದಲ್ಲಿ ಬಿಬಿಎಂಪಿಯು ನಿರ್ಮಿಸಲು ಯೋಜಿಸುತ್ತಿರುವ ಸಾರಕ್ಕಿ ಜಂಕ್ಷನ್ ಹಾಗೂ ಇಟ್ಟಮಡು ಜಂಕ್ಷನ್ ಬಳಿಯ ಎರಡು ಮೇಲ್ಸೇತುವೆಗಳು ಮೆಟ್ರೊ ರೈಲು ಮಾರ್ಗ ಹಾಗೂ ಪಾಲಿಕೆಯ ಫ್ಲೈಓವರ್ ಕಾಮಗಾರಿಗಳಿಗೆ ಪರಸ್ಪರ ತೊಡಕಾಗಲಿದೆ.
ಈ ಹಿನ್ನಲೆಯಲ್ಲಿ ಜು.27ರಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್ ನೇತೃತ್ವದಲ್ಲಿ ಗಹನ ಚರ್ಚೆ ನಡೆಯಿತು.
“ಬಿಬಿಎಂಪಿಯು ಪ್ರಸ್ತಾವಿತ ಮೇಲ್ಸೇತುವೆ ನಿರ್ಮಾಣ ಸ್ಥಳದಲ್ಲಿಯೇ ಮೆಟ್ರೋ 3ನೇ ಹಂತದ ಯೋಜನೆಯ ರೈಲು ಮಾರ್ಗವು ಬರುತ್ತಿರುವ ಹಿನ್ನಲೆಯಲ್ಲಿ ಎರಡೂ ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಏನೆಲ್ಲಾ ಮಾಡಬಹುದು? ಎಂಬ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಮೆಟ್ರೊ ಅಧಿಕಾರಿಗಳು ಈ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ್ದೇವೆ. ಭವಿಷ್ಯದಲ್ಲಿ ಹೊರವರ್ತುಲ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಹಾಗೂ ಮೆಟ್ರೊ ರೈಲು ಸಂಚಾರಕ್ಕೆ ಅನುವಾಗುವ ರೀತಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.”
– ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತರು
ಎರಡು ಮೇಲ್ಸೇತುವೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು ಕೆಲವೇ ದಿನಗಳಲ್ಲಿ ಈ ಯೋಜನೆ ನಿರ್ಮಾಣ ಆರಂಭವಾಗಬೇಕಿತ್ತು. ಆದರೆ ಇದೇ ಒಆರ್ ಆರ್ ಮಾರ್ಗದಲ್ಲಿ ಫೇಸ್-3 ಮೆಟ್ರೊ ರೈಲು ಮಾರ್ಗ ಬರುತ್ತಿರುವುದರಿಂದ ಬಿಬಿಎಂಪಿ ಹಾಗೂ ಮೆಟ್ರೋ ಜಂಟಿಯಾಗಿ ಒಂದೇ ಸ್ಥಳದಲ್ಲಿ ಸಂಯೋಜಿತವಾಗಿ (Integrated) ಎರಡು ಯೋಜನೆಗಳನ್ನು ನಿರ್ಮಾಣ ಮಾಡಲು ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಸಮ್ಮತಿಸಿವೆ. ಹೀಗಾಗಿ ಈ ಎರಡು ಮೇಲ್ಸೇತುವೆಗಳ ವಿನ್ಯಾಸ ಬದಲಾವಣೆಗೆ ಒಳಪಡಲಿದೆ.
“ಮೆಟ್ರೋ ಎರಡನೇ ಹಂತದಲ್ಲಿ ಜಯದೇವ ಆಸ್ಪತ್ರೆ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಹಂತದ ಮೇಲ್ಸೇತುವೆ ರೀತಿಯಲ್ಲಿ ವಾಹನ ಮತ್ತು ಮೆಟ್ರೊ ರೈಲು ಸಂಚರಿಸುವಂತೆ ಮೇಲ್ಸೇತುವೆ ವಿನ್ಯಾಸವನ್ನು ಸಾರಕ್ಕಿ ಜಂಕ್ಷನ್ ಹಾಗೂ ಇಟ್ಟಮಡು ಜಂಕ್ಷನ್ ಫ್ಲೈಓವರ್ ನಲ್ಲಿ ಅಳವಡಿಸಿಕೊಳ್ಳಲು ಚಿಂತನೆಯಿದೆ. ಈಗಾಗಲೇ ಪ್ರಸ್ತಾವಿತ ಫೇಸ್-3 ಮೆಟ್ರೊ ರೈಲು ಮಾರ್ಗ ಬರುತ್ತಿರುವ ಹಾಗೂ ಪಾಲಿಕೆ ಮೇಲ್ಸೇತುವೆ ಎರಡೂ ಸಂಧಿಸುವ ಸ್ಥಳದಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಎರಡು ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಿದ್ದೇವೆ.”
– ಅಂಜುಮ್ ಪರ್ವೇಜ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್ ಸಿಎಲ್
ಪ್ರಸ್ತಾವಿತ ಎರಡು ಮೇಲ್ಸೇತುವೆಗಳ ವಿವರ ಹೀಗಿದೆ :
ಜೆಪಿನಗರ ಬಳಿಯ ಸಾರಕ್ಕಿ ಜಂಕ್ಷನ್ ನಲ್ಲಿ ಪಾಲಿಕೆಯು ಮುಖ್ಯಮಂತ್ರಿಗಳ ನವ ನಗರೋತ್ಥಾನ ಅನುದಾನದಡಿ120 ಕೋಟಿ ರೂ. ವೆಚ್ಚದಲ್ಲಿ ಸಾರಕ್ಕಿ ಜಂಕ್ಷನ್, 36, 35 ಹಾಗೂ 33ನೇ ಮುಖ್ಯರಸ್ತೆ ಮತ್ತು ಇಲಿಯಾಸ್ ನಗರ ಜಂಕ್ಷನ್ ವರೆಗೆ ಟ್ರಾಫಿಲ್ ಸಿಗ್ನಲ್ ರಹಿತ ಸುಲಲಿತ ವಾಹನ ಸಂಚಾರಕ್ಕಾಗಿ 1.36 ಕಿ.ಮೀ ಉದ್ದದ ನಾಲ್ಕು ಲೇನ್ ಗಳ ಮೇಲ್ಸೇತುವೆ ನಿರ್ಮಿಸಲು ಪಾಲಿಕೆಯು ಯೋಜನೆ ರೂಪಿಸಿತ್ತು. ಈ ಯೋಜನೆ ಪೂರ್ಣಗೊಂಡಲ್ಲಿ ಈ 5 ಜಂಕ್ಷನ್ ಗಳಲ್ಲಿನ ಸಂಚಾರದ ಒತ್ತಡ ಶೇ.60ರಷ್ಟು ಕಡಿಮೆಯಾಗಿ ದಟ್ಟಣೆ ಅವಧಿಯಲ್ಲಿ 20 ನಿಮಿಷದಷ್ಟು ಸಮಯ ಉಳಿತಾಯವಾಗಲಿದೆ.
ಅದೇ ರೀತಿ ಕತ್ರಿಗುಪ್ಪೆ ಬಳಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನದಡಿ 152 ಕೋಟಿ ರೂ. ವೆಚ್ಚದಲ್ಲಿ ಇಟ್ಟಮಡು ಜಂಕ್ಷನ್, ಫುಡ್ ವರ್ಲ್ಡ್ ಹಾಗೂ ಕಾಮಾಕ್ಯ ಜಂಕ್ಷನ್ ಮಾರ್ಗದಲ್ಲಿ 1.56 ಕಿ.ಮೀ ಉದ್ದದ 4 ಲೇನ್ ಗಳ ಮೇಲ್ಸೇತುವೆ ನಿರ್ಮಿಸಲು ಪಾಲಿಕೆಯು ಸಮಗ್ರ ಯೋಜನಾ ವರದಿಯನ್ನು (DPR) ತಯಾರಿಸಿತ್ತು. ಈ ಯೋಜನೆ ಪೂರ್ಣಗೊಂಡಲ್ಲಿ ಮೈಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಈ ಸ್ಥಳದಲ್ಲಿ ಟ್ರಾಫಿಕ್ ಜಂಜಾಟವು ಶೇ.67ರಷ್ಟು ಕಡಿಮೆಯಾಗಿ ಈ ಭಾಗದಲ್ಲಿ ಸಂಚರಿಸುವ ಅವಧಿಯು 18 ನಿಮಿಷ ಉಳಿತಾಯವಾಗುತ್ತದೆ ಎಂದು ಡಿಪಿಆರ್ ನಲ್ಲಿ ತಿಳಿಸಲಾಗಿದೆ.
ಉಳಿದಂತೆ ಪಾಲಿಕೆಯು ಕೆಂಗೇರಿಯಿಂದ ಮಾಗಡಿ ರಸ್ತೆವರೆಗಿನ ಹಳೆ ಹೊರವರ್ತುಲ ರಸ್ತೆಯಲ್ಲಿ ಐದು ಕಡೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಚ್ಚೆತ್ತುಕೊಳ್ಳದಿದ್ದರೆ ಮೆಟ್ರೊ ಯೋಜನೆಗೆ ಆಗುತ್ತಿತ್ತು ತೊಂದರೆ :
ಪಾಲಿಕೆ ಒಂದೊಮ್ಮೆ ಮೇಲ್ಸೇತುವೆ ನಿರ್ಮಾಣ ಮಾಡಲು ಆರಂಭಿಸಿದ ನಂತರ ಮೆಟ್ರೊ ಕಾಮಗಾರಿ ಆರಂಭವಾಗಿದ್ದರೆ ರೈಲು ಮಾರ್ಗಕ್ಕೆ ಅಗತ್ಯವಾದ ಪಿಲ್ಲರ್ ಕಂಬ, ವಯಾಡಕ್ಟ್ ಅಳವಡಿಸಲು ಸಮಸ್ಯೆಯಾಗಿ ಯೋಜನೆ ಮತ್ತಷ್ಟು ವಿಳಂಬವಾಗುತ್ತಿತ್ತು. ಆದರೆ ಸಕಾಲದಲ್ಲಿ ಎರಡೂ ಸಂಸ್ಥೆಗಳು ಎಚ್ಚೆತ್ತುಕೊಂಡಿರುವುದು ಸಮಾಧಾನಕರ ವಿಷಯವಾಗಿದೆ.
ಒಟ್ಟಿನಲ್ಲಿ ನಮ್ಮ ಮೆಟ್ರೊ, ಬಿಬಿಎಂಪಿಯು ಎರಡು ಮೇಲ್ಸೇತುವೆ ನಿರ್ಮಾಣವಾಗುವ ಸ್ಥಳದಲ್ಲಿ ಜಯದೇವ ಆಸ್ಪತ್ರೆ ಬಳಿಯಲ್ಲಿ ನಿರ್ಮಿಸುತ್ತಿರುವ ರೀತಿಯಲ್ಲಿ ಡಬಲ್‌ಡೆಕರ್ ಮೇಲ್ಸೇತುವೆ ನಿರ್ಮಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.