ಬೆಂಗಳೂರು, (www.bengaluruwire.com) : ದೇಶದಲ್ಲಿಯೇ ಡಿಜಿಟಲ್ ಪಾವತಿ ಬಳಕೆದಾರರ ಪ್ರಮಾಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ ನಡೆಯುವ ಹಣಪಾವತಿ ವಿಧಾನದಲ್ಲಿ ಡಿಜಿಟಲ್ ಮೂಲಕ ಪೇಮೆಂಟ್ ಮಾಡುವ ಬಳಕೆದಾರರ ಪ್ರಮಾಣ ಶೇ.39.4ರಷ್ಟಿದೆ.
ಇನ್ನು ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಪಾವತಿ ಮೌಲ್ಯದ ಪ್ರಮಾಣ (2021ರ ತ್ರೈಮಾಸಿಕದಲ್ಲಿ 75.33 ಕೋಟಿ ರೂ.)ದಲ್ಲಿ ರಾಜ್ಯವು ಶೇ.14.31ರಷ್ಟು ಪಾಲನ್ನು ಅಂದರೆ ಹೊಂದಿದೆ. ತೆಲಂಗಾಣದಲ್ಲಿ ಅತಿಹೆಚ್ಚಿನ ಅಂದರೆ ಶೇ.49ರಷ್ಟು ಜನರು ಬಳಕೆದಾರರು ಡಿಜಿಟಲ್ ಪಾವತಿ ವಿಧಾನದ ಮೂಲಕ ಹಣ ಪಾವತಿ ಮಾಡಿದ್ದಾರೆ.
ಡಿಜಿಟಲ್ ಪಾವತಿಯ ಮೂಲಕ ಹಣದ ವಹಿವಾಟಿನ ಪ್ರಮಾಣ, ಮೌಲ್ಯ ಹಾಗೂ ಬಳಕೆದಾರರ ತಲುಪುವಿಕೆಯ ಎಲ್ಲಾ ಪ್ರವೃತ್ತಿಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಹೊರಹೊಮ್ಮಿದೆ ಎಂದು ರಾಜ್ಯ ಸರ್ಕಾರದ ನೂತನ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22ರಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ಡಿಜಿಟಲ್ ಪಾವತಿ ಸಾಮಾನ್ಯ ಗ್ರಾಹಕರ ಬಳಕೆಗೆ ಅತಿ ಸುಲಭ ಹಾಗೂ ಪಟಾಪಟ್ ಅಂತ ಕೆಲಸ ಮುಗಿಸುವ ಸಾಧನವಾಗಿರಬಹುದು. ಆದರೆ ಡಿಜಿಟಲ್ ಪಾವತಿಗೆ ಸಂಬಂಧಿಸಿದ ವಂಚನೆಯ ಉಲ್ಬಣವು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. YouGov ಮತ್ತು ACI ನಡೆಸಿದ ಸಮೀಕ್ಷೆಯಲ್ಲಿ ಶೇ.71ರಷ್ಟು ಬಳಕೆದಾರರು ಡಿಜಿಟಲ್ ಪಾವತಿಗೆ ಬದಲಾವಣೆಗೊಂಡಿದ್ದರಿಂದ ವಂಚನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ, ಎನ್ ಪಿಸಿಐ, ಆರ್ ಬಿಐ ಮತ್ತು ಪಾವತಿ ಕಂಪನಿಗಳು ಫಿಶಿಂಗ್ ಮತ್ತು ಭದ್ರತೆಯ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದ್ದು, ದೃಢವಾದ ದೂರು ಪರಿಹಾರ ಕಾರ್ಯವಿಧಾನವನ್ನು ಸ್ಥಾಪಿಸಿದೆ. ಆದರೂ, ಪ್ರತಿವರ್ಷ ಡಿಜಿಟಲ್ ಪಾವತಿಗೆ ಸಂಬಂಧಿಸಿದ ವಂಚನೆಯ ಪ್ರಕರಣಗಳು ಏರಿಕೆ ಕಾಣುತ್ತಿದೆ ಎಂದು ರಾಜ್ಯ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಡಿಜಿಟಲ್ ಪಾವತಿಯಲ್ಲಿ ದೇಶಾದ್ಯಂತ 288 ಕೋಟಿ ರೂ. ವಂಚನೆ :
ದೇಶಾದ್ಯಂತ 2019-20ನೇ ಸಾಲಿನಲ್ಲಿ ಎಟಿಎಂ- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ ನೆಟ್ ವಹಿವಾಟುಗಳಲ್ಲಿ ಬರೋಬ್ಬರಿ 288 ಕೋಟಿ ರೂ. ಮೌಲ್ಯದ ವಂಚನೆಗಳಾಗಿರುವುದನ್ನು ಬ್ಯಾಂಕ್ ಗಳು ವರದಿ ಮಾಡಿವೆ. ರಾಜ್ಯದಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ 1,573 ಡಿಜಿಟಲ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ಅವುಗಳ ಮೊತ್ತ 10.58 ಕೋಟಿ ರೂ.ಗಳಾಗಿತ್ತು. 2019-20ನೇ ಸಾಲಿನಲ್ಲಿ 2,845ಕ್ಕೆ ವಂಚನೆ ಪ್ರಕರಣಗಳು ಏರಿಕೆಯಾಗಿದ್ದು, ಈ ವರ್ಷದಲ್ಲಿ ವಂಚನೆಯಾದ ಮೌಲ್ಯ 17.57 ಕೋಟಿ ರೂ. ಗೆ ಹೆಚ್ಚಳವಾಗಿದೆ. ಆದರೂ ಒಂದು ಸಮಾಧಾನ ಸಂಗತಿಯೆಂದರೆ ದೇಶದಲ್ಲಿನ ಒಟ್ಟು ಡಿಜಿಟಲ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳಲ್ಲಿ ರಾಜ್ಯದಲ್ಲಾಗುವ ಮೋಸದ ಪ್ರಮಾಣ ಶೇ.5.5ರಷ್ಟಿದೆ. ದೇಶದಲ್ಲಿ ನಡೆಯವ ವಂಚನೆ ಪ್ರಮಾಣ ಮಹಾರಾಷ್ಟ್ರದಲ್ಲಿ ಶೇ.42.1ರಷ್ಟಿದ್ದು, ಮೊದಲನೇ ಸ್ಥಾನದಲ್ಲಿದೆ. ಭಾರತದಲ್ಲಿ ನಡೆಯುವ ಡಿಜಿಟಲ್ ವಹಿವಾಟಿನ ಅತ್ಯಂತ ಹೆಚ್ಚಿನ ಪಾಲವನ್ನು ಕರ್ನಾಟಕವು ಹೊಂದಿದ್ದರೂ, ರಾಷ್ಟ್ರಮಟ್ಟದ ವಂಚನೆ ದರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಮೋಸಕ್ಕೆ ಒಳಗಾಗುವ ಪ್ರಮಾಣ ಕಡಿಮೆಯಿದೆ. ಈ ಸವಾಲನ್ನು ಎದುರಿಸಲು ರಾಜ್ಯ ಸರ್ಕಾರ ಆಧುನಿಕ ಪರಿಕರ ಹಾಗೂ ಸಾಮರ್ಥ್ಯಗಳೊಂದಿಗೆ ತನ್ನ ಸೈಬರ್ ಕೋಶಗಳನ್ನು ಬಲಪಡಿಸಿಕೊಳ್ಳಬೇಕಿದೆ ಎಂದು ರಾಜ್ಯ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ದೇಶದಲ್ಲಿದ್ದಾರೆ 15 ಕೋಟಿ ಸಕ್ರಿಯ ಯುಪಿಐ ಬಳಕೆದಾರರು :
ದೇಶದಲ್ಲಿ ಯುಪಿಐ (UPI) ಪಾವತಿಗಳ ಹೆಚ್ಚಳದೊಂದಿಗೆ ಡಿಜಿಟಲ್ ಪೇಮೆಂಟ್ ಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ನವೆಂಬರ್ 2021ರ ತನಕ ಯುಪಿಐ ಸರಿಸುಮಾರು 150 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಅಂದರೆ 15 ಕೋಟಿ ಬಳಕೆದಾರರನ್ನು ಹೊಂದಿದೆ. ಈ ತಂತ್ರಜ್ಞಾನದ ಮೂಲಕ ಒಂದು ದಿನದಲ್ಲಿ 10 ಮಿಲಿಯನ್ ವಹಿವಾಟನ್ನು ನಡೆಸಲಾಗುತ್ತಿದೆ. ಈ ಯುಪಿಐ ನಲ್ಲಿ ಫೋನ್ ಪೇ (Phone pe) ಪ್ರಮುಖ ಪಾವತಿ ವಿಧಾನವಾಗಿದೆ. ಡಿಜಿಟಲ್ ಮಾರಕಟ್ಟೆಯಲ್ಲಿ ಶೇ.46.7ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
ಏನಿದು ಕರ್ನಾಟಕ ಆರ್ಥಿಕ ಸಮೀಕ್ಷೆ – 2021-22?
ರಾಜ್ಯ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ, ನೀತಿಗಳ ಮುಖ್ಯಾಂಶಗಳು ಮತ್ತು ಭವಿಷ್ಯದ ನೀತಿ ಉಪಕ್ರಮಗಳು ಹಾಗೂ ಆರ್ಥಿಕತೆಯ ನಿರೀಕ್ಷೆಗಳ ಸಾರಾಂಶವನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯು ಬಿಂಬಿಸುತ್ತದೆ. ರಾಜ್ಯದ ಎಲ್ಲಾ ವಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಕ್ಷೇತ್ರವಾರು ನಿರ್ದಿಷ್ಟ ಅಂತರ ಮತ್ತು ಸವಾಲುಗಳನ್ನು ಗುರ್ತಿಸಿ, ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಈ ದಾಖಲೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆ.