ಬೆಂಗಳೂರು, (www.bengaluruwire.com) : ರಾಜ್ಯದಾದ್ಯಂತ ಜಮೀನಿನ ಅಳತೆಗಾಗಿ ಹದ್ದುಬಸ್ತು ಅರ್ಜಿ ಶುಲ್ಕವನ್ನು ಏಕಾಏಕಿ 43ರಿಂದ 57 ಪಟ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದ ಕಂದಾಯ ಇಲಾಖೆ, ಸಾರ್ವಜನಿಕರು, ರೈತರಿಂದ ಒತ್ತಡ ಹೆಚ್ಚಿದ್ದರಿಂದ ಪರಿಷ್ಕರಿಸಿದ್ದ ದರವನ್ನು ಈಗ ಇಳಿಕೆ ಮಾಡಿದೆ.
ಇದು “ಬೆಂಗಳೂರು ವೈರ್” ವರದಿಯ ಫಲಶ್ರುತಿ. ಫೆಬ್ರವರಿ 2ನೇ ತಾರೀಖಿನಂದು “ಬೆಂಗಳೂರು ವೈರ್” ‘ರಾಜ್ಯದಲ್ಲಿ ಸರ್ವೆ ಇಲಾಖೆಯ ಹದ್ದುಬಸ್ತು ಶುಲ್ಕ ಏಕಾಏಕಿ 43 ರಿಂದ 57 ಪಟ್ಟು ಏರಿಕೆ…!’ ಎಂಬ ತಲೆಬರಹದಡಿ ವಿಸ್ತ್ರತವಾಗಿ ವಿಶೇಷ ಸುದ್ದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ, ಅತಿಹೆಚ್ಚು ಜಮೀನು ಅಥವಾ ಸ್ವತ್ತಿನ ಅಳತೆ ಅರ್ಜಿಗಳು ಬರುವ ಗ್ರಾಮೀಣ ಪ್ರದೇಶದಲ್ಲಿನ ಹದ್ದುಬಸ್ತು ಶುಲ್ಕವನ್ನು ಗಣನೀಯವಾಗಿ ಇಳಿಕೆ ಮಾಡಿ ಈ ಸಂಬಂಧ ಫೆ.9ರಂದು ನೂತನ ಪರಿಷ್ಕೃತ ದರವನ್ನು ಪ್ರಕಟಿಸಿ ಆದೇಶ ಹೊರಡಿಸಿದೆ.
ಇದನ್ನೂ ಮಿಸ್ ಮಾಡದೆ ಓದಿ : BW Special | Land Survey HadduBastu | ರಾಜ್ಯದಲ್ಲಿ ಸರ್ವೆ ಇಲಾಖೆಯ ಹದ್ದುಬಸ್ತು ಶುಲ್ಕ ಏಕಾಏಕಿ 43 ರಿಂದ 57 ಪಟ್ಟು ಏರಿಕೆ…!
ಹೊಸ ಆದೇಶದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಹದ್ದುಬಸ್ತು ಶುಲ್ಕ ಎರಡು ಎಕರೆವರೆಗೆ ಈ ಹಿಂದೆ 1,500 ರೂ. ಏರಿಕೆ ಮಾಡಿದ್ದನ್ನು 500 ರೂ. ಗೆ ಇಳಿಕೆ ಮಾಡಿದೆ. ಅದೇ 2 ಎಕರೆ ನಂತರ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 300 ರೂ. ನಿಗಧಿಪಡಿಸಿದ ಹಿಂದಿನ ಆದೇಶದಲ್ಲಿನ ದರವನ್ನೇ ಮುಂದುವರೆಸಿದೆ. ಇನ್ನು ನಗರ ಪ್ರದೇಶದಲ್ಲಿ ಈ ಹಿಂದೆ ಎರಡು ಎಕರೆವೆರೆಗೆ 2,000 ರೂ.ಗೆ ಏರಿಕೆ ಮಾಡಿದ್ದನ್ನು ಹಾಗೇ ಮುಂದುವರೆಸಿದೆ. ಗ್ರಾಮೀಣ ಮತ್ತು ನಗರಪ್ರದೇಶದಲ್ಲಿ ಅಳತೆ ಮಾಎಉವ ಪ್ರದೇಶದ ಅಕ್ಕಪಕ್ಕದ ಸ್ವತ್ತಿನ ಪ್ರತಿ ಮಾಲೀಕರಿಗೆ ನೋಟಿಸ್ ನೀಡುವ 25 ರೂ. ಶುಲ್ಕವನ್ನು ಅದೇ ರೀತಿ ಮುಂದುವರೆಸಿದೆ.
ಭೂಮಾಪನ ಇಲಾಖೆಯು 45 ವರ್ಷಗಳ ಬಳಿಕ ರಾಜ್ಯದಾದ್ಯಂತ ಹದ್ದುಬಸ್ತು ಅರ್ಜಿ ಶುಲ್ಕವನ್ನು ಏಕಾಏಕಿ 43 ಪಟ್ಟು ಹೆಚ್ಚಳ ಮಾಡಿದೆ. ಫೆಬ್ರವರಿ 1ನೇ ತಾರೀಖಿನಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ 43 ಪಟ್ಟು ಹದ್ದುಬಸ್ತು ಶುಲ್ಕ (35 ರೂ. ನಿಂದ 1,500ರೂ.ಗೆ) ಏರಿಕೆಯಾಗಿದ್ದರೆ, ನಗರ ಪ್ರದೇಶದಲ್ಲಿ 57 ಪಟ್ಟು (35ರೂ. ನಿಂದ 2,000 ರೂ.ಗೆ) ಏರಿಕೆ ಮಾಡಿದೆ ಎಂದು ಸುದ್ದಿಯಲ್ಲಿ ತಿಳಿಸಲಾಗಿತ್ತು.
ಆ ಬಳಿಕ ಏಕಾಏಕಿಯಾಗಿ ಸರ್ಕಾರ ಅಳತೆಗಾಗಿ ಭೂಮಾಪನಾ ಇಲಾಖೆಯ ಮೋಜಿಣಿ ವ್ಯವಸ್ಥೆಯಲ್ಲಿ ಹದ್ದುಬಸ್ತು ಶುಲ್ಕ ಅತಿಹೆಚ್ಚು ದರ ಏರಿಸಿದ ಬಗ್ಗೆ ಸಾರ್ವಜನಿಕರು ಹಾಗೂ ರೈತ ಸಮುದಾಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಪರಿಷ್ಕರಿಸಿದ್ದ ದರವನ್ನು ಮರುಪರಿಶೀಲಿಸಿ ಶುಲ್ಕವನ್ನು ಇಳಿಕೆ ಮಾಡಿದೆ.