ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಎಲ್ಲಾ ಪಾಲಿಕೆ ವಲಯ ಮುಖ್ಯ ಇಂಜಿನಿಯರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರದಿಂದಲೇ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿದೆ ಅವುಗಳ ತೆರವು ಮಾಡುವ ಕಾರ್ಯವನ್ನು ತೀವ್ರವಾಗಿ ಕೃಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ, ಪಾಲಿಕೆಯ ಎಲ್ಲಾ 8 ವಲಯಗಳಲ್ಲಿಯೂ ಮುಖ್ಯ ಇಂಜಿನಿಯರ್ ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಗ್ಸ್ ಗಳ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಸುತ್ತಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಳು, ಪಾದಚಾರಿ ಮಾರ್ಗ, ರಾಜಕಾಲುವೆಗೆ ಅಳವಡಿಸಿರುವ ಫೆನ್ಸಿಂಗ್ ಗಳ ಮೇಲೆ ಅಳವಡಿಸಿರುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ.
ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ, ವೈಟ್ ಫೀಲ್ಡ್, ಹೂಡಿ, ಹೆಚ್.ಬಿ.ಆರ್ ಲೇಔಟ್, ಯಲಹಂಕ, ಥಣಿಸಂದ್ರ ಮುಖ್ಯ ರಸ್ತೆ, ರಾಜಾಜಿನಗರ, ಹೆಚ್.ಎಸ್.ಆರ್ ಲೇಔಟ್, ಬೇಗೂರು ಮುಖ್ಯ ರಸ್ತೆ, ಅಂಜನಾಪುರ, ಜ್ಞಾನ ಭಾರತಿ ಲೇಔಟ್, ದಾಸರಹಳ್ಳಿ ಸೇರಿದಂತೆ ಇನ್ನಿತರೆ ಕಡೆ ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಎಲ್ಲೆಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆಯೋ ಅದನ್ನೆಲ್ಲಾ ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ಇಂದು ನಗರದಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಅನಧಿಕೃತ ಫ್ಲೆಕ್ಸ್ ಗಳ ತೆರವು ಕಾರ್ಯಚಾರಣೆಯನ್ನು ಮುಂದುವರೆಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.