ಬೆಂಗಳೂರು, (www.bengaluruwire.com) : ಎರಡನೇ ಹಂತದ ನಮ್ಮ ಮೆಟ್ರೊ ಸುರಂಗ ಮಾರ್ಗದ ಮೊದಲ ಟನಲ್ ಬೋರಿಂಗ್ ಮೆಷಿನ್ (ಟಿಬಿಎಮ್) ಊರ್ಜಾ ಯಂತ್ರ, ಸುರಂಗ ಕೊರೆದು ಬೆಳಗ್ಗೆ 10:16ಕ್ಕೆ ಸರಿಯಾಗಿ ಶಿವಾಜಿನಗರ ಮೆಟ್ರೋನಿಲ್ದಾಣದಲ್ಲಿ 13 ತಿಂಗಳ ಬಳಿಕ ಹೊರಬಂದಿದೆ.
ಶಿವಾಜಿನಗರದಿಂದ ಟ್ಯಾನರಿ ರಸ್ತೆ ನಿಲ್ದಾಣದವರೆಗೆ ಎರಡು ಸುರಂಗ ಮಾರ್ಗಗಳ ಪೈಕಿ ಊರ್ಜಾ ಉತ್ತರ ಮಾರ್ಗದಲ್ಲಿ 855 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆದಿತ್ತು. ಅಂತಿಮವಾಗಿ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಸುರಂಗ ಮಾರ್ಗಕ್ಕೆ ಹಾಕಲಾಗಿದ್ದ ಕಾಂಕ್ರೀಟ್ ತಡೆಗೋಡೆಯನ್ನು ಸೀಳಿ ಆಚೆ ಬಂದಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಮಹತ್ತರ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಟಿಬಿಎಮ್ ಯಂತ್ರ ಊರ್ಜಾ ಕಾರ್ಯಾಚರಣೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರಕ್ಕೆ ಇದೊಂದು ಪ್ರಮುಖ ಯೋಜನೆಯಾಗಿದೆ. ಮೆಟ್ರೋ ಎರಡನೇ ಹಂತದ ಕಾಮಗಾರಿ 2025 ರ ಡಿಸೆಂಬರ್ ಒಳಗೆ ಬದಲಾಗಿ 2024 ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಕ್ರಮವಹಿಸಿ ಎಂದು ಮೆಟ್ರೊ ಅಧಿಕಾರಿಗಳಿಗೆ ಗಡುವು ನೀಡಿದರು.
ಮೆಟ್ರೊ ಹೆಚ್ಚಿನ ಕಾರ್ಮಿಕರು, ಅಧಿಕಾರಿಗಳು ಹಾಗೂ ಯಂತ್ರೋಪಕರಣ ಮತ್ತಿತರ ಸಂಪನ್ಮೂಲ ಬಳಸಿ ಗಡುವಿಗಿಂತ ಒಂದು ವರ್ಷ ಮುಂಚೆ ಕಾಮಗಾರಿ ಮುಗಿಸಲಿ. ಇದರಿಂದ ನಗರದ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಲಿದೆ. ಸುರಂಗ ಮಾರ್ಗ ನಿರ್ಮಾಣ ಬಹಳ ಸವಾಲಿನ ಕೆಲಸ. ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಮಾಡುವಾಗ ಮೆಜಿಸ್ಟಿಕ್ ನಲ್ಲಿಬಟಿಬಿಎಮ್ ಯಂತ್ರ ಸಿಲುಕಿ ಕಾಮಗಾರಿಗೆ ಸಾಕಷ್ಟು ಅಡಚಣೆ ಆಗಿತ್ತು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಪೂರ್ಣಗೊಳಿಸಲಾಗಿತ್ತು.
ಹಿಂದಿನ ಅನುಭವದ ಆಧಾರದ ಮೇಲೆ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕೆಲಸವನ್ನು ಯಶಸ್ವಿಯಾಗಿ ನಮ್ಮ ಮೆಟ್ರೊ ಪೂರ್ಣಗೊಳಿಸಲಿ. ಊರ್ಜಾ ಯಂತ್ರ ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿದ್ದು, ಮುಂದೆ ಕಂಟೋನ್ಮೆಂಟ್ ನಿಂದ ಪಾಟರಿ ಟೌನ್ ಸುರಂಗ ನಿಲ್ದಾಣದ ತನಕ ಸುರಂಗ ಕೊರೆಯಲು ಬಳಕೆಯಾಗಲಿದೆ ಎಂದು ಸಿಎಂ ಹೇಳಿದರು.
ಮೆಟ್ರೊ ಗೆ ಬೆಂಗಳೂರಿನ ಜನ ಸಹಕಾರ ಮಾಡಿದ್ದಾರೆ. ಈ ಕಾಮಗಾರಿಗಳಿಂದ ಸಂಚಾರ ಅಡಚಣೆ ಮತ್ತಿತರ ತೊಂದರೆ ಆದರೂ ಸಹಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏರ್ ಪೋರ್ಟ್ 2ಬಿ ಮಾರ್ಗದ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಿದ್ದೇವೆ. ಎರಡನೇ ಹಂತ ಪೂರ್ಣಗೊಂಡ ಬಳಿಕ ಮೂರನೇ ಹಂತದ ಕಾಮಗಾರಿ ಕಾರ್ಯಾರಂಭ ಮಾಡಲಿದೆ. ಮೂರು ಹಂತ ಪೂರ್ಣ ಗೊಂಡಾಗ ನಗರ ಸಾರಿಗೆಯಲ್ಲಿ ಮೆಟ್ರೋ ಲೈಫ್ ಲೈನ್ ಆಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ಲೇಷಿಸಿದರು.
ಬಳಿಕ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಇವತ್ತು ಬಿಎಂಆರ್ಸಿಎಲ್ ಗೆ ಖುಷಿಯ ದಿನ. ಮೊದಲ ಹಂತ ಯಶಸ್ವಿ ಬಳಿಕ ಎರಡನೇ ಹಂತದ ಸುರಂಗ ಮಾರ್ಗದಲ್ಲಿ ಮೊದಲ ಟಿಬಿಎಮ್ ಊರ್ಜಾ ತನ್ನ ಪಾಲಿನ ಒಂದು ಹಂತದ ಕಾರ್ಯಾಚರಣೆ ಮುಗಿಸಿದೆ. ಆರ್ ವಿ ರಸ್ತೆ – ಬೊಮ್ಮಸಂದ್ರ ಮೆಟ್ರೊ ಮಾರ್ಗ ಹಾಗೂ ಡೈರಿ ಸರ್ಕಲ್ , ಕಂಟೋನ್ಮೆಂಟ್ ಸುರಂಗ ಮಾರ್ಗ ಸವಾಲಿನ ಮಾರ್ಗ ಆಗಿದೆ.
2ನೇ ಹಂತದ ಮೆಟ್ರೊ ಸುರಂಗ ಮಾರ್ಗದಲ್ಲಿ ಶೇ.60 ಕಲ್ಲುಗಳಿವೆ :
ಪ್ರತಿನಿತ್ಯ 9 ಟಿಬಿಎಂ ಗಳು ಮೂರೂವರೆ ಕಿಲೋ ಮೀಟರ್ ಸುರಂಗ ಕೊರೆಯುತ್ತವೆ. ಮುಖ್ಯಮಂತ್ರಿಗಳು ನೀಡಿದ ಗಡುವಿನಂತೆ ಮೆಟ್ರೊ ಟಾರ್ಗೆಟ್ ಗಿಂತ ಒಂದು ವರ್ಷ ಮೊದಲೇ ಎರಡನೇ ಹಂತದ ಕಾಮಗಾರಿ ಕೆಲಸ ಮುಗಿಸಲು ಬದ್ಧರಾಗಿದ್ದೇವೆ. 13.9 ಕಿ.ಮೀ ಸುರಂಗ ಮಾರ್ಗದಲ್ಲಿ ಶೇ.60 ರಷ್ಟು ಕಠಿಣವಾದ ಬಂಡೆಗಲ್ಲು, ಮೆದುಗಲ್ಲು ಸೇರಿದಂತೆ ವಿವಿಧ ಬಗೆಯ ಕಲ್ಲುಗಳಿರುವುದು ಭೌಗೋಳಿಕ ಸಮೀಕ್ಷೆ ನಡೆಸಿದಾಗ ತಿಳಿದು ಬಂದಿದೆ. ಟಿಬಿಎಂ ದಿನದ 24 ಗಂಟೆ ಕಾರ್ಯಾಚರಣೆ ನಡೆಸುತ್ತವೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಮರಗಳ ಕಡಿತ ವಿಚಾರದ ಅಡ್ಡಿ ನಿವಾರಣೆ :
ಎರಡನೇ ಹಂತದಲ್ಲಿ ಕಾಮಗಾರಿ ನಡೆಯುವ ಮಾರ್ಗದಲ್ಲಿ ಮರಗಳ ವಿಚಾರದಲ್ಲಿ ಇದ್ದ ಅಡ್ಡಿ ಆತಂಕಗಳನ್ನು ಹೈಕೋರ್ಟ್ ನಿವಾರಿಸಿದೆ. ಏರ್ ಪೋರ್ಟ್ 2ಬಿ ಮಾರ್ಗ ನಿರ್ಮಾಣದ ವಿಚಾರದಲ್ಲಿ ಇದ್ದ ಸಮಸ್ಯೆ ನಿವಾರಣೆಯಾಗಿದೆ. ಏರ್ ಪೋರ್ಟ್ ಮೆಟ್ರೊ ಮಾರ್ಗ ಪೂರ್ಣಗೊಳಿಸಲು 2025ರ ಡಿಸೆಂಬರ್ ಗುರಿಯಿದ್ದರೂ ಒಂದು ವರ್ಷ ಮೊದಲೇ ಕಾಮಗಾರಿ ಮುಗಿಸುತ್ತೇವೆ ಎಂದು ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಭರವಸೆ ನೀಡಿದರು.
ಮೆಟ್ರೊ ಎರಡನೇ ಹಂತದ ಕಾಮಗಾರಿಗಳ ಪೈಕಿ ಗೊಟ್ಟಗೆರೆಯಿಂದ ನಾಗಾವಾರದ ತನಕ ಒಟ್ಟು 21 ಕಿ.ಮೀ ಮೆಟ್ರೋ ಮಾರ್ಗವಿದೆ. ಆ ಪೈಕಿ 13.9 ಕಿ.ಮೀ ಮಾರ್ಗ ಸುರಂಗ ಮಾರ್ಗವಾಗಿದ್ದು ಒಟ್ಟು 4 ಪ್ಯಾಕೇಜ್ ಗಳಲ್ಲಿ ಮೂರು ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿದೆ.
ಊರ್ಜಾ ಟಿಬಿಎಮ್ ಯಂತ್ರ ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರು ಹಾಗೂ ಮೆಟ್ರೋ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಅಧಿಕಾರಿಗಳ ಅನುಭವ :
“ಬಿಎಂಆರ್ ಸಿಎಲ್ ನೇತೃತ್ವದಲ್ಲಿ ನಡೆಯುತ್ತಿರುವ ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ಊರ್ಜಾ ಟಿಬಿಎಮ್ ಯಂತ್ರ ಹಳೆಯ ಪ್ರದೇಶ ಹಾಗೂ ಹಳೆಯ ಕಟ್ಟಡಗಳಿರುವ ಭೂಮಿಯಡಿ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದೆ. ಈ ಭಾಗದಲ್ಲಿ ಟಿಬಿಎಮ್ ಯಂತ್ರದ ಮೇಲೆ ಹೆಚ್ಚಿನ ಒತ್ತಡ ಇರಲಿಲ್ಲ. ಯಂತ್ರದ ವೈಬ್ರೇಷನ್ ಜಾಸ್ತಿ ಬಂದಿರಲಿಲ್ಲ. ಶಿವಾಜಿನಗರ – ಟ್ಯಾನರಿ ರಸ್ತೆ ಮಾರ್ಗದಲ್ಲಿ 14 ಬೋರ್ ವೆಲ್ ಗಳ ಪೈಕಿ 3 ಬೋರ್ ವೆಲ್ ಬಳಕೆಯಾಗುತ್ತಿರಲಿಲ್ಲ. ಉಳಿದ ಬೋರ್ ವೆಲ್ ಮಾಲೀಕರಿಗೆ ಪರಿಹಾರ ನೀಡಿ ಅದನ್ನು ಬಂದ್ ಮಾಡಿ ಕೆಲಸ ಮಾಡಿದ್ದೇವೆ.”
– ಮಜರ್, ಎಇಇ, ಬಿಎಂಆರ್ ಸಿಎಲ್
“ಕಳೆದ ಒಂದು ವರ್ಷದಿಂದ ಊರ್ಜಾ ಟಿಬಿಎಮ್ ಬಳಸಿ ದಿನದ 24 ಗಂಟೆ ಕೆಲಸ ಮಾಡಿ ಬುಧವಾರ ಯಶಸ್ವಿಯಾಗಿ ಶಿವಾಜಿನಗರ ನಿಲ್ದಾಣಕ್ಕೆ ಈ ಯಂತ್ರ ಬಂದು ನಿಂತಿದೆ. ಒಂದೊಂದು ಶಿಫ್ಟ್ ನಲ್ಲಿ ತಲಾ 60 ಜನ ಕಾರ್ಮಿಕರು ಸೇರಿದಂತೆ ಎರಡು ಶಿಫ್ಟ್ ನಲ್ಲಿ 120 ಮಂದಿ ಕಾರ್ಯ ನಿರ್ವಹಿಸಿ ಎದುರಾದ ಸವಾಲುಗಳನ್ನು ನಿವಾರಿಸಿ ಯಶಸ್ವಿಯಾಗಿದ್ದೇವೆ. ಸುರಂಗ ಕಾಮಗಾರಿ ಸ್ಥಳದಲ್ಲಿ ಆಮ್ಲಜನಕ ಸಿಲಿಂಡರ್, ವೈದ್ಯರು ಸೂಕ್ತ ಔಷಧಿ ಹಾಗೂ ವೈದ್ಯೋಪಕರಣಗಳೊಂದಿಗೆ ಸದಾ ಲಭ್ಯವಿರುತ್ತಾರೆ. ಆ ಮೂಲಕ ಕಾರ್ಮಿಕರ ಸುರಕ್ಷತೆಗೆ ಆದ್ಯ ಗಮನ ನೀಡಿ ಭೂಮಿ ಮೇಲಿನ ಕಟ್ಟಡಗಳಿಗೆ ಹಾನಿಯಾಗದಂತೆ ಊರ್ಜಾ ಕೆಲಸ ಮಾಡಿದೆ.”
– ರೋಹಿತ್, ಎಲ್ ಅಂಡ್ ಟಿ ಟನಲ್ ಸುರಕ್ಷತಾ ಮ್ಯಾನೇಜರ್