ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೊ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿರುವ 9 ಟನಲ್ ಬೋರಿಂಗ್ ಮೆಷಿನ್ (ಟಿಬಿಎಮ್) ಪೈಕಿ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದಿಂದ ಊರ್ಜಾ ಸುರಂಗ ಕೊರೆಯುವ ಯಂತ್ರ ನಾಳೆ ಹೊರಬರಲಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿಯಾಗಲಿದ್ದಾರೆ.
ಒಟ್ಟು 805.50 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆಯುವ ಕೆಲಸವನ್ನು ಊರ್ಜಾ ಟನಲ್ ಬೋರಿಂಗ್ ಮೆಷಿನ್ ಕಳೆದ ವರ್ಷದ ಆಗಸ್ಟ್ ನಲ್ಲಿ ಕೆಲಸ ಆರಂಭಿಸಿತ್ತು. ಕೊರೊನಾ ಸಂಕಷ್ಟ ಸಂದರ್ಭದಿಂದಾಗಿ ಕೆಲಸ ತಡವಾಗಿ ಸುರಂಗ ನಿರ್ಮಾಣ ಕೆಲಸ ಆರಂಭವಾದ ಹದಿಮೂರುವರೆ ತಿಂಗಳ ನಂತರ ಊರ್ಜಾ ಬೃಹತ್ ಯಂತ್ರ ನಾಳೆ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದ ಬಳಿ ಹೊರಬರಲಿದೆ. ಬೆಳಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಊರ್ಜಾ ಟಿಬಿಎಮ್ ಮೆಷಿನ್ ಸುರಂಗ ಕೊರೆಯುವ ಒಂದು ಭಾಗದ ಕೆಲಸವನ್ನು ಪೂರ್ಣಗೊಳಿಸಿ ಆಚೆ ಬರಲಿದೆ.
ಪ್ಯಾಕೇಜ್- 3 ರಲ್ಲಿ ಎಲ್ ಅಂಡ್ ಟಿ ಸಂಸ್ಥೆಯು 2.88 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಶಿವಾಜಿನಗರದಿಂದ ಶಾಧಿ ಮಹಲ್ ಶಾಫ್ಟ್ ವರೆಗೆ ನಿರ್ಮಿಸಿ ಕಂಟೋನ್ಮೆಂಟ್ ಹಾಗೂ ಪಾಟರಿಟೌನ್ ಎರಡು ಸ್ಥಳದಲ್ಲಿ ನೆಲದೊಳಗಿನ ಮೆಟ್ರೊ ನಿಲ್ದಾಣ ನಿರ್ಮಾಣ ಮಾಡುವ ಟೆಂಡರ್ ಅನ್ನು ಪಡೆದುಕೊಂಡಿತ್ತು. ಈ ವಿಭಾಗದಲ್ಲಿ ಟಿಬಿಎಮ್ ಊರ್ಜಾ ಕಳೆದ ವರ್ಷ ಮೊದಲಿಗೆ ಸುರಂಗ ಕೊರೆಯುವ ಕೆಲಸ ಆರಂಭಿಸಿತ್ತು. ತದನಂತರ 1ನೇ ಆಗಸ್ಟ್ 2020ರಂದು ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸುರಂಗ ಮಾರ್ಗದಲ್ಲಿ ಆಳೆತ್ತರದ ಭಾರೀ ರಿಂಗ್ ಅಳವಡಿಸುವ ಕಾರ್ಯವನ್ನು ಆರಂಭಿಸಿತ್ತು.
“ನಮ್ಮ ಮೆಟ್ರೊನ ಶಿವಾಜಿನಗರ ಸುರಂಗ ಮೆಟ್ರೊ ನಿಲ್ದಾಣದಲ್ಲಿ ಊರ್ಜಾ ಟಿಬಿಎಮ್ ಮೆಷಿನ್ ತನ್ನ ನಿಗಧಿತ ಗುರಿಯ ಸುರಂಗ ನಿರ್ಮಾಣ ಕಾರ್ಯವನ್ನು ಮುಗಿಸಿ ಹೊರಬರುತ್ತಿದೆ. ನಮ್ಮ ಮೆಟ್ರೊಗೆ ಇದು ಅತ್ಯಂತ ಪ್ರಮುಖ ಕ್ಷಣವಾಗಿದೆ. ಮೆಟ್ರೊ ಮೊದಲ ಹಂತದಲ್ಲೂ ಸುರಂಗ ನಿರ್ಮಾಣ ಕಾರ್ಯವನ್ನು ಬಿಎಂಆರ್ ಸಿಎಲ್ ಯಶಸ್ವಿಯಾಗಿ ಕೈಗೊಂಡಿತ್ತು. ಇದೀಗ ಅತ್ಯಂತ ಸವಾಲಿನ ಮಾರ್ಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಏಕಂದರೆ ಶಿವಾಜಿನಗರ ಮಾರ್ಗದ ಈ ಉತ್ತರ ಸರಹದ್ದಿನಲ್ಲಿ ಭೂಮಿಯ ಅಡಿ ಸಡಿಲ ಮಣ್ಣು ಹಾಗೂ ಹಳೆಯ ಬೋರ್ ವೆಲ್, ಬಾವಿಗಳು ಸಾಕಷ್ಟು ಇದ್ದು, ಅವುಗಳಿಗೆ ಭೂಮೇಲ್ಭಾಗದಲ್ಲಿನ ಆಸ್ತಿಗಳಿಗೆ ಹಾನಿಯಾಗದಂತೆ ಭೂಮಿಯನ್ನು ಕೊರೆದು ಸುರಂಗ ನಿರ್ಮಿಸುವುದು ಸಾಕಷ್ಟು ತ್ರಾಸದಾಯಕ ಹಾಗೂ ಅತ್ಯಂತ ಸವಾಲಿನಿಂದ ಕೂಡಿತ್ತು. ಈ ಕ್ಲಿಷ್ಟ ಪರಿಸ್ಥಿತಿಯನ್ನು ಮೆಟ್ರೊ ಯಶಸ್ವಿಯಾಗಿ ನಿಭಾಯಿಸಿದೆ. ”
– ಅಂಜುಮ್ ಪರ್ವೇಜ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರು
ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗಾವರ ವರೆಗಿನ ರೀಚ್-6 ಮಾರ್ಗ ಒಟ್ಟು 21 ಕಿ.ಮೀ ಇದ್ದು ಆ ಪೈಕಿ 13.9 ಕಿ.ಮೀ ಸುರಂಗ ಮಾರ್ಗವು ಬರಲಿದ್ದು, ಒಟ್ಟು 13 ಸುರಂಗ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿದೆ. ಒಟ್ಟು 4 ಪ್ಯಾಕೇಜ್ ನಲ್ಲಿ 3 ಕಂಪನಿಗಳು ಈ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಪ್ಯಾಕೇಜ್ -3ರಲ್ಲಿ ಶಿವಾಜಿನಗರದಿಂದ ಶಾಧಿ ಮಹಲ್ ವರೆಗಿನ 2.88 ಕಿ.ಮೀ ಮಾರ್ಗದಲ್ಲಿ ಟಿಬಿಎಮ್-1 ಮೆಷಿನ್ ಊರ್ಜಾ ಹಾಗೂ ಟಿಬಿಎಮ್-2 ವಿಂದ್ಯ ಎಂಬ ಸುರಂಗ ಕೊರೆಯುವ ಯಂತ್ರವು ನೆಲದೊಳಗೆ ಸುರಂಗವನ್ನು ಕೊರೆಯುವ ಕಾರ್ಯದಲ್ಲಿ ನಿರತವಾಗಿದೆ. ಸಾಮಾನ್ಯವಾಗಿ ಟನಲ್ ಬೋರಿಂಗ್ ಮೆಷಿನ್ ಪ್ರತಿದಿನಕ್ಕೆ ಸರಾಸರಿ 3.5 ಮೀಟರ್ ನಷ್ಟು ಸುರಂಗ ಕೊರೆಯುತ್ತದೆ. ಕೆಲವೊಮ್ಮೆ ಭೂಗತ ಮಾರ್ಗದಲ್ಲಿ ಸಡಿಲ ಮಣ್ಣು, ಗಡ್ಡಿ ಬಂಡೆಗಳು ಇರದಿದ್ದ ಪಕ್ಷದಲ್ಲಿ ದಿನವೊಂದಕ್ಕೆ 600 ಮೀಟರ್ ನಿಂದ ಒಂದು ಕಿಲೋ ಮೀಟರ್ ತನಕವೂ ಟನಲ್ ಕೊರೆದ ಉದಾಹರಣೆಗಳಿವೆ. ಊರ್ಜಾ ಟಿಬಿಎಮ್ ಯಂತ್ರ ಸಾಗಿದ 805 ಮೀಟರ್ ಮಾರ್ಗದಲ್ಲಿ 355 ಮೀಟರ್ ಗೂ ಹೆಚ್ಚು ಉದ್ದದಲ್ಲಿ ಕಠಿಣವಾದ ಕಲ್ಲುಬಂಡೆಗಳು, ಉಳಿದ ಭಾಗದಲ್ಲಿ ಸಡಿಲ ಮತ್ತು ಬಂಡೆ ಮಿಶ್ರಿತ ಮಣ್ಣು ಎದುರಾಗಿತ್ತು ಎಂದು ಹೇಳುತ್ತಾರೆ ಮೆಟ್ರೊ ಅಧಿಕಾರಿಗಳು.
ಕೋವಿಡ್ ಕಾರಣದಿಂದ ಕಾಮಗಾರಿ ವಿಳಂಬ :
ಊರ್ಜಾ ಟಿಬಿಎಮ್ ಯಂತ್ರವು 805 ಮೀಟರ್ ಉದ್ದದ ಸುರಂಗ ಮಾರ್ಗವನ್ನು ಕೊರೆಯಲು ಬರೋಬ್ಬರಿ 13 ತಿಂಗಳು ತೆಗೆದುಕೊಂಡಿದೆ. ಕೋವಿಡ್ ಸೋಂಕು ಹೆಚ್ಚಾದ ಕಾರಣ ಸುರಕ್ಷತೆಯ ಕಾರಣದಿಂದ ಕಾಮಗಾರಿಯು ನಾಲ್ಕೈದು ತಿಂಗಳು ನಡೆದಿರಲಿಲ್ಲ. ಹಾಗಾಗಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಕೊಂಚ ವಿಳಂಬವಾಯಿತು ಎಂದು ಹೇಳುತ್ತಾರೆ ಮೆಟ್ರೊ ಎಂಡಿ ಅಂಜುಮ್ ಪರ್ವೇಜ್.
ಅಕ್ಟೋಬರ್ ನಲ್ಲಿ ಸುರಂಗದಿಂದ ಆಚೆ ಬರಲಿದೆ ವಿಂದ್ಯ ಟಿಬಿಎಮ್ :
ಮುಂದಿನ ತಿಂಗಳು ಇದೇ ಮಾರ್ಗದ ದಕ್ಷಿಣ ಸರಹದ್ದಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂದ್ಯ ಹೆಸರಿನ ಟಿಬಿಎಮ್ ಯಂತ್ರವೂ ತನ್ನ ನಿಗಧಿತ ಮಾರ್ಗದಲ್ಲಿ ಸುರಂಗ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಲಿದೆ. ಬಳಿಕ ಊರ್ಜಾ ಹಾಗೂ ವಿಂದ್ಯ ಹೆಸರಿನ ಈ ಎರಡು ಟಿಬಿಎಮ್ ಯಂತ್ರವನ್ನು ಬಿಡಿ ಬಿಡಿಯಾಗಿ ಬಿಚ್ಚಿ ಮೇಲಕ್ಕೆತ್ತಿ ಬೇರೆ ಕಡೆ ಸಾಗಿಸಿ ಅನ್ಯ ದಿಕ್ಕಿನಲ್ಲಿ ಸುರಂಗ ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತದೆ. ಅದರಲ್ಲೂ ಊರ್ಜಾ ಟಿಬಿಎಮ್ ಯಂತ್ರವನ್ನು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ಸುರಂಗ ಮೆಟ್ರೋ ನಿಲ್ದಾಣದ ಮಾರ್ಗದಲ್ಲಿ ಸುರಂಗ ತೋಡಲು ಬಳಸಲಾಗುತ್ತದೆ. ಇನ್ನು ಒಂದು ಅಥವಾ ಎರಡು ತಿಂಗಳ ಅಂತರದಲ್ಲಿ ವಿವಿಧ ಟಿಬಿಎಮ್ ಯಂತ್ರಗಳು ತಮಗೆ ವಹಿಸಿದ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ ಒಂದೊಂದಾಗಿ ಹೊರಬರಲಿದೆ ಎಂದು ಅವರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ರೀಚ್ -6 ಸುರಂಗ ಮಾರ್ಗ ಕಾಮಗಾರಿಗಳ ಪ್ರಗತಿ ಹೀಗಿದೆ :
ಪ್ಯಾಕೇಜ್- 1 (ದಕ್ಷಿಣ ರ್ಯಾಂಪ್ ನಿಂದ ಡೈರಿ ವೃತ್ತದವರೆಗಿನ 3.65 ಕಿ.ಮೀ ಸುರಂಗ ಮಾರ್ಗ)
ರುದ್ರ, ವಮಿಕ ಹಾಗೂ ವರದ ಎಂಬ ಮೂರು ಟಿಬಿಎಮ್ ಯಂತ್ರಗಳು ಆಗಸ್ಟ್ ಅಂತ್ಯದ ತನಕ ಶೇ.17.77 ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್ ಫೋರ್ಡ್ ಟೌನ್ ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆ ಎಂಬ 4 ಸುರಂಗ ಮೆಟ್ರೊ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ.
ಪ್ಯಾಕೇಜ್- 2 (ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿನಗರದವರೆಗಿನ 2.62 ಕಿ.ಮೀ ಸುರಂಗ ಮಾರ್ಗ)
ಅವನಿ ಹಾಗೂ ಲವಿ ಎಂಬ ಎರಡು ಸುರಂಗ ಕೊರೆಯುವ ಯಂತ್ರಗಳು ಆಗಸ್ಟ್ ಅಂತ್ಯದ ವೇಳೆಗೆ ಶೇ. 22.05ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಲೈನ್ ನಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ.ರಸ್ತೆ ಹಾಗೂ ಶಿವಾಜಿನಗರ ಮೆಟ್ರೊ ಸುರಂಗ ನಿಲ್ದಾಣದ ಕಾಮಗಾರಿ ವಿವಿಧ ಹಂತದಲ್ಲಿ ಸಾಗಿದೆ.
ಪ್ಯಾಕೇಜ್ – 3 (ಶಿವಾಜಿನಗರದಿಂದ ಶಾದಿ ಮಹಲ್ ಶಾಫ್ಟ್ ವರೆಗಿನ 2.88 ಕಿ.ಮೀ ಸುರಂಗ ಮಾರ್ಗ)
ಊರ್ಜ ಮತ್ತು ವಿಂದ್ಯ ಎರಡು ಟಿಬಿಎಂ ಯಂತ್ರಗಳು ಆಗಸ್ಟ್ ಅಂತ್ಯದ ವೇಳೆಗೆ ಶೇ. 29.70ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಈ ಮಾರ್ಗದಲ್ಲಿ ಕಂಟೋನ್ಮೆಂಟ್ ಹಾಗೂ ಪಾಟರಿ ಟೌನ್ ಮೆಟ್ರೊ ಸುರಂಗ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿದೆ.
ಪ್ಯಾಕೇಜ್ -4 (ದಕ್ಷಿಣ ಟ್ಯಾನರಿ ರಸ್ತೆ ನಿಲ್ದಾಣದಿಂದ ಉತ್ತರ ರ್ಯಾಂಪ್ ವರೆಗಿನ 4.59 ಕಿ.ಮೀ ಸುರಂಗ ಮಾರ್ಗ)
ಈ ಮಾರ್ಗದಲ್ಲಿ ತುಂಗಾ ಮತ್ತು ಭದ್ರಾ ಎರಡು ಟಿಬಿಎಮ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು ಆಗಸ್ಟ್ ಅಂತ್ಯದ ವೇಳೆಗೆ ಶೇ.4.59 ಕಿ.ಮೀ ಮಾರ್ಗದ ಪೈಕಿ ಶೇ.2.37ರಷ್ಟು ಕಾಮಗಾರಿಯನ್ನು ಮಾತ್ರ ಪೂರ್ಣಗೊಳಿಸಿದೆ. ತುಂಗ ಮತ್ತು ಭದ್ರಾ ಎರಡು ಟನಲ್ ಬೋರಿಂಗ್ ಮೆಷಿನ್ ಗಳು ಇದೇ ವರ್ಷದ ಜೂನ್ ನಿಂದ ಕಾರ್ಯಾರಂಭ ಮಾಡಿವೆ. ಈ ಮಾರ್ಗದಲ್ಲಿ ಟ್ಯಾನರಿ ರಸ್ತೆ ನಿಲ್ದಾಣ, ವೆಂಕಟೇಶಪುರ ನಿಲ್ದಾಣ, ಕಾಡುಗೊಂಡನಹಳ್ಳಿ ನಿಲ್ದಾಣ ಹಾಗೂ ನಾಗಾವರ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಸುರಂಗ ನಿಲ್ದಾಣಗಳು ನಿರ್ಮಾಣ ಹಂತದಲ್ಲಿದೆ.