ಬೆಂಗಳೂರು, (www.bengaluruwire.com) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್ ಸಿಐ) ಯು 5 ವರ್ಗಗಳಲ್ಲಿ “ಪಿಆರ್ ಸಿಐ” ಪ್ರಶಸ್ತಿಯನ್ನು ಗಳಿಸಿದೆ. ತಲಾ ಎರಡು ಚಿನ್ನ ಹಾಗೂ ಎರಡು ಕಂಚಿನ ಪದಕ ಮತ್ತು ಒಂದು ಬೆಳ್ಳಿಯ ಪದಕವು ಕೋವಿಡ್ ಸಂಕಷ್ಠ ಅವಧಿಯಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಕೆಎಸ್ ಆರ್ ಟಿಸಿ ಮುಡಿಗೇರಿದಂತಾಗಿದೆ.
ಆಂತರಿಕ ನಿಯಮಕಾಲಿಕೆ (ಪ್ರಾದೇಶಿಕ) ‘ಸಾರಿಗೆ ಸಂಪದ’ – ಚಿನ್ನದ ಪದಕ, ಕೋವಿಡ್-19 ಸಮಯದಲ್ಲಿ ನೂತನ ಗ್ರಾಹಕ ಸ್ನೇಹಿ ಉಪಕ್ರಮ – ಚಿನ್ನದ ಪದಕ, ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆ – ಬೆಳ್ಳಿ ಪದಕ, ಅತ್ಯುತ್ತಮ ಸಾರ್ವಜನಿಕ ಉದ್ದಿಮೆಯಾಗಿ ಸಾಮಾಜಿಕ ಹೊಣೆಗಾರಿಕೆಯಡಿ ಕೈಗೊಂಡ ಉಪಕ್ರಮಗಳ ಅನುಷ್ಠಾನಕ್ಕೆ- ಕಂಚಿನ ಪದಕ, ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯ ಚಿತ್ರಗಳು – ಕಂಚಿನ ಪದಕಗಳಿಗೆ ಕೆಎಸ್ ಆರ್ ಟಿಸಿ ನಿಗಮವು ಪಾತ್ರವಾಗಿದೆ.
ಪಿಆರ್ ಸಿಐ ಹಾಗೂ ವಿಶ್ವ ಸಂವಹನ ಮಂಡಳಿಯು ಇತ್ತೀಚೆಗೆ ಗೋವಾದಲ್ಲಿ ಆಯೋಜಿಸಿದ್ದ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿಯ ಸಮ್ಮೇಳನದಲ್ಲಿ ಗೋವಾದ ಕಲೆ ಮತ್ತು ಸಂಸ್ಕೃತಿ ಹಾಗೂ ಬುಡಕಟ್ಟ ಕಲ್ಯಾಣ ಸಚಿವರಾದ ಗೋವಿಂದ ಗೌಡ ಕೆಎಸ್ ಆರ್ ಟಿಸಿ ಈ ಐದು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕೋವಿಡ್ ಅವಧಿಯಲ್ಲಿಯೂ ನಿಗಮವು ಕೈಗೊಂಡ ಸಾರ್ವಜನಿಕ ಸ್ನೇಹಿ ಕಾರ್ಯಗಳು ಹಾಗೂ ಈ ನಿಟ್ಟಿನಲ್ಲಿ ನಿಗಮದ ಸಿಬ್ಬಂದಿ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಶಿವಯೋಗಿ ಕಳಸದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.