ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಗುತ್ತಿಗೆ ಕೆಲಸಗಳನ್ನು ಮಾಡುವವರಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಶಾಕ್ ನೀಡಿದ್ದಾರೆ.
ಬಿಬಿಎಂಪಿ ಅನುದಾನದಲ್ಲಿ ರಸ್ತೆಗೆ ಡಾಂಬರ್, ಗುಂಡಿಬಿದ್ದ ರಸ್ತೆ ಮುಚ್ಚುವುದು, ಮಳೆನೀರು ಮೋರಿ ಕಾಮಗಾರಿ, ಫುಟ್ ಪಾತ್ ಅಭಿವೃದ್ಧಿ ಸೇರಿದಂತೆ ಮತ್ತಿತರ ಕಾಮಗಾರಿ ಮಾಡೋ ಕಾಂಟ್ರಾಕ್ಟರ್ ಗಳು ಭಾಗಶಃ ಹಾಗೂ ಪೂರ್ಣ ಬಿಲ್ ಮೊತ್ತಕ್ಕೆ ಕನಿಷ್ಠ 2 ರಿಂದ 3 ವರ್ಷ ಕಾಯಲೇಬೇಕು.
ಕೋವಿಡ್ ಸೋಂಕಿನಿಂದ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಇನ್ನು ಮುಂದೆ ಪಾಲಿಕೆ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗೆ ಕಾರ್ಯಾದೇಶ ನೀಡುವ ಮುನ್ನ ಗುತ್ತಿಗೆದಾರರು ಪಾಲಿಕೆಗೆ ಖಡ್ಡಾಯವಾಗಿ ಅಫಿಡೆವಿಟ್ ಸಲ್ಲಿಸಬೇಕು.
ಕಾಮಗಾರಿ ಬಿಲ್ ಮೊತ್ತ ಸಲ್ಲಿಸಿದ ದಿನದಿಂದ ಕನಿಷ್ಠ 2 ರಿಂದ 3 ವರ್ಷ ಬಿಲ್ ಪಾವತಿಸುವಂತೆ ಕೋರುವುದಿಲ್ಲ ಅಂತ ಬಾಂಡ್ ಪೇಪರ್ ನಲ್ಲಿ ಕಾಂಟ್ರಾಕ್ಟರ್ ನಿಂದ ಒಪ್ಪಿಗೆ ಪಡೆದು ಕಾರ್ಯಾದೇಶ ನೀಡಬೇಕು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಪಾಲಿಕೆ ಅರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ಈ ಷರತ್ತಿನಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ.
ಸಣ್ಣಪುಟ್ಟ ಗುತ್ತಿಗೆದಾರರಿಗೆ ಬಿಸಿತುಪ್ಪವಾದ ಆದೇಶ
ಪಾಲಿಕೆಯ ಅನುದಾನದಲ್ಲಿ ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತಿರುವ ಕಾಂಟ್ರಾಕ್ಟರ್ ಗಳಿಗೆ ಈ ಆದೇಶ ನುಂಗಲಾರದ ತುತ್ತಾಗಿದೆ. ಆದರೆ ಸರ್ಕಾರದ ಮುಖ್ಯಮಂತ್ರಿಗಳ ನಗರೋತ್ಥಾನ, 15ನೇ ಹಣಕಾಸು ಆಯೋಗಗಳ ಅನುದಾನ ಮತ್ತಿತರ ಗ್ರಾಂಟ್ ಕೆಲಸಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಕಾಮಗಾರಿ ಇಲಾಖೆ (ಪಿಡಬ್ಲ್ಯುಡಿ), ಕೆಆರ್ ಡಿಎಲ್ ಹಾಗೂ ಪಾಲಿಕೆ ಗುತ್ತಿಗೆ ಪರವಾನಗಿ ಹೊಂದಿದ 2,500 ರಿಂದ 3,000 ಸಾವಿರ ಗುತ್ತಿಗೆದಾರರಿದ್ದಾರೆ. ಈ ಪೈಕಿ 1 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಕಾಮಗಾರಿ ಕೈಗೊಳ್ಳುವ ಕಾಂಟ್ರಾಕ್ಟರ್ ಗಳೇ 2,000 ಜನರಿದ್ದಾರೆ.
ಬಿಬಿಎಂಪಿ ಆಯುಕ್ತರ ಈ ಆದೇಶದ ಬಗ್ಗೆ ಬಿಬಿಎಂಪಿ ಗುತ್ತಿಗೆದಾರರು ಅತೃಪ್ತಿ ವ್ಯಕ್ತಪಡಿದ್ದಾರೆ. ” ಬಿಬಿಎಂಪಿಯು ಪಾಲಿಕೆ ಅನುದಾನದಲ್ಲಿ ಕೈಗೊಂಡ 3 ಸಾವಿರ ಕೋಟಿ ರೂ. ಬಾಕಿ ಬಿಲ್ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಬೇಕಿದೆ. ಈಗ ಕೋವಿಡ್ ನೆಪವಿಟ್ಟುಕೊಂಡು ಬಿಲ್ ಪಾವತಿಗೆ ಹೊಸ ಆದೇಶ ಮಾಡಿ ಗುತ್ತಿಗೆದಾರರ ಹಕ್ಕು ಮೊಟಕುಗೊಳಿಸಲಾಗುತ್ತಿದೆ” ಎಂದು ಬಿಬಿಎಂಪಿ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಬೆಂಗಳೂರು ವೈರ್ ಗೆ ಪ್ರತಿಕ್ರಿಯಿಸಿದ್ದಾರೆ.
“ಹಿರಿತನದ ಸರತಿ ಮೀರಿ ಕೆಲವು ಗುತ್ತಿಗೆದಾರರಿಗೆ ಹಣ ಪಾವತಿಗೆ ಅನುಕೂಲ ಮಾಡಿಕೊಡಲು ಅವಕಾಶ ಕಲ್ಪಿಸುತ್ತದೆ. ಇದರಿಂದ ಸಣ್ಣ ಗುತ್ತಿಗೆದಾರರಿಗೆ ಸಾಕಷ್ಟು ತೊಂದರೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರಿಗೆ 3,000 ಕೋಟಿ ರೂ. ಬಿಲ್ ಬಾಕಿ
ಪ್ರಸ್ತುತ ಬಿಬಿಎಂಪಿಯಲ್ಲಿ 2 ವರ್ಷ ನಾಲ್ಕು ತಿಂಗಳ ಹಿಂದೆ ಪಾಲಿಕೆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗುತ್ತಿದೆ. ಇನ್ನು 3,000 ಕೋಟಿ ರೂಪಾಯಿ ಹಣವನ್ನು ಪಾಲಿಕೆಯು ಗುತ್ತಿಗೆದಾರರಿಗೆ ಬಾಕಿ ಪಾವತಿ ಮಾಡಬೇಕಿದೆ. 2020-21ನೇ ಸಾಲಿನಲ್ಲಿ ಪಾಲಿಕೆಯು ಕಾಂಟ್ರಾಕ್ಟರ್ ಗಳಿಗೆ 1,191 ಕೋಟಿ ರೂ. ಬಿಲ್ ಪಾವತಿ ಮಾಡಿದೆ.
ಕಳಪೆ ಕಾಮಗಾರಿಗೆ ನಾಂದಿ
ಪಾಲಿಕೆ ಆಯುಕ್ತರ ನೂತನ ಆದೇಶದ ಬಗ್ಗೆ ಬೆಂಗಳೂರು ವೈರ್ ಗೆ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಹೋರಾಟಗಾರ ಸಾಯಿದತ್ತ, “ಪಾಲಿಕೆ ಅನುದಾನದ ಬಿಲ್ ಪಾವತಿ ವಿಳಂಬದಿಂದ ಕಾಂಟ್ರಾಕ್ಟರ್ ಗಳು ಅನಿವಾರ್ಯವಾಗಿ ಕಳಪೆ ಕಾಮಗಾರಿ ನಡೆಸುವ ಸಾಧ್ಯತೆಯಿದೆ. ಸಣ್ಣಪುಟ್ಟ ಕಾಂಟ್ರಾಕ್ಟರ್ ಗಳು ರಾಜಕಾರಣಿಗಳು, ಅಧಿಕಾರಿಗಳಿಗೆ ‘ಕೈಬಿಸಿ’ ಮಾಡಿ ಟೆಂಡರ್ ಪಡೆದು 2-3 ವರ್ಷ ಕಾಲ ಬಿಲ್ ಆಗಲಿಲ್ಲ ಅಂದರೆ ಅವರು ಬದುಕುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
“ಇದು ನಗರದ ಅಭಿವೃದ್ಧಿ ಕಾಮಗಾರಿ, ಬೆಳವಣಿಗೆಗಳ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ. ಪಾಲಿಕೆ ಸರ್ಕಾರದಿಂದ ಅನುದಾನ ಪಡೆದು ಬಿಲ್ ಪಾವತಿ ಮಾಡಬೇಕು. ಅನಗತ್ಯ ಕಾಮಗಾರಿಗಳನ್ನು ನಿಯಂತ್ರಿಸಿ, ಆರ್ಥಿಕ ಶಿಸ್ತು ಪಾಲಿಸಿದರೆ ಉತ್ತಮ” ಎಂದು ಅವರು ಸಲಹೆ ನೀಡಿದ್ದಾರೆ.
ಹತ್ತು ಸಾವಿರ ಕೋಟಿ ರೂ. ಮೌಲ್ಯದ ಜಾಬ್ ಕೋಡ್ ವಿತರಣೆ !
ಈ ಕೋವಿಡ್ ಸಂಕಷ್ಠದ ನಡುವೆಯೂ, ಜನಪ್ರತಿನಿಧಿಗಳ ಒತ್ತಡದಿಂದಾಗಿ ಸುಮಾರು 10,000 ಕೋಟಿ ರೂ. ಮೊತ್ತದ ಜಾಬ್ ಕೋಡ್ ಗಳನ್ನು ಪಾಲಿಕೆಯಿಂದ ನೀಡಲಾಗಿದೆ. ಜಾಬ್ ಕೋಡ್ ಗಳೆಂದರೆ ನಿಗಧಿಪಡಿಸಿದ ಕಾಮಗಾರಿಗಳನ್ನು ಹಂಚಿಕೆ ಮಾಡಿದಾಗ ನೀಡುವ ನಿರ್ದಿಷ್ಟ ಸಂಖ್ಯೆಯಾಗಿದೆ.
2018-19 ರಿಂದ ಪಾಲಿಕೆಯ ವಾಸ್ತವ ಬಜೆಟ್ 7,500 ಕೋಟಿ ರೂ. ಆದರೆ ಕಳೆದ ಮೂರು ವರ್ಷದಿಂದ 3,000 ರಿಂದ 4,000 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗುತ್ತಿರುವ ಕಾರಣ, ಪಾಲಿಕೆ ಕಾಮಗಾರಿ ಬಿಲ್ ಪಾವತಿಯ ಒತ್ತಡ ಹೆಚ್ಚಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಬಿಬಿಎಂಪಿ ಆಯುಕ್ತರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆಯುಕ್ತರ ಆದೇಶದಲ್ಲೇ ತಿಳಿಸಲಾಗಿದೆ.