ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ರಸ್ತೆಯಲ್ಲಿ ನಿಂತು ಆಕಾಶದ ಸೌಂದರ್ಯ ಕಾಣದಷ್ಟು, ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ ಗಳಿಂದ ತುಂಬಿ ಹೋಗಿವೆ….!
ಮರದ ಸೌಂದರ್ಯ, ಫುಟ್ ಪಾತ್, ರಸ್ತೆಯಲ್ಲೂ ಸುಗಮವಾಗಿ ಸಂಚಾರ ಮಾಡಲಾಗದಷ್ಟು ಒಎಫ್ ಸಿ ಕೇಬಲ್ ಗಳನ್ನು ಹಾಕ್ತಿದ್ದಾರೆ. ಆಗಾಗ ನ್ಯಾಯಾಲಯ ಚಾಟಿ ಬೀಸಿದಾಗ ಕಣ್ಣೊರೆಸಲು ಬಿಬಿಎಂಪಿ ಸಿಬ್ಬಂದಿ ಕೆಲವು ವಾರಗಳ ಕಾಲ ಕೇಬಲ್ ತೆರವು ಕಾರ್ಯಾಚರಣೆ ನಡೆಸಿ ಅವುಗಳನ್ನು ತೆರವುಗೊಳಿಸುತ್ತೆ.
ಎಷ್ಟೋ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಕೇಬಲ್ ತೆರವುಮಾಡಿದ ನಂತರ ಅದೇ ಸ್ಥಳದಲ್ಲಿ ಎರಡು ಮೂರು ಪಟ್ಟಯ ಒಎಫ್ ಸಿ ಕೇಬಲ್ ಗಳನ್ನು ಅನಧಿಕೃತವಾಗಿ ಹಾಕಲಾಗುತ್ತಿದೆ. ಜೋತಾಡುವ ಈ ವೈರ್ ಗಳಿಂದ ಎಷ್ಟೋ ಪಾದಚಾರಿಗಳು, ವಾಹನ ಸವಾರರು ಅಪಘಾತಕ್ಕೆ ಒಳಗಾಗಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮಹದೇವಪುರ ವಲಯ ಅಧಿಕಾರಿಗಳು ಮಾ.13 ರಂದು ಈ ವಲಯ 6 ಉಪವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ವಿವಿಧ ಟೆಲಿಕಾಮ್, ಇಂಟರ್ ನೆಟ್ ಸೇವಾ ಕಂಪನಿಗಳ ಒಟ್ಟು 32.40 ಕಿ.ಮೀ ಉದ್ದದ ಒಎಫ್ ಸಿ ಕೇಬಲ್ ಗಳನ್ನು ತೆರವು ಮಾಡಿ ತನ್ನ ವಶಕ್ಕೆ ತೆಗೆದುಕೊಂಡಿದೆ.
“ಕಳೆದ ನಾಲ್ಕು ವಾರಗಳಿಂದ ಪ್ರತಿ ಶನಿವಾರದಂದು ರಸ್ತೆ, ಮರ, ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಭಾಗದಲ್ಲಿ ಅಳವಡಿಸಿರುವ ಅನಧಿಕೃತ ಒಎಫ್ ಸಿ ಕೇಬಲ್ ಗಳನ್ನು ತೆರವು ಮಾಡಲಾಗುತ್ತಿದೆ. ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ” ಎಂದು ಹೇಳುತ್ತಾರೆ ಮಹದೇವಪುರ ವಲಯ ಚೀಫ್ ಎಂಜಿನಿಯರ್ ಪರಮೇಶ್ವರ್.
ಯಾವ ಉಪವಿಭಾಗದಲ್ಲಿ ಎಷ್ಟೆಷ್ಟು ಉದ್ದ ಕೇಬಲ್ ತೆರವು?
1) ಕೆ.ಆರ್.ಪುರಂ ಉಪ ವಿಭಾಗದಲ್ಲಿ 5.00 ಕಿ.ಮೀ
2) ಹೆಚ್.ಎ.ಎಲ್ ಉಪ ವಿಭಾಗದಲ್ಲಿ 2.50 ಕಿ.ಮೀ
3) ಹೊರಮಾವು ಉಪ ವಿಭಾಗದಲ್ಲಿ 5.00 ಕಿ.ಮೀ
4) ಹೂಡಿ ಉಪ ವಿಭಾಗದಲ್ಲಿ 9.60 ಕೀ.ಮೀ
5) ವೈಟ್ ಫೀಲ್ಡ್ ಉಪ ವಿಭಾಗದಲ್ಲಿ 4.30 ಕೀ.ಮೀ
6) ಮಾರತ್ತಹಳ್ಳಿ ಉಪ ವಿಭಾಗದದಲ್ಲಿ 5.00 ಕೀ.ಮೀ
6 ಉಪವಿಭಾಗಗಳ ವ್ಯಾಪ್ತಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಹಾಗೂ ವಾರ್ಡ್ ಮಟ್ಟದ ಸಹಾಯಕ ಅಭಿಯಂತರವರ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳ ಮೇಲೆ ಜೋತಾಡುತ್ತಿದ್ದ ಹಾಗೂ ಮರಗಳಿಗೆ ಸುತ್ತಿದ್ದ ಕೇಬಲ್‌ಗಳನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ತೆರವುಗೊಳಿಸಲಾಗಿದೆ ಅಂತ ಬಿಬಿಎಂಪಿ ಹೇಳುತ್ತಿದೆ.
ಆದರೆ ಪ್ರತಿ ವಾರ್ಡ್ ನಲ್ಲಿ ಅಕ್ರಮವಾಗಿ ಒಎಫ್ ಸಿ ಕೇಬಲ್ ಹಾಕುವಾಗಲೇ ಎಚ್ಚೆತ್ತುಕೊಂಡು ಈ ಅಧಿಕಾರಿಗಳು ಕ್ರಮ ಕೈಗೊಂಡರೆ ಅಕ್ರಮ ಒಎಫ್ ಸಿ ಕೇಬಲ್ ಗಳ ಹಾವಳಿ ತಪ್ಪಿಸಬಹುದು. ಅಧಿಕಾರಿಗಳು ಭ್ರಷ್ಟ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಆಪ್ಟಿಕಲ್ ಕೇಬಲ್ ಹಾವಳಿಗೆ ಕಡಿವಾಣ ಹಾಕಲಾಗುತ್ತಿಲ್ಲ.
ಹಾಗಾಗಿಯೇ ಒಎಫ್ ಸಿ ಕೇಬಲ್ ಅಳವಡಿಕೆ ರೋಡ್ ಕಟಿಂಗ್, ಡಕ್ಟ್ ಸರ್ವೀಸ್, ಒಎಫ್ ಸಿ ಶುಲ್ಕದಿಂದ ಪ್ರತಿವರ್ಷ 300 ರಿಂದ 400 ಕೋಟಿ ರೂ. ಸಂಗ್ರಹಿಸುವ ಸಾಮರ್ಥ್ಯ ಇದ್ದರೂ ಬಿಬಿಎಂಪಿ ಅಧಿಕಾರಿಗಳು ಕಳೆದ ಎರಡು ವರ್ಷದಿಂದ 66 ಕೋಟಿ ಆಸುಪಾಸಿನಲ್ಲಿ ಫೀಸ್ ಸಂಗ್ರಹ ಮಾಡುತ್ತಿದ್ದಾರೆ.
ಪಾಲಿಕೆ ವೆಬ್ ಸೈಟ್ ನಲ್ಲಿ ಒಎಫ್ ಸಿ ಕೇಬಲ್ ಬಗ್ಗೆ ಅಸ್ಪಷ್ಟ – ಅಪೂರ್ಣ ಮಾಹಿತಿ
ಬಿಬಿಎಂಪಿಯ ಅಧಿಕೃತ ವೆಬ್ ಸೈಟ್ (https://bbmp.gov.in/departmentwebsites/Eng/ofc.html ) ನಲ್ಲಿ ಪಾಲಿಕೆಯ 8 ವಲಯಗಳಲ್ಲಿ ಟೆಲಿಕಾಮ್ ಹಾಗೂ ಇಂಟರ್ ನೆಟ್ ಸೇವೆ ನೀಡುವ ಕಂಪನಿಗಳಿಗೆ ಒಎಫ್ ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡಿರುವ, ಶುಲ್ಕ ಸಂಗ್ರಹದ ಬಗ್ಗೆ 18-06-2012 ರಿಂದ 31-03-2015 ತನಕ ಮಾತ್ರ ಸಂಕ್ಷಿಪ್ತ ಮಾಹಿತಿ ಹಾಕಲಾಗಿದೆ.
ಅಲ್ಲಿಂದ ಮುಂದೆ ಎಷ್ಟು ಕಂಪನಿಗಳಿಗೆ ಕೇಬಲ್ ಅಳವಡಿಕೆಗೆ ಪರ್ಮಿಷನ್ ನೀಡಿರುವ, ಪಾಲಿಕೆ ಶುಲ್ಕ ಸಂಗ್ರಹಿಸಿರುವ ಮಾಹಿತಿಯನ್ನು ಸಾರ್ವಜನಿಕರು ಸುಲಭವಾಗಿ ಗುರುತಿಸುವಂತೆ ಹಂಚಿಕೊಂಡಿಲ್ಲ. ಪ್ರತಿ ಜೋನ್ ಕೆಳಗೆ ಪ್ರತ್ಯೇಕವಾಗಿ ಕೋಡ್ ಗಳನ್ನು ನೀಡಿದ್ದು ಅದರ ಮಾಹಿತಿಯನ್ನು ಹುಡುಕಿ ತೆಗೆಯುವುದೇ ದೊಡ್ಡ ಕೆಲಸವಾಗುತ್ತೆ.
ಅದರ ಜೊತೆಗೆ ಸಂಕ್ಷಿಪ್ತ ಮಾಹಿತಿ ತಿಳಿಸಿಲ್ಲ. ರಿಯಲ್ ಟೈಮ್ ನಲ್ಲಿ ಮಾಹಿತಿ ಅಪಡೇಟ್ ತಿಳಿಸುವ ವ್ಯವಸ್ಥೆಯಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಡುವ ಅಧಿಕಾರಿಗಳ ಜಾಣ ನಡೆ ಎನ್ನಲಾಗುತ್ತಿದೆ.
ಪಾಲಿಕೆ ಆದಾಯ ಭೂಗತವಾಗಿ ಸೋರಿಕೆ
ಭೂಗತವಾಗಿ ನಿಗಧಿತ ರಸ್ತೆಯಲ್ಲಿ ಕೇಬಲ್ ಅಳವಡಿಸಲು ಅಧಿಕೃತವಾಗಿ ಬಿಬಿಎಂಪಿ ಒಎಫ್ ಸಿ ವಿಭಾಗ ಅವಕಾಶ ನೀಡುತ್ತದೆ. ಆದರೆ ಟೆಲಿಕಾಮ್ ಕಂಪನಿಗಳಿಗೆ ಒಎಫ್ ಸಿ ಕೇಬಲ್ ಅಳವಡಿಸುವ ಸೇವಾ ಕಂಪನಿಗಳು ಅನುಮತಿ ಪಡೆದಕ್ಕಿಂತ ಹೆಚ್ಚಾಗಿ ಪಿಟ್ ತೋಡುವ, ಹೆಚ್ಚುವರಿ ಕೇಬಲ್ ಗಳನ್ನು ಹಾಕಿ ಬಿಬಿಎಂಪಿ ನೀಡುವ ನೂರಾರು ಕೋಟಿ ರೂಪಾಯಿ ನೆಲಬಾಡಿಗೆ, ಶುಲ್ಕ ಕಟ್ಟುವುದನ್ನು ತಪ್ಪಿಸುತ್ತಿದೆ.
ಹೊಸ ರಸ್ತೆಗಳಲ್ಲಿ, ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಭೂಗತವಾಗಿ ಒಎಫ್ ಸಿ ಕೇಬಲ್ ಅಳವಡಿಸಲು ಬಿಬಿಎಂಪಿ ಅಧಿಕೃತವಾಗಿ ಅವಕಾಶ ನೀಡುವುದಿಲ್ಲ. ಆದರೂ ಈ ಕರಾಳ ದಂಧೆ ವ್ಯವಸ್ಥಿತವಾಗಿ ರಾತ್ರೋ ರಾತ್ರಿ ರಸ್ತೆ ಬದಿ ಗುಂಡಿ ಕೊರೆದು ನೆಲದಲ್ಲಿ ತನ್ನ ಚಿನ್ನದ ಮೊಟ್ಟೆಗಳನ್ನಿಟ್ಟು ಕೋಟ್ಯಾಂತರ ರೂಪಾಯಿ ಹಣ ಗಳಿಸುತ್ತಿವೆ. ಪಾಲಿಕೆ ಎಂಜಿನಿಯರ್ ಗಳ “ಒಳ ಒಪ್ಪಂದ” ವಿಲ್ಲದೆ ಇವೆಲ್ಲ ಸಾಧ್ಯವಿಲ್ಲ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರೊಬ್ಬರು.
ಪೂರ್ವ, ಪಶ್ಚಿಮ ವಲಯ, ಮಹದೇವಪುರ ವಲಯ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ವಲಯಗಳಲ್ಲಿ ಒಎಫ್ ಸಿ ಹಾವಳಿ, ಅಕ್ರಮ ಕೇಬಲ್ ಅಳವಡಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಹೈಕೋರ್ಟ್, ಮಾನವಹಕ್ಕುಗಳ ಆಯೋಗಗಳಲ್ಲಿ ದಾಖಲಾಗಿರುವ ಹಲವು ಪ್ರಕರಣಗಳೇ ವಾಸ್ತವವನ್ನು ತಿಳಿಸುತ್ತೆ.