ಬೆಂಗಳೂರು : ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಭೂ ನೀಡಿದ ಭೂಮಾಲೀಕರಿಗೆ ಹಾಗೂ ನಿವೇಶನ ರಹಿತ ಹಂಚಿಕೆದಾರರಿಗೆ ಸದ್ಯಕ್ಕೆ ಸೈಟ್ ಲಭ್ಯವಾಗೋದು ಅನುಮಾನ.
ಅರ್ಕಾವತಿ ಬಡಾವಣೆಯಲ್ಲಿ ವ್ಯಾಜ್ಯ ಮತ್ತಿತರ ಕಾರಣದಿಂದಾಗಿ ಹಲವು ವರ್ಷಗಳಿಂದ ನಿವೇಶನ ಸಿಗದ ಹಂಚಿಕೆದಾರರಿಗೆ ಹಾಗೂ ಭೂಮಿ ನೀಡಿದ ಭೂಮಾಲೀಕರಿಗೆ ಅರ್ಕಾವತಿ ಮುಂದುವರೆದ ಬಡಾವಣೆ ನಿರ್ಮಿಸಲೆಂದು ಬಿಡಿಎ ನಗರಾಭಿವೃದ್ಧಿ ಇಲಾಖೆಗೆ ತರಾತುರಿಯಲ್ಲಿ ಪ್ರಸ್ತಾವನೆಯನ್ನೇನೋ ಸಲ್ಲಿಸಿತ್ತು. ಸಂಪಿಗೆಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಕಟ್ಟಿಗೇನಹಳ್ಳಿ, ಕೋಗಿಲು, ಶ್ರೀನಿವಾಸಪುರ, ಬೈಯ್ಯಪ್ಪನಹಳ್ಳಿ, ಬೆಲ್ಲಹಳ್ಳಿ, ಮಿಟಗಾನಹಳ್ಳಿ ಮತ್ತು ಸಾತನೂರು ಗ್ರಾಮಗಳಲ್ಲಿ ಸುಮಾರು 450 ಎಕರೆ 15.5 ಗುಂಟೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ನಿರ್ಣಯಿಸಿತ್ತು.
ಅದರಂತೆ ಬಿಡಿಎ ಕಾಯ್ದೆ 1976ರ ಕಲಂ 17(1) ರ ಅನ್ವಯ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರದ ಅನುಮತಿ ಹಾಗೂ ಯೋಜನೆಗೆ ಮಂಜೂರಾತಿ ಕೋರಿ 2020ರ ಡಿಸೆಂಬರ್ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಇದೇ ಫೆಬ್ರವರಿ 24ರಂದು ನಗರಾಭಿವೃದ್ಧಿ ಇಲಾಖೆ ಇದಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಮಂಜೂರಾತಿ ನೀಡಿದೆ.
ನಗರಾಭಿವೃದ್ಧಿ ಇಲಾಖೆ ವಿಧಿಸಿರುವ ಷರತ್ತಿನಲ್ಲಿ, ಬಿಡಿಎ ಭೂಸ್ವಾಧೀನಪಡಿಸಿಕೊಂಡು, ಸ್ವಂತ ಸಂಪನ್ಮೂಲ ಬಳಸಿಕೊಂಡು ಬಡಾವಣೆ ನಿರ್ಮಿಸಿ, ಸೈಟ್ ಹಂಚಿಕೆ ಮಾಡುವ ಷರತ್ತು ವಿಧಿಸಿ ಯೋಜನೆಗೆ ಮಂಜೂರಾತಿ ನೀಡಿದೆ. ಆದರೆ ವಾಸ್ತವದಲ್ಲಿ ಮುಂದುವರೆದ ಅರ್ಕಾವತಿ ಬಡಾವಣೆಗಾಗಿ ಗುರ್ತಿಸಿರುವ ಗ್ರಾಮಗಳಲ್ಲಿ ಬಿಡಿಎ ಭೂಸ್ವಾಧೀನ ಪಡಿಸಿಕೊಂಡು ಬಡಾವಣೆ ಅಭಿವೃದ್ಧಿಪಡಿಸುವುದು ಯಾವ ದೃಷ್ಟಿಯಿಂದ ನೋಡಿದರೂ ಪ್ರಾಧಿಕಾರಕ್ಕೆ ಕಾರ್ಯಸಾಧುವಾಗಿ ಕಾಣಿಸುತ್ತಿಲ್ಲ.
ಬಿಡಿಎ ಕಮಿಷನರ್ ಏನಂತಾರೆ ?
ಅರ್ಕಾವತಿ ಮುಂದುವರೆದ ಬಡಾವಣೆ ನಿರ್ಮಾಣದ ಬಗ್ಗೆ ಬೆಂಗಳೂರು ವೈರ್ ಬಿಡಿಎ ಕಮಿಷನರ್ ಮಹದೇವ್ ಅವರನ್ನ ಕೇಳಿದರೆ, “ಅರ್ಕಾವತಿ ಮುಂದುವರೆದ ಬಡಾವಣೆ ನಿರ್ಮಾಣಕ್ಕೆ ಈಗಾಗಲೇ ಬಿಡಿಎ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ದೊರೆತು, ರಾಜ್ಯ ಸರ್ಕಾರದಿಂದ ಯೋಜನೆಗೆ ಮಂಜೂರಾತಿ ದೊರೆತಿದೆ. ಇನ್ನು ಮೂರು ತಿಂಗಳ ಒಳಗಾಗಿ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಹಂತದ ಅಧಿಸೂಚನೆ ಹೊರಡಿಸಲು ಅಗತ್ಯ ಕಾರ್ಯಗಳು ಆರಂಭವಾಗಿದೆ. ಅದಾದ ಬಳಿಕ ಆಕ್ಷೇಪಣೆಗೆ ಕಾಲಾವಕಾಶ ನೀಡಿದ ನಂತರ, ನಾಲ್ಕೈದು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಕಾಲಮಿತಿಯಲ್ಲಿ ಆರ್ಥಿಕ ಸಂಪನ್ಮೂಲ ಒದಗಿಸಿಕೊಂಡು ಬಡಾವಣೆ ನಿರ್ಮಿಸಿ ಅರ್ಕಾವತಿ ಬಡಾವಣೆ ನಿವೇಶನ ರಹಿತ ಹಂಚಿಕೆದಾರರು ಹಾಗೂ ಭೂಮಾಲೀಕರಿಗೆ ಸೈಟ್ ನೀಡುತ್ತೇವೆ” ಎಂದು ಹೇಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಈ ಗ್ರಾಮಗಳಲ್ಲಿ ಪ್ರಸ್ತುತ ಜಮೀನಿನ ಮಾರುಕಟ್ಟೆ ದರ ಪ್ರತಿ ಎಕರೆಗೆ ಏನಿಲ್ಲವೆಂದರೂ ಸರಾಸರಿ 3 ರಿಂದ 5 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. 7 ಗ್ರಾಮಗಳಲ್ಲಿನ 450 ಎಕರೆ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು 60:40 ಅನುಪಾತದಲ್ಲಿ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಭೂಮಿ ನೀಡಬೇಕಿದೆ. ಅದಾದ ಬಳಿಕವಷ್ಟೇ ಬೇರೆ ಕಡೆಗಳಲ್ಲಿ ಬಡಾವಣೆಗಾಗಿ ಭೂಮಿ ನೀಡಿದ ಭೂಮಾಲೀಕರು ಹಾಗೂ ನಿವೇಶನ ರಹಿತ ಹಂಚಿಕೆದಾರರಿಗೆ ಸೈಟ್ ನೀಡಬೇಕಾಗುತ್ತದೆ.
7 ಗ್ರಾಮಗಳಲ್ಲಿ 4 ಬಹುತೇಕ ಅಭಿವೃದ್ಧಿಯಾಗಿವೆ
ಪ್ರಾಧಿಕಾರ ಗುರ್ತಿಸಿರುವ 7 ಗ್ರಾಮಗಳ ಪೈಕಿ ಕೋಗಿಲು ಗ್ರಾಮದಲ್ಲಿ ಈಗಾಗಲೇ ಶೇಕಡ 80ರಷ್ಟು ಕಟ್ಟಡಗಳು, ಕಂದಾಯ ನಿವೇಶಗಳು ಅಭಿವೃದ್ಧಿಯಾಗಿದೆ. ಇಲ್ಲಿ ಒಂದು ಚದರ ಅಡಿ ಜಾಗಕ್ಕೆ ಏನಿಲ್ಲವೆಂದರೂ 5 ಸಾವಿರ ರೂಪಾಯಿಯಷ್ಟಿದೆ. ಇನ್ನು ಕಟ್ಟಿಗೇನಹಳ್ಳಿಯಲ್ಲಿ ನೂರಾರು ಎಕರೆಯಷ್ಟು ಜಾಗದ ಲಭ್ಯತೆ ಸಿಗದು. ಇಲ್ಲೂ ಕೂಡ ಸಾಕಷ್ಟು ಕಟ್ಟಡ, ಮನೆಗಳನ್ನು ಕಟ್ಟಲಾಗಿದೆ. ಇಲ್ಲಿನ ನಿವೇಶನಗಳ ಮಾರುಕಟ್ಟೆ ಬೆಲೆ ಚದರಡಿಗೆ 4,000 ರೂಪಾಯಿಯಿಂದ 4,500 ರೂಪಾಯಿಯಷ್ಟಿದೆ.
ಬೈಯ್ಯಪ್ಪನಹಳ್ಳಿಯಲ್ಲಿ ಶೇಕಡ 20 ರಿಂದ 30ರಷ್ಟು ಭಾಗ ಅಭಿವೃದ್ಧಿಯಾಗಿದೆ. ಸಾತನೂರಿನಲ್ಲಿ ಗಡಿ ರಕ್ಷಣಾ ಪಡೆ, ದೆಹಲಿ ಪಬ್ಲಿಕ್ ಶಾಲೆ ಸೇರಿದಂತೆ ಹಲವು ಸಂಸ್ಥೆಗಳು ಎಕರೆಗಟ್ಟಲೆ ಜಾಗವನ್ನು ಖರೀದಿ ಮಾಡಿಟ್ಟುಕೊಂಡಿದೆ. ಉಳಿದಂತೆ ಶ್ರೀನಿವಾಸಪುರ, ಮಿಟಗಾನಹಳ್ಳಿ, ಬೆಲ್ಲಹಳ್ಳಿಯಲ್ಲಿ ಬಿಡಿಎಗೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಜಮೀನು ಲಭ್ಯವಾಗಬಹುದು.
ಇಲ್ಲಿನ ಭೂಮಾಲೀಕರಿಗೆ 3,600 ನಿವೇಶನ ಭೂಪರಿಹಾರ
ಜಮೀನಿನ ಮಾರುಕಟ್ಟೆ ದರ ಚಿನ್ನಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರುವಾಗ ಸಹಜವಾಗಿಯೇ ಭೂಮಾಲೀಕರು ಬಿಡಿಎ ಕೊಡುವ ಪರಿಹಾರಕ್ಕೆ ಕಾದು ಕೂರುವ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ಕಮ್ಮಿ ಎಂದು ವಿಶ್ಲೇಷಿಸಲಾಗುತ್ತಿದೆ. ಅರ್ಕಾವತಿ ಮುಂದುವರೆದ ಬಡಾವಣೆ ಯೋಜನೆಗಾಗಿ ಒಟ್ಟು 450 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡು ಆ ಪ್ರದೇಶದಲ್ಲಿ 9*12 ಚದರ ಮೀಟರ್ ವಿಸ್ತೀರ್ಣದ 9,270 ಸೈಟ್ ಗಳನ್ನು ರಚಿಸಲು ಬಿಡಿಎ ಉದ್ದೇಶಿಸಿದೆ. ಇದರಲ್ಲಿ ಭೂಮಿ ನೀಡಿದ ಭೂಮಾಲೀಕರಿಗೆ ಪ್ರತಿ ಎಕರೆಗೆ 60:40 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ 9,583 ಚದರಡಿ ಅಂದರೆ ಅಂದಾಜು 8 ಸೈಟ್ ಗಳನ್ನು ನೀಡಬೇಕಾಗುತ್ತದೆ. ಇದನ್ನು 450 ಎಕರೆಗೆ ಲೆಕ್ಕ ಹಾಕಿ ಹೇಳುವುದಾದರೆ ಒಟ್ಟು ಈ ಗ್ರಾಮದಲ್ಲಿ ಜಮೀನು ನೀಡಿದ ಭೂಮಾಲೀಕರಿಗೆ 3,600 ನಿವೇಶನವನ್ನು ಭೂಪರಿಹಾರವಾಗಿ ಕೊಡಬೇಕಾಗುತ್ತದೆ.
ಮುಂದುವರೆದ ಬಡಾವಣೆ ಅಂತಿಮ ಅಧಿಸೂಚನೆಗೆ ವರ್ಷಗಟ್ಟಲೆ ?
ಆಗ ಉಳಿಯುವ 5,670 ನಿವೇಶನಗಳನ್ನು ನಿವೇಶನ ರಹಿತ ಹಂಚಿಕೆದಾರರು ಹಾಗೂ ಈ ಹಿಂದೆ ಅರ್ಕಾವತಿಗಾಗಿ ಬೇರೆ ಕಡೆ ಭೂಮಿ ನೀಡಿದ್ದ ಮಾಲೀಕರಿಗೆ ಹಂಚಿಕೆ ಮಾಡಬೇಕಾಗುತ್ತದೆ. ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ, ಆಕ್ಷೇಪಣೆ, ಅಂತಿಮ ಅಧಿಸೂಚನೆ ಹೊರಡಿಸುವಷ್ಟರಲ್ಲಿ ಹಳೆಯ ಬಡಾವಣೆ ನಿರ್ಮಾಣದ ಸಂದರ್ಭಗಳನ್ನು ಗಮನಿಸಿದರೆ ಕನಿಷ್ಠ ಏನಿಲ್ಲವೆಂದರೂ ನಾಲ್ಕು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಹಿಡಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂತಿಮ ಅಧಿಸೂಚನೆ ಬರುವ ವೇಳೆಗಾಗಲೇ ಭೂಮಿ ಮೌಲ್ಯದ ಕಾರಣಕ್ಕೆ ಭೂಮಾಲೀಕರು ತಕರಾರು, ನ್ಯಾಯಾಲಯದ ಕದ ತಟ್ಟಿದರೂ ಆಶ್ಚರ್ಯವಿಲ್ಲ.
ಅರ್ಕಾವತಿ ಮುಂದುವರೆದ ಬಡಾವಣೆ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಹೋರಾಟಗಾರ ಸಾಯಿದತ್ತ, “ಬಿಡಿಎ ಕೆಂಪೇಗೌಡ ಹಾಗೂ ಅರ್ಕಾವತಿ ಬಡಾವಣೆ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಗೊಂದಲ, ಗೋಜಲು ಮಾಡಿಕೊಂಡಿದೆ. ಆದರೆ ಅರ್ಕಾವತಿ ಮುಂದುವರೆದ ಬಡಾವಣೆ ವಿಚಾರದಲ್ಲಿ ಆ ತಪ್ಪುಗಳು ಮರುಕಳಿಸದಂತೆ ಸಾಕಷ್ಟು ಎಚ್ಚರವಹಿಸಬೇಕು. ಬಡಾವಣೆಯ ಅಭಿವೃದ್ಧಿಗಾಗಿ ಆರ್ಥಿಕ ಸಂಪನ್ಮೂಲದ ಮೂಲ ಹುಡುಕಿಕೊಳ್ಳಬೇಕು. ಇಲ್ಲವಾದಲ್ಲಿ ಹಳೆಯ ತಪ್ಪುಗಳು ಮತ್ತೆ ಮರುಕಳಿಸುವ ಸಾಧ್ಯತೆಯಿರುತ್ತದೆ. ಹೊಸ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿ ಉಳಿದ ಬಡಾವಣೆಗಳಿಗೆ ಮಾದರಿಯಾಗುವಂತಿರಲಿ” ಎಂದು ಹೇಳಿದ್ದಾರೆ.
ಈ ಹಿಂದೆ 2014ರಲ್ಲಿ ಅರ್ಕಾವತಿ ಬಡಾವಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 1,766 ಎಕರೆ 7 ಗುಂಟೆ ಜಾಗ ಭೂಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದ್ರೆ ಆ ಪೈಕಿ 330 ಎಕರೆ 16 ಗುಂಟೆ ಜಮೀನಿನ ಭೂಮಾಲೀಕರು ಹೈಕೋರ್ಟ್ ನಲ್ಲಿ ಭೂಸ್ವಾಧೀನ ಕ್ರಮ ಪ್ರಶ್ನಿಸಿ ಮೊಕದ್ದಮೆ ಹೂಡಿದ್ದು, ಸದ್ಯ ಅವುಗಳು ವಿಚಾರಣಾ ಹಂತದಲ್ಲಿದೆ. ಹೀಗಾಗಿ ಈ ಸ್ಥಳದಲ್ಲಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಿಲ್ಲ. ಅಲ್ಲದೆ ವ್ಯಾಜ್ಯವಿಲ್ಲದ ಭೂಮಿಯಲ್ಲಿ 60:40 ಅನುಪಾತದಲ್ಲಿ ಭೂಮಾಲೀಕರಿಗೆ ಭೂಪರಿಹಾರವಾಗಿ ನಿವೇಶ ನೀಡುವುದು ಇನ್ನೂ ಬಾಕಿಯಿದೆ. ನಿವೇಶನಗಳ ಹಂಚಿಕೆಗೆ ಜಾಗದ ಕೊರತೆ ಕಂಡುಬಂದಿದ್ದರಿಂದ ಬಿಡಿಎ, ಸಂಪಿಗೆ ಹಳ್ಳಿ ಗ್ರಾಮಕ್ಕೆ ಹತ್ತಿರವಿರುವ 7 ಗ್ರಾಮಗಳಲ್ಲಿ ಅರ್ಕಾವತಿ ಮುಂದುವರೆದ ಬಡಾವಣೆ ನಿರ್ಮಿಸಲು ನಿರ್ಧರಿಸಿ ಸರ್ಕಾರದಿಂದ ಯೋಜನೆಗೆ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಈಗಾಗಲೇ ಭೂ ವ್ಯಾಜ್ಯ, ನ್ಯಾಯಾಲಯ ಪ್ರಕರಣದಿಂದ ಒಂದು ದಶಕಗಳು ಕಳೆದರೂ ಎಲ್ಲಾ ಹಂಚಿಕೆದಾರರು, ಭೂಮಾಲೀಕರಿಗೆ ಸೈಟ್ ನೀಡಲಾಗದೆ ಅರ್ಕಾವತಿ ಬಡಾವಣೆ ಗೊಂದಲದ ಗೂಡಾಗಿದೆ. ಇದೀಗ ಮುಂದುವರೆದ ಬಡಾವಣೆ ಮಾಡಲು ಮುಂದಾಗಿ ಬಿಡಿಎ ಕೈಸುಟ್ಟು ಕೊಳ್ಳುವ ಪ್ರಸಂಗ ಎದುರಾದರೆ ಆಶ್ಚರ್ಯವಿಲ್ಲ. ಅದರ ಬದಲು ಕೆಂಪೇಗೌಡ ಬಡಾವಣೆಯಲ್ಲಿ, ಅರ್ಕಾವತಿ ಬಡಾವಣೆ ನಿವೇಶನ ರಹಿತರಿ, ಭೂ ಮಾಲೀಕರಿಗೆ ಸೈಟ್ ಹಂಚಿಕೆ ಮಾಡಿದರೆ ಅಷ್ಟರ ಮಟ್ಟಿಗೆ ಬಿಡಿಎ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಅಭಿಪ್ರಾಯಗಳು ನಾಗರೀಕ ವಲಯದಿಂದ ಕೇಳಿಬಂದಿದೆ.