ಬೆಂಗಳೂರು : “ಕ್ಯಾಟ್ ವಾರಿಯರ್ ದ್ರೋಣ್” ದೇಶದ ಭವಿಷ್ಯದ ರಕ್ಷಣಾ ವ್ಯವಸ್ಥೆಯ ಹೊಸ ಯೋಧ.
ಈ ಯೋಧ ಯಾವುದೇ ಮನುಷ್ಯನಲ್ಲ. ಬದಲಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದು ಶತ್ರು ರಾಷ್ಟ್ರದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ದ್ರೋಣ್ ಆಗಿದೆ. ಎಚ್ಎಎಲ್ ಕಾಂಬಾಟ್ ಏರ್ ಟೀಮ್ ಸಿಸ್ಟಮ್ (ಕ್ಯಾಟ್ಸ್) ನಲ್ಲಿ ಕೇವಲ ಕ್ಯಾಟ್ ವಾರಿಯರ್ ದ್ರೋಣ್ ಒಂದೇ ಅಲ್ಲದೆ. ಕ್ಯಾಂಟ್ ಹಂಟರ್, ಆಲ್ಫಾ -ಎಸ್ ದ್ರೋಣ್ ಮತ್ತು ಆಧುನಿಕ ಶಸ್ತ್ರಾಸ್ತ್ರಗಳು ಕ್ಯಾಟ್ ಸಮರ ತಂಡ ವ್ಯವಸ್ಥೆಯಲ್ಲಿರುತ್ತದೆ. ಈ ಅತ್ಯಾಧುನಿಕ ಸಮರ ಉಪಕರಣಗಳನ್ನು ಹೊಂದಿರುವ ದ್ರೋಣ್ ಅನ್ನು ಅಭಿವೃದ್ಧಿಪಡಿಸಲು ಹಿಂದೂಸ್ಥಾನ್ ಏರೊನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಸಿದ್ಧತೆ ನಡೆಸಿದೆ.
ಆಕಾಶ ಸಮರ ತಂಡ ವ್ಯವಸ್ಥೆ (ಕ್ಯಾಟ್ಸ್) ಯಲ್ಲಿ ಈ ಕ್ಯಾಟ್ ವಾರಿಯರ್ ದ್ರೋಣ್ ಕೂಡ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಎಚ್ ಎಎಲ್ ಸಂಸ್ಥೆಯು ದೇಶೀಯವಾಗಿ ಈ ಹೊಸ ತಂತ್ರಙ್ಞನ ಹೊಂದಿದ ವಾರಿಯರ್ ದ್ರೋಣ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಒಂದು ಬಾರಿ ಇಂಧನ ತುಂಬಿಸಿದರೆ 700 ಕಿಲೋ ಮೀಟರ್ ದೂರ ಹಾಗೂ ಹಾಗೂ 5 ಕಿಲೋ ಮೀಟರ್ ಎತ್ತರದಲ್ಲಿ ಈ ಮಾನವರಹಿತ ದ್ರೋಣ್ ವಿಮಾನ ಹಾರಾಡುವ ಸಾಮರ್ಥ್ಯ ಹೊಂದಿರಲಿದೆ.
ಕಳೆದ ಒಂದೂವರೆ ವರ್ಷದಿಂದ ಎಚ್ ಎಎಲ್ ಕ್ಯಾಟ್ ವಾರಿಯರ್ ದ್ರೋಣ್ ವಿಮಾನ ನಿರ್ಮಾಣದಲ್ಲಿ ತೊಡಗಿದೆ. ಕ್ಯಾಟ್ಸ್ ವಾರಿಯರ್ ದ್ರೋಣ್ ಅನ್ನು ಭೂ ಕೇಂದ್ರದಿಂದ ಹಾಗೂ ಎಲ್ ಸಿಎ, ರಫೇಲ್ ನಂತಹ ಮದರ್ ಶಿಪ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಇದೊಂದು ನೂತನ ಪರಿಕಲ್ಪನೆಯಾಗಿದ್ದು, ವಿಶ್ವದಲ್ಲಿಯೇ ಮೊದಲ ಪ್ರಯತ್ನವಾಗಿದೆ. ವಾರಿಯರ್ ದ್ರೋಣ್ ನಿರ್ಮಾಣಕ್ಕೆ ಈ ತನಕ 390 ಕೋಟಿ ರೂಪಾಯಿ ಹಣವನ್ನು ಸಂಸ್ಥೆ ವತಿಯಿಂದ ಹೂಡಿಕೆ ಮಾಡಲಾಗಿದೆ. ಅಗತ್ಯವಾದರೆ ಇನ್ನೂ ಹೆಚ್ಚಿನ ಹಣವನ್ನು ಈ ಯೋಜನೆಗೆ ಕರ್ಚು ಮಾಡಲು ಸಿದ್ದರಿದ್ದೇವೆ ಎಂದು ಎಚ್ಎಎಲ್ ಅಧ್ಯಕ್ಷ ಕೆ.ಮಾಧವನ್ ತಿಳಿಸಿದ್ದಾರೆ.
ಇನ್ನು ಮೂರ್ನಾಲ್ಕು ವರ್ಷದಲ್ಲಿ ಕ್ಯಾಟ್ ವಾರಿಯರ್ ದ್ರೋಣ್ ವಿಮಾನದ ಮೊದಲ ಮಾದರಿಯನ್ನು ಹೊರ ತರಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಯುದ್ಧ ಸಂದರ್ಭದಲ್ಲಿ ಬಹಳ ಅಮೂಲ್ಯವಾದ ವಾಯುಪಡೆಯ ಪೈಲೆಟ್ ಜೀವಗಳನ್ನು ಉಳಿಸುವುದು ಮುಖ್ಯವಾಗಿದೆ. ಹಾಗಾಗಿ ದೇಶದ ಗಡಿಯಲ್ಲಿದ್ದುಕೊಂಡೇ ತೇಜಸ್, ರಫೇಲ್ ನಂತಹ ಯುದ್ಧ ವಿಮಾನಗಳ ಮೂಲಕ ಶತ್ರು ರಾಷ್ಟ್ರಗಳ ಪ್ರದೇಶದ ಮೇಲೆ ಕ್ಯಾಟ್ ವಾರಿಯರ್ ಮಾನವ ರಹಿತ ದ್ರೋಣ್ ಅನ್ನು ನಿಯಂತ್ರಿಸಿ ಆ ಮೂಲಕ ವಿಚಕ್ಷಣೆ ನಡೆಸಿ, ಕ್ಷಿಪಣಿ ದಾಳಿ ನಡೆಸಬಹುದು.
ಈ ರೀತಿಯ ತಂತ್ರಜ್ಞಾನವನ್ನು ಸಂಶೋಧನೆ ಮೂಲಕ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ ಎಂದು ಎಚ್ಎಎಲ್ ನ ಎಂಜಿನಿಯರಿಂಗ್ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಅರೂಪ್ ಚಟರ್ಜಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕ್ಯಾಟ್ ವಾರಿಯರ್ ಮೊದಲ ಅರೆ ರಹಸ್ಯ ವಿಮಾನ :
ಕ್ಯಾಟ್ ವಾರಿಯರ್ ದ್ರೋಣ್ ಏರ್ ಕ್ರಾಫ್ಟ್, ದೇಶದ ಅರೆ ರಹಸ್ಯ ಕಾರ್ಯಾಚರಣೆಯ ವಿಭಾಗದಲ್ಲಿ ಅಭಿವೃದ್ಧಿಯಾಗುತ್ತಿರುವ ಮೊದಲ ದ್ರೋಣ್ ಆಗಿದೆ. 350 ರಿಂದ 700 ಕಿಲೋ ಮೀಟರ್ ದೂರ ಕ್ರಮಿಸಿ ಶತ್ರುಗಳು ಅಥವಾ ಉಗ್ರಗಾಮಿಗಳು ಅಡಗಿರುವ ಸ್ಥಳವನ್ನು ಗುರುತಿಸಿ ನಿಖರವಾಗಿ ಅದರ ಮೇಲೆ ಬಾಂಬ್ ಹಾಕುವ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು
ಎಲ್ ಸಿಎ ತೇಜಸ್ ಅಥವಾ ರಫೇಲ್ ಯುದ್ಧ ವಿಮಾನ ಕೆಳಭಾಗದಲ್ಲಿ ಅಳವಡಿಸಬಹುದಾದ ಕ್ಯಾಟ್ ಹಂಟರ್ ಎಂಬ ಅತ್ಯಾಧುನಿಕ ಶಸ್ತ್ರಾಸ್ತ್ರವು 200 ರಿಂದ 300 ಕಿಲೋ ಮೀಟರ್ ದೂರ ಕ್ರಮಿಸಿ ಶತ್ರು ಪಾಳೇಯದ ಮೇಲೆ ನಿಖರವಾಗಿ ಬಾಂಬ್ ದಾಳಿ ನಡೆಸಲಿದೆ ಎಂದು ಎಚ್ಎಎಲ್ ನ ಅರೂಪ್ ಚಟರ್ಜಿ ಹೇಳಿದ್ದಾರೆ.
ಕ್ಯಾಟ್ ನಲ್ಲಿರಲಿದೆ ಆರ್ಟಿಯಲ್ ಇಂಟೆಲಿಜಿನ್ಸ್ :
ಆಕಾಶ ಸಮರ ತಂಡ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಲಘು ಗಣಕ (ಲಾಗಾರಿದಮ್) ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಶತ್ರುಗಳ ಮೇಲೆ ಬಹು ಆಯಾಮದ ಗುರಿಗಳನ್ನಿಟ್ಟು ದಾಳಿ ನಡೆಸುವ ಅತ್ಯಾಧುನಿಕ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಚ್ಎಎಲ್ ನ ವಿಜ್ಞಾನಿಗಳು, ತಂತ್ರಜ್ಞರು, ಎಂಜನಿಯರ್ ಗಳು ಈ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ.
ಒಟ್ಟಾರೆ ಕಾಂಬಾಟ್ ಏರ್ ಟೀಮ್ ಸಿಸ್ಟಮ್ ಸಂಪೂರ್ಣವಾಗಿ ಸಿದ್ಧವಾದರೆ ಬಹುಶಃ ವಿಶ್ವದಲ್ಲೇ ಈ ರೀತಿಯ ನೂತನ ಸಮರ ತಂತ್ರಜ್ಞಾನ ಹೊಂದಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.