ಬೆಂಗಳೂರು : ಏರ್ ಶೋ- 21 ಹಿನ್ನಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಕ್ಕೆ ಬಂದು ಹೋಗುವ ವಿಮಾನಗಳ ಸಮಯವನ್ನು ತಾತ್ಕಾಲಿಕವಾಗಿ ಫೆ.5ರ ತನಕ ಬದಲಾವಣೆ ಮಾಡಲಾಗಿದೆ.
ಏರ್ ಶೋ ವೈಮಾನಿಕ ಪ್ರದರ್ಶನದ ಪೂರ್ವ ಸಿದ್ಧತೆ, ಉದ್ಘಾಟನೆ ಹಾಗೂ ವೈಮಾನಿಕ ಪ್ರದರ್ಶನ ಸಮಯದಲ್ಲಿ ಬಹುತೇಕ ವಿಮಾನಗಳ ಕಾರ್ಯಾಚರಣೆಯನ್ನು ನಿಲ್ಲಿಸಲು ಕೆಐಎಎಲ್ ಸೂಕ್ತ ಕ್ರಮ ಕೈಗೊಂಡಿದೆ.
ಇದಲ್ಲದೆ ಕೆಐಎಎಲ್ ವಿಮಾನ ನಿಲ್ದಾಣವನ್ನು ಏರ್ ಶೋ ವೈಮಾನಿಕ ಹಾರಾಟ ಪ್ರದರ್ಶನದ ಪರ್ಯಾಯ ವಿಮಾನ ನಿಲ್ದಾಣವಾಗಿ ಸಜ್ಜಾಗೊಳಿಸಲಾಗಿದೆ ಎಂದು ಕೆಐಎಎಲ್ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಏರೊ ಇಂಡಿಯಾ ಪ್ರದರ್ಶನ ಹಿನ್ನಲೆಯಲ್ಲಿ ವಾಣಿಜ್ಯ ಕಾರ್ಯಾಚರಣೆ ಅವಧಿಯನ್ನು ಕಡಿಮೆ ಮಾಡಲಾಗಿದೆ. ಪೂರ್ವ ನಿಗಧಿ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ವಿಮಾನ ಪ್ರಯಾಣಿಕರಿಗೆ ಆದಷ್ಟು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಇದಕ್ಕಾಗಿ ವಿಮಾನಯಾನ ಸಂಸ್ಥೆಗಳು, ವಾಯುಪಡೆ ಅಧಿಕಾರಿಗಳೊಂದಿಗೆ ಬಿಐಎಎಲ್ ಸಂಸ್ಥೆ ನಿರಂತರವಾಗಿ ಸಂಪರ್ಕದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದೆ. ವಿವಿಧ ವಿಮಾನಯಾನ ಸಂಸ್ಥೆಗಳು ಕಾಲಕಾಲಕ್ಕೆ ಬದಲಾಯಿಸುವ ವಿಮಾನ ಹಾರಾಟ ಸೇವೆಯ ವೇಳಾಪಟ್ಟಿಯನ್ನು ಬಿಐಎಎಲ್ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.
ಕೆಐಎಎಲ್ ಏರ್ ಪೋರ್ಟ್ ನಲ್ಲಿ ಏರ್ ಶೋ ಪೂರ್ವಾಭ್ಯಾಸ ಮತ್ತು ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ಈ ಕೆಳಗಿನ ದಿನಾಂಕ ಮತ್ತು ಸಮಯದಂದು ವಾಣಿಜ್ಯ ವಿಮಾನಗಳ ಹಾರಾಟ ಇರುವುದಿಲ್ಲ :
* ಜ.1 ರಂದು ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ
* ಜ.2 ಹಾಗೂ 3 ರಂದು ಬೆಳಗ್ಗೆ 9 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ
* ಜ.4 ಹಾಗೂ 5 ರಂದು ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ರ ತನಕ