ಬೆಂಗಳೂರು, ಆ.22 www.bengaluruwire.com: ಮಂಡ್ಯ ಜಿಲ್ಲೆಯಲ್ಲಿ ಸಂಚಲನ ಮೂಡಿಸುವಂತಹ ಘಟನೆಯೊಂದು ಮುನ್ನೆಲೆಗೆ ಬಂದಿದ್ದು, ಸತ್ತ ದನಗಳ ಮೂಳೆಗಳನ್ನು ಸಕ್ಕರೆ ಕಾರ್ಖಾನೆಯೊಂದಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ವಾಹನ ತಡೆದು ವಿಚಾರಿಸಿದ ಸಾರ್ವಜನಿಕರು: ವಿಡಿಯೋದಲ್ಲಿ ಏನಿದೆ?:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜಿಪಿಎಸ್ ಸ್ಟಾಂಪ್ ಆಗಿರುವ ವಿಡಿಯೋದ ಪ್ರಕಾರ, 21-08-2026 ರಂದು ಭೈರಪಟ್ಟಣದ ದೊಡ್ಡಮಲ್ಲೂರಿನ ಎಂಬ ಸ್ಥಳದಲ್ಲಿ KA-04-AA-6071 ಎಂಬ ನೋಂದಣಿ ಸಂಖ್ಯೆಯ ಗೂಡ್ಸ್ ವಾಹನದಲ್ಲಿ, ಅಪಾರ ಪ್ರಮಾಣದ ಪ್ರಾಣಿಗಳ ಮೂಳೆಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಹಾಗೂ ಜಾಗೃತ ನಾಗರಿಕರು ವಾಹನವನ್ನು ತಡೆದು ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಚಾಲಕ, ಈ ಮೂಳೆಗಳನ್ನು ನಾಗಮಂಗಲ ಭಾಗದ ಖಾಸಗಿ ಸಕ್ಕರೆ ಕಾರ್ಖಾನೆಯೊಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಆದರೆ, ಸಕ್ಕರೆ ಉತ್ಪಾದನೆ ಅಥವಾ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಪ್ರಾಣಿಗಳ ಮೂಳೆಗಳ ಬಳಕೆ ನಿಷೇಧಿತ ಹಾಗೂ ನಿಯಮಬಾಹಿರವಾಗಿದ್ದು, ಈ ಸರಕು ವಾಸ್ತವವಾಗಿ ಕಾರ್ಖಾನೆಯ ಯಾವ ಉದ್ದೇಶಕ್ಕೆ ಹೋಗುತ್ತಿತ್ತು ಎಂಬುದು ಇನ್ನೂ ನಿಖರವಾಗಿ ದೃಢಪಟ್ಟಿಲ್ಲ.
ಆಹಾರ ಸುರಕ್ಷತಾ ಇಲಾಖೆ ಎಚ್ಚೆತ್ತುಕೊಳ್ಳುವುದೇ?
ಆಹಾರ ಪದಾರ್ಥಗಳ ಸಂಸ್ಕರಣೆ ಅಥವಾ ಸಕ್ಕರೆ ಕಾರ್ಖಾನೆಗಳ ಆವರಣಕ್ಕೆ ಇಂತಹ ತ್ಯಾಜ್ಯ ಪ್ರಾಣಿಜನ್ಯ ವಸ್ತುಗಳು ಸಾಗಣೆಯಾಗುವುದು ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ:
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ: (FSSAI) ಅಧಿಕಾರಿಗಳು ತಕ್ಷಣವೇ ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕಿದೆ.
ವಾಹನ, ಅದರ ಮಾಲೀಕರು ಮತ್ತು ಮೂಳೆಗಳನ್ನು ರವಾನಿಸಿದ ಮೂಲದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕಿದೆ.
ನಾಗಮಂಗಲದ ಸಂಬಂಧಪಟ್ಟ ಕಾರ್ಖಾನೆಯ ಆಡಳಿತ ಮಂಡಳಿಯನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ತರಬೇಕಿದೆ.
ಯಾವುದೇ ಪೂರ್ವಗ್ರಹ ಅಥವಾ ಊಹಾಪೋಹಗಳಿಗೆ ಆಸ್ಪದ ನೀಡದೆ, ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಈ ಘಟನೆಯ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಬಲವಾಗಿ ಕೇಳಿಬರುತ್ತಿದೆ. ವೈರಲ್ ವಿಡಿಯೋ ಲಿಂಕ್ ನೋಡಲು ಈ ಮುಂದೆ ಕ್ಲಿಕ್ ಮಾಡಿ: https://www.facebook.com/share/v/18NDREU5dG/

















