ಬೆಂಗಳೂರು, ಆ.21 www.bengaluruwire.com: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪಾರ್ಟ್ಮೆಂಟ್ ಸಂಸ್ಕೃತಿಯಲ್ಲಿ ನಿವಾಸಿಗಳು ಎದುರಿಸುತ್ತಿರುವ ನಿರಂತರ ಆಡಳಿತಾತ್ಮಕ ಗೊಂದಲಗಳು ಮತ್ತು ಬಿಲ್ಡರ್ಗಳ ಮಿತಿಮೀರಿದ ಶೋಷಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪ್ರಮುಖ ತೀರ್ಮಾನ ಕೈಗೊಂಡಿದೆ.
ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಹಾಗೂ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಉದ್ದೇಶದ ‘2026ನೇ ಸಾಲಿನ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ’ವನ್ನು ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಹಳೆಯ ಕಾಯ್ದೆಗಳಿಗೆ ಮುಕ್ತಿ, ನೂತನ ವ್ಯವಸ್ಥೆ ಜಾರಿ:
ನಗರ ಪ್ರದೇಶಗಳಲ್ಲಿ ಭೂಮಿಯ ಕೊರತೆಯಿಂದಾಗಿ ಬಹುತೇಕ ನಾಗರಿಕರು ಅಪಾರ್ಟ್ಮೆಂಟ್ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ 1972-73ರ ಹಳೆಯ ಕಾಯ್ದೆಗಳು ಹಾಗೂ ರೇರಾ (RERA) ನಿಯಮಗಳು ಪ್ರಸ್ತುತ ಸೃಷ್ಟಿಯಾಗುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ನಿವಾಸಿಗಳು ಮತ್ತು ಸಾರ್ವಜನಿಕರ ಜೊತೆ ಸರಣಿ ಸಮಾಲೋಚನೆ ನಡೆಸಿ, ಅವರ ಸಲಹೆಗಳನ್ನು ಪರಿಗಣಿಸಿ ಈ ಹೊಸ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ವಿಧೇಯಕದ ಪ್ರಮುಖ ಮುಖ್ಯಾಂಶಗಳು:
ಒಂದೇ ಅಪಾರ್ಟ್ಮೆಂಟ್ಗೆ ಒಂದೇ ಅಸೋಸಿಯೇಷನ್: ಇನ್ಮುಂದೆ ಪ್ರತಿಯೊಂದು ಅಪಾರ್ಟ್ಮೆಂಟ್ ಯೋಜನೆಗೂ ಒಂದೇ ನೋಂದಾಯಿತ ಕ್ಷೇಮಾಭಿವೃದ್ಧಿ ಸಂಘ (RWA) ಇರಲಿದ್ದು, ಅದು ಕಡ್ಡಾಯವಾಗಿ ನೂತನ ಕಾಯ್ದೆಯಡಿಯಲ್ಲೇ ನೋಂದಣಿಯಾಗಬೇಕು. ಪ್ರತ್ಯೇಕ ಸಂಘಟನೆಗಳ ರಚನೆಗೆ ಸಂಪೂರ್ಣ ನಿಷೇಧವಿದೆ.
ಸಾಮಾನ್ಯ ಪ್ರದೇಶಗಳ ಮೇಲಿನ ಹಕ್ಕು: ಸಾಮಾನ್ಯ ಜಾಗಗಳು, ರಸ್ತೆಗಳು ಹಾಗೂ ಕಾಂಪೌಂಡ್ ಗೋಡೆಗಳಂತಹ ಮುಕ್ತ ಪ್ರದೇಶಗಳನ್ನು ಬಿಲ್ಡರ್ಗಳು ಖಾಸಗಿಯಾಗಿ ಮಾರಾಟ ಮಾಡಲು ಅವಕಾಶವಿಲ್ಲ. ಇವುಗಳ ನಿರ್ವಹಣೆಯನ್ನು ನಿವಾಸಿಗಳ ಸಂಘಕ್ಕೆ ಹಸ್ತಾಂತರಿಸುವುದು ಕಡ್ಡಾಯ.
ಸಕ್ಷಮ ಪ್ರಾಧಿಕಾರಗಳ ಸ್ಥಾಪನೆ: ಸ್ಥಳೀಯ ಮಟ್ಟದಲ್ಲಿ (ಗ್ರಾಮ ಪಂಚಾಯತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ) ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಸಿವಿಲ್ ಕೋರ್ಟ್ ಅಧಿಕಾರ ಹೊಂದಿರುವ ‘ಸಕ್ಷಮ ಪ್ರಾಧಿಕಾರ’ ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ಸ್ಥಾಪಿಸಲಾಗುತ್ತದೆ.
ಕಟ್ಟಡ ಮರುನಿರ್ಮಾಣಕ್ಕೆ (Re-development) ಸ್ಪಷ್ಟ ನಿಯಮ: ಹಳೆಯ ಕಟ್ಟಡಗಳ ಮರುನಿರ್ಮಾಣಕ್ಕೆ ಶೇ.75ರಷ್ಟು ಮಾಲೀಕರ ಒಪ್ಪಿಗೆ ಸಾಕು. ಒಪ್ಪದ ಮಾಲೀಕರಿಗೆ ಮಾರುಕಟ್ಟೆ ದರದ ಎರಡು ಪಟ್ಟು ಪರಿಹಾರ ನೀಡಿ ಆಸ್ತಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
















