ಬೆಂಗಳೂರು, ಆ.20 www.bengaluruwire.com: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ನಿಗಾ ವಹಿಸಿದೆ. ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿ ವೀಸಾ ಅವಧಿ ಮೀರಿದರೂ 446 ವಿದೇಶಿಗರು ಅಕ್ರಮವಾಗಿ ವಾಸಿಸುತ್ತಿರುವುದು ಪತ್ತೆಯಾಗಿದೆ ಎಂದು ಗೃಹ ಇಲಾಖೆ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದೆ.
ವಿಧಾನ ಪರಿಷತ್ ಸದಸ್ಯ ಹೆಚ್.ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವರು ಲಿಖಿತ ಉತ್ತರ ನೀಡಿದ್ದು, ನಗರದಲ್ಲಿ ಪ್ರಸ್ತುತ ಮಾನ್ಯತೆ ಹೊಂದಿರುವ ವೀಸಾ ಮತ್ತು ಪಾಸ್‌ಪೋರ್ಟ್‌ನೊಂದಿಗೆ 5,304 ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಇದೇ ವೇಳೆ 446 ಮಂದಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಉಳಿದುಕೊಂಡಿದ್ದಾರೆ (Overstay). ಆದರೆ, ಪಾಸ್‌ಪೋರ್ಟ್ ಅವಧಿ ಮುಗಿದಿರುವ ಯಾವುದೇ ವಿದೇಶಿಯರು ಇಲ್ಲಿ ನೆಲೆಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.
3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ:
ದೇಶದೊಳಗೆ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ವಾಸವಾಗಿರುವವರ ನಿಖರ ಸಂಖ್ಯೆ ಲಭ್ಯವಿಲ್ಲದಿದ್ದರೂ, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಒಟ್ಟು 911 ಅಕ್ರಮ ವಲಸಿಗರನ್ನು ಪತ್ತೆಹಚ್ಚಿದೆ.

ಅಕ್ರಮ ವಲಸಿಗರ ದೇಶವಾರು ವಿವರ:
ಬಾಂಗ್ಲಾದೇಶ: 868, ಪಾಕಿಸ್ತಾನ: 20, ನೈಜೀರಿಯಾ: 13, ಶ್ರೀಲಂಕಾ: 08, ಮ್ಯಾನ್ಮಾರ್: 01 ಹಾಗೂ ಉಗಾಂಡಾ: 01
365 ವಿದೇಶಿ ಪ್ರಜೆಗಳು ಅಪರಾಧ ಕೃತ್ಯಗಳಲ್ಲಿ ಭಾಗಿ:
ರಾಜ್ಯದಲ್ಲಿ ಒಟ್ಟು 31 ದೇಶಗಳಿಗೆ ಸೇರಿದ 365 ವಿದೇಶಿ ಪ್ರಜೆಗಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಪರಾಧ ಕೃತ್ಯಗಳಲ್ಲಿ ನೈಜೀರಿಯಾದ 135, ಬಾಂಗ್ಲಾದೇಶದ 48, ನೇಪಾಳದ 44, ಪಾಕಿಸ್ತಾನದ 20 ಹಾಗೂ ಐವರಿ ಕೋಸ್ಟ್ ಮತ್ತು ಉಗಾಂಡಾದ ತಲಾ 13 ಮಂದಿ ಸೇರಿದ್ದಾರೆ.
ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು:
ವೀಸಾ ಅವಧಿ ಮುಗಿದು ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಘಟಕಗಳು ನಿಯಮಾನುಸಾರ ತಪಾಸಣೆ ನಡೆಸುತ್ತಿವೆ. ಪತ್ತೆಯಾದವರ ಮಾಹಿತಿಯನ್ನು ಡಿಪಿಎಂ (District Police Module) ಹಾಗೂ ಎಫ್‌ಐಪಿ (Foreigners Identification Portal) ನಲ್ಲಿ ದಾಖಲಿಸಲಾಗುತ್ತಿದೆ.
ನಂತರ ಮುಂದಿನ ಕಾನೂನು ಕ್ರಮ ಹಾಗೂ ಗಡಿಪಾರು ಪ್ರಕ್ರಿಯೆಗಾಗಿ ಇವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
















