ಬೆಂಗಳೂರು, ಆ.20 www.bengaluruwire.com: ರಾಜಧಾನಿಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಸೌದೆ ಬಳಸಿ ಸಾಂಪ್ರದಾಯಿಕ ಅಂತ್ಯಕ್ರಿಯೆ ನೆರವೇರಿಸುವ ಪ್ರಮುಖ ತಾಣವಾದ ಚಾಮರಾಜಪೇಟೆಯ ಟಿ.ಆರ್. ಮಿಲ್ ಹಿಂದೂ ರುದ್ರಭೂಮಿ ಅವ್ಯವಸ್ಥೆಯ ಗೂಡಾಗಿದೆ.
ದುಃಖತಪ್ತರಾಗಿ ಬರುವ ಕುಟುಂಬಸ್ಥರಿಗೆ ನೆರವಾಗಬೇಕಾದ ವ್ಯವಸ್ಥೆ, ಇಲ್ಲಿ ನಿಧಾನಗತಿಯ ಕಾಮಗಾರಿ, ಅನೈರ್ಮಲ್ಯ ಹಾಗೂ ಅನಧಿಕೃತ ವ್ಯಕ್ತಿಗಳ ಲೂಟಿಯ ತಾಣವಾಗಿ ಮಾರ್ಪಟ್ಟಿದೆ. ಈ ಕುರಿತು ‘ಬೆಂಗಳೂರು ವೈರ್’ ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್ ವರದಿ ಇಲ್ಲಿದೆ.
ಅರ್ಧಕ್ಕರ್ಧ ಚಿತೆಗಳು ಬಂದ್: ನೆಲದ ಮೇಲೆಯೇ ಹೆಣ ಸುಡುವ ದುಸ್ಥಿತಿ
ಸ್ಮಶಾನದಲ್ಲಿರುವ ಒಟ್ಟು 20 ಚಿತೆಗಳ ಪೈಕಿ 10 ಚಿತೆಗಳ ಮೇಲ್ಛಾವಣಿ ನವೀಕರಣ ಕಾಮಗಾರಿ ಹೆಸರಿನಲ್ಲಿ ಕಳೆದ 3-4 ತಿಂಗಳುಗಳಿಂದ ಅಂತ್ಯಕ್ರಿಯೆ ಸ್ಥಗಿತಗೊಂಡಿದೆ.

ಬೆಂಗಳೂರಿನ ಏಕೈಕ ಸೌದೆ ಚಿತಾಗಾರವಾದ ಕಾರಣ ದಿನಂಪ್ರತಿ 15ಕ್ಕೂ ಹೆಚ್ಚು ಮೃತದೇಹಗಳು ಇಲ್ಲಿಗೆ ಬರುತ್ತವೆ. ಚಿತೆಗಳ ಕೊರತೆಯಿಂದಾಗಿ ಹಲವು ಬಾರಿ ನೆಲದ ಮೇಲೆಯೇ ಸೌದೆ ಇಟ್ಟು ಶವ ಸುಡುವ ಅನಿವಾರ್ಯತೆ ಎದುರಾಗಿದೆ.

₹2 ಕೋಟಿ ವೆಚ್ಚದ ಈ ಯೋಜನೆಯ ಮೊದಲ ಹಂತವೇ ಕುಂಟುತ್ತಾ ಸಾಗಿದ್ದು, ಪೂರ್ಣಗೊಳ್ಳಲು ಕನಿಷ್ಠ 9 ತಿಂಗಳು ಬೇಕಾಗಬಹುದು ಎಂಬುದು ಸ್ಥಳೀಯರ ಆತಂಕ.
ವಾಯು ಮಾಲಿನ್ಯ ಹಾಗೂ ಅನೈರ್ಮಲ್ಯದ ತಾಂಡವ:
ಸೌದೆ ಉರಿಯುವಿಕೆಯಿಂದ ಹೊರಬರುವ ದಟ್ಟ ಹೊಗೆ ಅಕ್ಕಪಕ್ಕದ ಬಡಾವಣೆಗಳಿಗೆ ವ್ಯಾಪಿಸುತ್ತಿದ್ದು, ಸ್ಥಳೀಯರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ಇಲ್ಲಿ ಕಾಗದದಲ್ಲೇ ಉಳಿದಿವೆ.

ಕೈಕಾಲು ತೊಳೆಯುವ ಜಾಗ, ಶೌಚಾಲಯಗಳು ಅತ್ಯಂತ ಗಲೀಜಾಗಿದ್ದು, ಬಳಸಿದ ಚಾಪೆ, ಬೆಡ್‌ಶೀಟ್, ಹೂವಿನ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ. ಬೀಡಾಡಿ ದನಗಳು, ನಾಯಿಗಳು ಮತ್ತು ಹೆಗ್ಗಣಗಳ ಹಾವಳಿ ಮಿತಿ ಮೀರಿದೆ. ಶವವನ್ನು ಅಂತ್ಯ ಸಂಸ್ಕಾರಕ್ಕೆ ತರುವ ಕುಟುಂಬಸ್ಥರು ಹಾಗೂ ಬರುವ ಹಿರಿಯ ನಾಗರೀಕರು ಕೂರಲು ಸೂಕ್ತ ಆಸನ ವ್ಯವಸ್ಥೆಯಿಲ್ಲ, ಶುದ್ಧ ಕುಡಿಯುವ ನೀರು ಲಭ್ಯವಿಲ್ಲ.
ಅಧಿಕೃತ ಶುಲ್ಕ ₹350, ಮಧ್ಯವರ್ತಿಗಳ ಪ್ಯಾಕೇಜ್ ₹24,000!:
ಪಾಲಿಕೆಯ ನಿಯಮದಂತೆ ನೀರಿನ ಹಾಗೂ ನಿರ್ವಹಣಾ ಶುಲ್ಕ ₹350 ಮಾತ್ರ. ಆದರೆ ಸ್ಥಳದಲ್ಲಿ ಬೀಡುಬಿಟ್ಟಿರುವ ಅನಧಿಕೃತ ವ್ಯಕ್ತಿಗಳು ಶವ ತರುವ ಜನರಿಂದ ₹2,000 ದಿಂದ ₹3,000 ವರೆಗೆ ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ.
ಖಾಸಗಿ ಏಜೆಂಟರು ಆಂಬ್ಯುಲೆನ್ಸ್‌ನಿಂದ ಹಿಡಿದು ಅಂತ್ಯಕ್ರಿಯೆಯವರೆಗೆ ₹10,000 ದಿಂದ ₹24,000 ವರೆಗೆ ಅನಧಿಕೃತ ‘ಪ್ಯಾಕೇಜ್’ ದಂಧೆ ನಡೆಸುತ್ತಿದ್ದಾರೆ.
ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಕಾಮಗಾರಿಗೆ ವೇಗ ನೀಡುವುದರ ಜೊತೆಗೆ, ಸುಲಿಗೆಕೋರರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಂಡು ಈ ರುದ್ರಭೂಮಿಯನ್ನು ನಿಜವಾದ ‘ಚಿರಶಾಂತಿಧಾಮ’ವನ್ನಾಗಿ ರೂಪಿಸಬೇಕಿದೆ. ವಿಡಿಯೋ ಸುದ್ದಿಗೆ ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ: https://www.instagram.com/reel/DcQjqcUsBjm/?igsh=MW9qc3F5ZG0wN2N0Ng==&igsi=MW9qc3F5ZG0wN2N0Ng==
















