ಕೊಳ್ಳೆಗಾಲ, ಆ.17 www.bengaluruwire.com: ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಶೂಟೌಟ್‌ನಲ್ಲಿ ಮೃತಪಟ್ಟ ಮೂವರ ಅಂತ್ಯಕ್ರಿಯೆ ಇಂದು ನೆರವೇರಿದೆ.
ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಕೊಳ್ಳೆಗಾಲ ಉಪ ವಿಭಾಗಾಧಿಕಾರಿ (AC) ದಿನೇಶ್ ಕುಮಾರ್ ಮೀನಾ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಬೆಳಗಿನ ಜಾವ ನಡೆದ ಕಳ್ಳಬೇಟೆಗಾರರು ಮತ್ತು ಅರಣ್ಯ ಸಿಬ್ಬಂದಿ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದರು. ಈ ದಾರುಣ ಘಟನೆಯು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ತೀವ್ರ ಕಾನೂನು ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ವಿವರ ಮತ್ತು ಹಿನ್ನೆಲೆ

ಹೊಳೆಮೂರುತೊಟ್ಟು ಗಸ್ತಿನ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಕಳ್ಳಬಂದೂಕುಧಾರಿಗಳು ವನ್ಯಪ್ರಾಣಿ ಕಳ್ಳಬೇಟೆಗಾಗಿ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ಆಗಸ್ಟ್ 15 ರಂದು ಬೆಳಿಗ್ಗೆ 5 ರಿಂದ 5.30 ರ ಸುಮಾರಿಗೆ ಕಲ್ಲುಬಂಡೆ ಹಾಗೂ ಪೊದೆಗಳ ಮರೆಯಲ್ಲಿ ಅವಿತಿದ್ದವರು ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಶರಣಾಗುವಂತೆ ಎಚ್ಚರಿಕೆ ನೀಡಿದರೂ ನಾಡಬಂದೂಕಿನಿಂದ ದಾಳಿಗೆ ಯತ್ನಿಸಿದ ಕಾರಣ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಅರಣ್ಯ ಇಲಾಖೆ ಸಮರ್ಥಿಸಿಕೊಂಡಿದೆ.
ಮೂವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಸಂಭವಿಸಿದ್ದು, ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿತ್ತು. ಮತ್ತೊಬ್ಬ ಆರೋಪಿ ಕತ್ತಲಲ್ಲಿ ತಲೆಮರೆಸಿಕೊಂಡಿದ್ದ.
ಮೃತರ ವಿವರ:
ಆಂಟೋನಿ ಸ್ವಾಮಿ (50 ವರ್ಷ), ಮರಿಯಮಂಗಲ ಗ್ರಾಮ.
ಜಾನ್ ರೋಸ್ ಪೀಟರ್ (42 ವರ್ಷ), ಜಗನ್ನಾಥದೊಡ್ಡಿ ಗ್ರಾಮ.
ಕುಮಾರ್ (33 ವರ್ಷ), ಹಿಟಾಚಿ ವಾಹನ ಆಪರೇಟರ್, ಲಾರ್ಸದೊಡ್ಡಿ ಗ್ರಾಮ.
ತಲೆಮರೆಸಿಕೊಂಡಿರುವ ಆರೋಪಿ: ಮಹಿಮದಾಸ್ (45 ವರ್ಷ), ಮರಿಯಮಂಗಲ ಗ್ರಾಮ.
ಮೃತಪಟ್ಟವರ ಪಾರ್ಥಿವ ಶರೀರಗಳನ್ನು ತೋಮಿಯರ್ ಪಾಳ್ಯದ ಚರ್ಚ್‌ಗೆ ತಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರೈಸ್ತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ.
ತನಿಖೆ ಚುರುಕು ಮತ್ತು ಅಪ್ಡೇಟ್ಸ್:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದ್ದು, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಅರಣ್ಯ ಇಲಾಖೆಯು ನಾಲ್ಕು ಬಂದೂಕುಗಳು ಹಾಗೂ ವನ್ಯಮೃಗದ ಮಾಂಸವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಆದರೆ ಮೃತರ ಕುಟುಂಬಸ್ಥರು ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳೀಯ ಶಾಸಕರ ಮಧ್ಯಸ್ಥಿಕೆ ಹಾಗೂ ಪರಿಹಾರದ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಘಟನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೂಡ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಸಮಗ್ರ ಮತ್ತು ಪ್ರಾಮಾಣಿಕ ತನಿಖೆಗೆ ಆಗ್ರಹಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖಾ ವರದಿಯ ನಂತರವಷ್ಟೇ ಘಟನೆಯ ನೈಜ ಸಂಗತಿಗಳು ಹೊರಬರಬೇಕಿದೆ. ಸದ್ಯ ಹನೂರು ತಾಲೂಕಿನಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಹಾಗೂ ಆಡಳಿತಾತ್ಮಕವಾಗಿ ಕಟ್ಟೆಚ್ಚರ ವಹಿಸಲಾಗಿದೆ. (ಮುಖ್ಯ ಚಿತ್ರ ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)


















