ಬೆಂಗಳೂರು, ಆ.16 www.bengaluruwire.com: ದೇಶದ ವೈದ್ಯಕೀಯ ಕಾಲೇಜುಗಳಿಂದ ಪ್ರತಿವರ್ಷ ಸಾವಿರಾರು ವೈದ್ಯರು ಹೊರಬರುತ್ತಿದ್ದರೂ, ನೇಮಕಾತಿಯಲ್ಲಿನ ಕೊರತೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ವೈದ್ಯರ ಅಭಾವ ಮುಂದುವರಿದಿದೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಕರ್ನಾಟಕ ಕ್ಲಿನಿಕಲ್ ಪರ್ಪ್ಯೂಷನಿಸ್ಟ್’ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಡಾ. ಸಿ.ಎನ್. ಮಂಜುನಾಥ್, ದೇಶದ ವೈದ್ಯಕೀಯ ವಲಯದಲ್ಲಿನ ವಿರೋಧಾಭಾಸದ ಪರಿಸ್ಥಿತಿಯತ್ತ ಬೆಳಕು ಚೆಲ್ಲಿದ್ದಾರೆ.
ಒಂದು ಕಡೆ ಭಾರತ ಔಷಧ ಉತ್ಪಾದನಾ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ವೈದ್ಯಕೀಯ ಪದವೀಧರರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ದೇಶದಲ್ಲಿ ಸದ್ಯ 825 ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿವರ್ಷ 1.20 ಲಕ್ಷ ಎಂಬಿಬಿಎಸ್ ವೈದ್ಯರು ಮತ್ತು 90 ಸಾವಿರ ಸ್ನಾತಕೋತ್ತರ ವೈದ್ಯರು ಹೊರಬರುತ್ತಿದ್ದಾರೆ. ಆದಾಗ್ಯೂ, ಸೂಕ್ತ ನೇಮಕಾತಿ ಪ್ರಕ್ರಿಯೆಗಳು ನಡೆಯದ ಕಾರಣ, ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ವೈದ್ಯರ ಕೊರತೆ ಕಾಡುತ್ತಿದೆ ಎಂದು ಅವರು ತಿಳಿಸಿದರು.
”ಸಂಪನ್ಮೂಲಗಳು ಹೆಚ್ಚಾಗುತ್ತಿದ್ದರೂ, ಮುಂದಿನ ನಾಲ್ಕು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿಯೂ ನಿರುದ್ಯೋಗದ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ವೈದ್ಯರ ನೇಮಕಾತಿಯಲ್ಲಿ ಸಮತೋಲನ ಅಗತ್ಯವಿದೆ” ಎಂದು ಅವರು ಎಚ್ಚರಿಸಿದರು.

ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆದ್ಯತೆ:
ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಪರ್ಪ್ಯೂಷನಿಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ಹೀಗಾಗಿ, ತೆರೆದ ಹೃದಯ ಶಸ್ತ್ರಚಿಕಿತ್ಸೆ (Open Heart Surgery) ಸೌಲಭ್ಯ ಇರುವ ಆಸ್ಪತ್ರೆಗಳಿಗೆ ಮಾತ್ರ ಇಂತಹ ಕೋರ್ಸ್‌ಗಳನ್ನು ಮಂಜೂರು ಮಾಡುವಂತೆ ವೈದ್ಯಕೀಯ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಿದ್ದೇನೆ. ಅಲ್ಲದೆ, ಕ್ಲಿನಿಕಲ್ ಪರ್ಪ್ಯೂಷನಿಸ್ಟ್‌ಗಳ ಸಂಘಕ್ಕೆ ಪ್ರತ್ಯೇಕ ರಾಷ್ಟ್ರಮಟ್ಟದ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಸಿಪಿಎ ವೈಜ್ಞಾನಿಕ ಸಮಿತಿಯ ಮದನ್ ಕುಮಾರ್, ಅಧ್ಯಕ್ಷ ಟಿ.ಎಚ್. ಕೃಷ್ಣ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಗೋಪು ಸಭಾಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















