ಬೆಂಗಳೂರು, ಜೂ.28 www.bengaluruwire.com: ಮಾಧ್ಯಮ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ, ಪ್ರಖರ ವೈಚಾರಿಕ ಚಿಂತಕ ಎನ್. ಎಸ್. ಶಂಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ದಿಢೀರ್ ಅಗಲಿಕೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಮಾಜದ ಅಂಕುಡೊಂಕು ತಿದ್ದುವ ಧ್ವನಿಯಾಗಿದ್ದರು: ಎಂ.ಎನ್. ಅನುಚೇತ್:
ಎನ್. ಎಸ್. ಶಂಕರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್, “ಎನ್. ಎಸ್. ಶಂಕರ್ ಅವರು ಕೇವಲ ಪತ್ರಕರ್ತರಾಗಿರಲಿಲ್ಲ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಮುಖ ಧ್ವನಿಯಾಗಿದ್ದರು. ವಿವಿಧ ಮುಂಚೂಣಿ ಪತ್ರಿಕೆಗಳಲ್ಲಿ ಅವರು ನಿರ್ವಹಿಸಿದ ಜವಾಬ್ದಾರಿ ಹಾಗೂ ಅವರ ಬರಹಗಳು ಸದಾ ಸ್ಮರಣೀಯ. ಚಲನಚಿತ್ರ ನಿರ್ದೇಶನ, ಅನುವಾದ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಅವರು ಅಪಾರ ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದ್ದಾರೆ.
”ಅವರ ನಿಧನದಿಂದ ಮಾಧ್ಯಮ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ, ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಪ್ರಾರ್ಥಿಸಿ ಆಯುಕ್ತರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಮಲಗಿದ್ದಲ್ಲಿಯೇ ಕೊನೆಯುಸಿರೆಳೆದ ಹಿರಿಯ ಜೀವ:
ಕಳೆದ ಕೆಲವು ದಿನಗಳಿಂದ ಎನ್.ಎಸ್. ಶಂಕರ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಅವರು ವಿಧಿವಶರಾಗಿದ್ದಾರೆ. ಲಂಕೇಶ್ ಪತ್ರಿಕೆ, ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ ಹಾಗೂ ಸುದ್ದಿ ಟಿವಿಯಂತಹ ಪ್ರಮುಖ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಚಲನಚಿತ್ರ ಸಂಭಾಷಣೆ ಕ್ಷೇತ್ರದಲ್ಲೂ ಹೆಸರು ಗಳಿಸಿದ್ದರು. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು. ‘ಉಲ್ಟಾ ಪಲ್ಟಾ’ ಎಂಬ ಸೂಪರ್ ಹಿಟ್ ಕನ್ನಡ ಸಿನಿಮಾವನ್ನೂ ಅವರು ನಿರ್ದೇಶಿಸಿದ್ದರು.
ಶಿವಮೊಗ್ಗ ಮೂಲದ ಎನ್.ಎಸ್ ಶಂಕರ್ ಅವರು ತಮ್ಮ ಬಾಲ್ಯವನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಳೆದಿದ್ದರು. ಹೈಸ್ಕೂಲ್ ಓದಿದ್ದು ಮೈಸೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿದ್ದರು.
ಇಂದು ಸಂಜೆ ಅಂತ್ಯಕ್ರಿಯೆ:
ಎನ್.ಎಸ್. ಶಂಕರ್ ಅವರ ಅಂತ್ಯಕ್ರಿಯೆಯು ಇಂದು (ಜೂ.28) ಸಂಜೆ ನಾಲ್ಕು ಗಂಟೆಗೆ ಮಾಗಡಿ ರಸ್ತೆಯಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ. ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.





















