ಮುಂಬೈ, ಜೂ.18 www.bengaluruwire: ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲು ಸ್ಥಾಪಿಸಲು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಸಜ್ಜಾಗಿದೆ. ಹೌದು, ಬಹುನಿರೀಕ್ಷಿತ ₹30,000 ಕೋಟಿ ಮೌಲ್ಯದ ಐಪಿಒ (Initial Public Offering – IPO) ಬಿಡುಗಡೆಗೆ ಎನ್‌ಎಸ್‌ಇ ಮಾರುಕಟ್ಟೆ ನಿಯಂತ್ರಕ ಸೆಬಿಗೆ (SEBI) ದಾಖಲೆಗಳನ್ನು ಸಲ್ಲಿಸಿದೆ. ಇದು ಭಾರತದ ಅತಿದೊಡ್ಡ ಸಾರ್ವಜನಿಕ ಷೇರು ವಿತರಣೆಯಾಗಲಿದೆ.
ಒಂದು ದಶಕದ ಅಡೆತಡೆಗಳಿಗೆ ಮುಕ್ತಿ:
ಎನ್‌ಎಸ್‌ಇ ಷೇರು ಮಾರುಕಟ್ಟೆ ಪ್ರವೇಶಿಸುವ ಕನಸು ಇಂದಿನದ್ದಲ್ಲ. ಕಳೆದ ಹತ್ತು ವರ್ಷಗಳಿಂದಲೂ ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ವಿಶೇಷವಾಗಿ ಕುಖ್ಯಾತ ‘ಕೋ-ಲೊಕೇಶನ್’ (co-location) ಪ್ರಕರಣ ಸೇರಿದಂತೆ ಹಲವು ನಿಯಂತ್ರಕ ಅಡೆತಡೆಗಳಿಂದಾಗಿ ಎನ್‌ಎಸ್‌ಇ ತನ್ನ ಲಿಸ್ಟಿಂಗ್ (listing) ಯೋಜನೆಗಳನ್ನು ತಡೆಹಿಡಿಯಬೇಕಾಯಿತು. ಇದೀಗ ಈ ಎಲ್ಲಾ ಕಾನೂನು ತೊಡಕುಗಳನ್ನು ಯಶಸ್ವಿಯಾಗಿ ನಿವಾರಿಸಿಕೊಂಡಿರುವ ಎನ್‌ಎಸ್‌ಇ, ಬೃಹತ್ ಮೊತ್ತದ ಐಪಿಒ ಮೂಲಕ ಹೂಡಿಕೆದಾರರ ಮುಂದೆ ಬರಲು ಸಿದ್ಧವಾಗಿದೆ.
ದಾಖಲೆ ಬರೆಯಲಿರುವ ಎನ್‌ಎಸ್‌ಇ ಐಪಿಒ:

ಭಾರತದಲ್ಲಿ ಈವರೆಗೆ ಎಲ್ಐಸಿ (LIC) ಮತ್ತು ಹ್ಯುಂಡೈ ಇಂಡಿಯಾ (Hyundai India) ಐಪಿಒಗಳು ಅತಿದೊಡ್ಡ ಐಪಿಒಗಳೆಂಬ ಖ್ಯಾತಿ ಹೊಂದಿದ್ದವು. ಆದರೆ, ಇದೀಗ ₹30,000 ಕೋಟಿಗೂ ಅಧಿಕ ಮೊತ್ತದ ಎನ್‌ಎಸ್‌ಇ ಐಪಿಒ ಆ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಲಿದೆ. ಈ ಮೂಲಕ ದೇಶದ ಆರ್ಥಿಕ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಎನ್‌ಎಸ್‌ಇಯ ಈ ನಡೆಯು ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಭಾರಿ ಉತ್ಸಾಹ ಮೂಡಿಸಿದ್ದು, ಎಲ್ಲರ ಕಣ್ಣು ಈಗ ಐಪಿಒ ಬಿಡುಗಡೆಯ ದಿನಾಂಕ ಮತ್ತು ಷೇರು ಬೆಲೆ ನಿಗದಿಯ ಮೇಲಿದೆ.
ಚಿಲ್ಲರೆ ಹೂಡಿಕೆದಾರರು, NRI ಗಳು, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ಮತ್ತು ಅರ್ಹ ಸಾಂಸ್ಥಿಕ ಖರೀದಿದಾರರು ಸೇರಿದಂತೆ ಮಾನ್ಯ ಡಿಮ್ಯಾಟ್ ಮತ್ತು ವ್ಯಾಪಾರ ಖಾತೆಯನ್ನು ಹೊಂದಿರುವ ಯಾರಾದರೂ, ಚಿಲ್ಲರೆ ವರ್ಗದ ಅಡಿಯಲ್ಲಿ ಒಟ್ಟು ಬಿಡ್ ಮೌಲ್ಯವು ₹2 ಲಕ್ಷ ಮೀರದವರೆಗೆ, ಆಫರ್ ಫಾರ್ ಸೇಲ್ (OFS) ಸಮಯದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಷೇರುಗಳನ್ನು ಖರೀದಿಸಬಹುದು. (Photo Credit: Reuters)





















