www.Bengaluruwire.Com: ರಾಜಧಾನಿ ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 66 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಹಾಗೂ ಶಂಕಿತ ನಕಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿಯಿಂದ ಗೂಡ್ಸ್ ರೈಲಿನ ಮೂಲಕ ಸಾಗಣೆ ಮಾಡಲಾಗುತ್ತಿದ್ದ ಈ ಬೃಹತ್ ಮದ್ಯದ ಜಾಲವನ್ನು ಭೇದಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯ ವಿವರ:
ಮೇ 22ರಂದು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗೂಡ್ಸ್ ರೈಲಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಬಕಾರಿ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿಯ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಜಿಲ್ಲೆ ಉಪ ಆಯುಕ್ತ ಭರತೇಶ್ ನೇತೃತ್ವದ ಅಬಕಾರಿ ಅಧಿಕಾರಿಗಳ ತಂಡ, ರೈಲ್ವೆ ಭದ್ರತಾ ಸಿಬ್ಬಂದಿಯ ಜತೆಗೂಡಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿತು.

ನಿಲ್ದಾಣದ ಬಳಿ ಇರುವ ಎ.ವಿ.ಜಿ ಲಾಜಿಸ್ಟಿಕ್ಸ್ ಲಿಮಿಟೆಡ್ ಪಾರ್ಸಲ್ ಗೋಡೌನ್ ಮುಂಭಾಗದಲ್ಲಿ ದಿಢೀರ್ ದಾಳಿ ನಡೆಸಿದಾಗ, 74 ರಟ್ಟಿನ ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟಿದ್ದ ವಿವಿಧ ಪ್ರೀಮಿಯಂ ಬ್ರಾಂಡ್‌ಗಳ ಸಿಂಗಲ್ ಮಾಲ್ಟ್ ವಿಸ್ಕಿ ಮತ್ತು ವೋಡ್ಕಾ ಸೇರಿದಂತೆ ಒಟ್ಟು 1118 ಬಾಟಲಿಗಳು ಪತ್ತೆಯಾಗಿವೆ. ಒಟ್ಟು 1042 ಲೀಟರ್ ಪ್ರಮಾಣದ ಈ ಮದ್ಯದ ಅಂದಾಜು ಮೌಲ್ಯ ₹66 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಸಚಿವರ ಶ್ಲಾಘನೆ:
ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಿಸುವ ಜಾಲದ ವಿರುದ್ಧ ಹದ್ದಿನ ಕಣ್ಣಿಡುವಂತೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಅಧಿಕಾರಿಗಳಿಗೆ ಈ ಹಿಂದೆಯೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಅತ್ಯಂತ ಜಾಗರೂಕರಾಗಿದ್ದ ಅಧಿಕಾರಿಗಳು ಈ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಸಾವಿರಾರು ಲೀಟರ್ ಶಂಕಿತ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯತತ್ಪರತೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.




















