ಬೆಂಗಳೂರು, ಫೆ.13 www.bengaluruwire.com : “ಅಣೆಕಟ್ಟುಗಳು ಕೇವಲ ಸಿಮೆಂಟ್ ಮತ್ತು ಕಾಂಕ್ರೀಟ್ ರಚನೆಗಳಲ್ಲ, ಅವು ರಾಷ್ಟ್ರದ ಶಕ್ತಿಯ ಸಂಕೇತ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಅಣೆಕಟ್ಟುಗಳ ಸುರಕ್ಷತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಆಯೋಜಿಸಲಾಗಿದ್ದ ‘ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026’ (ICDS 2026) ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ 1000 ದಿನಗಳ ಆಡಳಿತದ ಸವಿನೆನಪಿನಲ್ಲೇ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ ಎಂದರು.
ಏಷ್ಯಾದಲ್ಲೇ ಮೊದಲ ವಿದ್ಯುತ್ ತಂದ ನಾಡು:
ಕರ್ನಾಟಕದ ಜಲ ನಿರ್ವಹಣೆಯ ಪರಂಪರೆಯನ್ನು ಸ್ಮರಿಸಿದ ಅವರು, “1902ರಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆ ಆರಂಭಿಸಿದ ಕೀರ್ತಿ ನಮ್ಮ ರಾಜ್ಯದ್ದು. ಇಂದು ಕರ್ನಾಟಕ ತಾಂತ್ರಿಕವಾಗಿ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿದೆ” ಎಂದರು.

ಅಣೆಕಟ್ಟುಗಳ ಆಧುನೀಕರಣಕ್ಕೆ ಒತ್ತು:
ಭಾರತದಲ್ಲಿರುವ ಬಹುತೇಕ ಅಣೆಕಟ್ಟುಗಳು 60-70 ವರ್ಷ ಹಳೆಯದಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ‘ಡ್ರಿಪ್’ (DRIP) ಯೋಜನೆಯಡಿ ಕರ್ನಾಟಕದ 58 ಅಣೆಕಟ್ಟುಗಳನ್ನು 1,500 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಸುರಕ್ಷತೆ ಮತ್ತು ತಾಂತ್ರಿಕ ಮೇಲ್ದರ್ಜೆಗೇರಿಸುವಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮೇಕೆದಾಟು ಹಾಗೂ ನೀರಾವರಿ ಯೋಜನೆಗಳು:
ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸುವ ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಸಕಾರಾತ್ಮಕ ತೀರ್ಪು ಬಂದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತಸ್ನೇಹಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ನಿರ್ಬಂಧಕ್ಕೆ ಮರುಪರಿಶೀಲನೆ ಮನವಿ:
ಅಣೆಕಟ್ಟುಗಳ ಕೆಳಭಾಗದಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇರುವ ನಿರ್ಬಂಧವನ್ನು ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರಕ್ಕೆ (NDSA) ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಜ್ ಭೂಷಣ್ ಚೌಧರಿ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ರಾಜ್ಯ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಜಪಾನಿನ ಐಸಿಹೆಚ್ಎಆರ್ ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ತೊಶಿಯೋ ಕೊಯ್ಕೆ, ಬೃಹತ್ ಅಣೆಕಟ್ಟು ಅಂತಾರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಿ.ಕೆ. ಶರ್ಮಾ, ಭಾರತೀಯ ವಿಜ್ಞಾನ್ ಸಂಸ್ಥೆಯ ಡೀನ್ ಪ್ರೋ. ಸತ್ಯಂ ಸುವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.























