ಬೆಂಗಳೂರು, ಫೆ.12 www.bengaluruwire.com : ದೇಶದ ಬೆನ್ನೆಲುಬಾದ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಮತ್ತು ಕೃಷಿ ವಲಯದ ಸುಧಾರಣೆಗಾಗಿ ಸಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮನವಿ ಪತ್ರ ಸಲ್ಲಿಸಿದೆ.
ಸಂಘಟನೆಯ ಸಹ-ಸಂಚಾಲಕರಾದ ಕುರುಬೂರು ಶಾಂತಕುಮಾರ್ ಹಾಗೂ ಜಗಜಿತ್ ಸಿಂಗ್ ದಲ್ಲೇವಾಲ್ ನೇತೃತ್ವದಲ್ಲಿ ನಿಯೋಗವು ಸಿಎಂ ಅವರನ್ನು ಭೇಟಿಯಾಗಿ ಚರ್ಚಿಸಿತು.
ಪ್ರಮುಖ ಬೇಡಿಕೆಗಳು ಹೀಗಿವೆ:
ಕನಿಷ್ಠ ಬೆಂಬಲ ಬೆಲೆ (MSP) ಕಾನೂನು: ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಶಾಸನಬದ್ಧ ಕಾನೂನನ್ನು ಜಾರಿಗೆ ತರಲು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಸ್ವಾಮಿನಾಥನ್ ವರದಿ ಜಾರಿ: ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ‘C2+50%’ ಸೂತ್ರದಡಿ ಬೆಳೆಗಳಿಗೆ ಬೆಲೆ ನಿಗದಿಪಡಿಸಬೇಕು.
ಸಂಪೂರ್ಣ ಸಾಲ ಮನ್ನಾ: ರೈತರು ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕಿದ್ದು, ಅವರ ಎಲ್ಲಾ ಕೃಷಿ ಸಾಲಗಳನ್ನು ತಕ್ಷಣವೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಭೂಸ್ವಾಧೀನ ಕಾಯ್ದೆ ತಿದ್ದುಪಡಿ: 2013ರ ಭೂಸ್ವಾಧೀನ ಕಾಯ್ದೆಯನ್ನು ಮರುಸ್ಥಾಪಿಸಿ, ರೈತರ ಶೇ. 75 ರಷ್ಟು ಒಪ್ಪಿಗೆಯಿಲ್ಲದೆ ಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಮತ್ತು ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕು.
ಕಬ್ಬು ಬೆಳೆಗಾರರ ಹಿತರಕ್ಷಣೆ: ಕಬ್ಬಿಗೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 6000 ರೂ. ಎಫ್‌ಆರ್‌ಪಿ (FRP) ಘೋಷಿಸಬೇಕು ಮತ್ತು 14 ದಿನಗಳೊಳಗೆ ಹಣ ಪಾವತಿಸದಿದ್ದರೆ ಶೇ. 12-15 ರಷ್ಟು ಬಡ್ಡಿ ನೀಡಬೇಕು.
ಹವಾಮಾನ ಬದಲಾವಣೆ ಪರಿಹಾರ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಷ್ಟ ಅನುಭವಿಸುವ ರೈತರಿಗೆ ವೈಜ್ಞಾನಿಕ ಬೆಳೆ ವಿಮೆ ಯೋಜನೆ ಜಾರಿಗೆ ತರಬೇಕು.
ರೈತ ವಿರೋಧಿ ಬೀಜ ಮಸೂದೆ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ಕೈಬಿಡಬೇಕು ಹಾಗೂ ಕೃಷಿ ಕ್ಷೇತ್ರವನ್ನು ಯಾವುದೇ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಹೊರಗಿಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಈ ಸಂದರ್ಭದಲ್ಲಿ ಆಗ್ರಹಿಸಿದೆ.























