ಬೆಂಗಳೂರು, ಫೆ.09 www.bengaluruwire.com : ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾಪವು ರಾಜಕೀಯ ರಣರಂಗವಾಗಿ ಮಾರ್ಪಟ್ಟಿದೆ. ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಆತಂಕದ ನಡುವೆಯೇ, ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ದಾಳಿ ನಡೆದಿದೆ.
ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದರೆ, ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನವೇ ಇದಕ್ಕೆ ಕಾರಣ ಎಂದು ಬಿಜೆಪಿ ತಿರುಗೇಟು ನೀಡಿದೆ.
ಕೇಂದ್ರದ ಪಾತ್ರವಿಲ್ಲ, ಧಮ್ಮಿದ್ದರೆ ಸಿಎಂ ಪತ್ರ ಬರೆಯಲಿ: ಅಶೋಕ್ ಸವಾಲು:
ದರ ಏರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮೆಟ್ರೋ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು. “ಬೆಂಗಳೂರು ಮೆಟ್ರೋದಲ್ಲಿ 87% ಪಾಲು ರಾಜ್ಯ ಸರ್ಕಾರದ್ದಾಗಿದೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು (MD) ನೇಮಿಸುವುದು, ಟೆಂಡರ್ ಕರೆಯುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರವಲ್ಲ.

ಫೇರ್ ಫಿಕ್ಸೇಷನ್ ಕಮಿಟಿ (ದರ ನಿಗದಿ ಸಮಿತಿ) ಸ್ವತಂತ್ರವಾಗಿದ್ದು, ಅದು ಸಲ್ಲಿಸುವ ವರದಿಯನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ನೇಮಿತ ಎಂಡಿ ಮತ್ತು ಸರ್ಕಾರಕ್ಕಿದೆ,” ಎಂದು ಅವರು ಪ್ರತಿಪಾದಿಸಿದರು.
ಅಲ್ಲದೆ, “ಒಂದು ವೇಳೆ ಕೇಂದ್ರವೇ ದರ ಏರಿಕೆ ಮಾಡುತ್ತಿದೆ ಎಂದಾದರೆ, ಮುಂದಿನ ಎರಡು ವರ್ಷ ದರ ಏರಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆಯಲಿ,” ಎಂದು ಅಶೋಕ್ ಸವಾಲು ಹಾಕಿದರು. ರಾಜ್ಯ ಸರ್ಕಾರ ಪಾಪರ್ ಆಗಿರುವುದರಿಂದ ದರ ಏರಿಕೆಗೆ ಮುಂದಾಗಿದ್ದು, ಕೇಂದ್ರ ಸರ್ಕಾರ ಜನರ ಧ್ವನಿಯಾಗಿ ಇದನ್ನು ತಡೆಹಿಡಿದಿದೆ ಎಂದು ಅವರು ಹೇಳಿದರು.
ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸಿದ ತೇಜಸ್ವಿ ಸೂರ್ಯಗೆ ಸುರೇಶ್ ತಿರುಗೇಟು:
ಇನ್ನೊಂದೆಡೆ, ದರ ಏರಿಕೆ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ‘ಖಾಲಿ ಟ್ರಂಕ್’ ಹಿಡಿದು ನಡೆಸಿದ ಪ್ರತಿಭಟನೆಯನ್ನು ಬಮೂಲ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಲೇವಡಿ ಮಾಡಿದರು. “ತೇಜಸ್ವಿ ಸೂರ್ಯ ಹಿಡಿದಿರುವ ಖಾಲಿ ಟ್ರಂಕ್, ಕಳೆದ 12 ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆಯ ಸಂಕೇತವಾಗಿದೆ,” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರದ ತಾರತಮ್ಯ ನೀತಿಯೇ ಮೆಟ್ರೋ ಆರ್ಥಿಕ ಸಂಕಷ್ಟಕ್ಕೆ ಕಾರಣ ಎಂದು ಸುರೇಶ್ ದೂರಿದರು.
“ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತದೆ. ಆದರೆ, ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಬೆಂಗಳೂರಿಗೆ ಕೇವಲ 10% ಅನುದಾನ ನೀಡುತ್ತಿದೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ? ಕರ್ನಾಟಕಕ್ಕೂ 20% ಅನುದಾನ ಕೊಟ್ಟರೆ ಸಾರ್ವಜನಿಕರ ಮೇಲಿನ ಹೊರೆ ಕಡಿಮೆಯಾಗುತ್ತದೆಯೇ?
ತೇಜಸ್ವಿ ಸೂರ್ಯ ಅವರು ಪ್ರಧಾನಿ ಮುಂದೆ ಮಾತನಾಡಿ ರಾಜ್ಯಕ್ಕೆ ಹಣ ತರಲಿ,” ಎಂದು ಸವಾಲೆಸೆದರು.
ಒಟ್ಟಾರೆಯಾಗಿ, ಮೆಟ್ರೋ ದರ ಏರಿಕೆಯ ಬಿಸಿ ಕಾವಲಿಯಂತಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಗೂಬೆ ಕೂರಿಸುವಲ್ಲಿ ನಿರತರಾಗಿದ್ದಾರೆ.























