ಬೆಂಗಳೂರು, ಫೆ.07 www.bengaluruwire.com : ರಾಜ್ಯದ ರಿಯಲ್ ಎಸ್ಟೇಟ್ ಮತ್ತು ಕಂದಾಯ ಇಲಾಖೆಯ ಇತಿಹಾಸದಲ್ಲೇ ಪ್ರಮುಖ ಬದಲಾವಣೆಯನ್ನು ಸರ್ಕಾರ ಮಾಡಿದೆ.
ಇನ್ನು ಮುಂದೆ ಮಾಸ್ಟರ್ ಪ್ಲಾನ್ (CDP) ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೂಮಿಯನ್ನು ಪ್ರತ್ಯೇಕವಾಗಿ ಪರಿವರ್ತನೆ (Land Conversion) ಮಾಡುವ ಅಗತ್ಯವಿರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವ್ಯಾಪ್ತಿಯ ಭೂಮಿ ‘ಸ್ವಯಂ ಪರಿವರ್ತನೆ’ (Land Auto Conversion) ನೂತನ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ನಿರ್ಧಾರದಿಂದ ಬೆಂಗಳೂರಿನ ಲಕ್ಷಾಂತರ ‘ಬಿ’ ಖಾತಾ ಸೈಟ್ ಮಾಲೀಕರಿಗೆ ನೇರ ಪ್ರಯೋಜನವಾಗಲಿದ್ದು, ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿದ್ದ ದೊಡ್ಡ ಕಾನೂನು ತೊಡಕು ನಿವಾರಣೆಯಾದಂತಾಗಿದೆ.
ಏನಿದು ಹೊಸ ಬದಲಾವಣೆ?:

ಇಲ್ಲಿಯವರೆಗೂ ಮಾಸ್ಟರ್ ಪ್ಲಾನ್ ಅಥವಾ ಸಿಡಿಪಿ (CDP) ವ್ಯಾಪ್ತಿಯಲ್ಲಿರುವ ಜಮೀನಿನ ಅಭಿವೃದ್ಧಿಗೆ ಕಡ್ಡಾಯವಾಗಿ ಭೂ ಪರಿವರ್ತನೆ ಮಾಡಿಸಬೇಕಿತ್ತು. ‘ಡೀಮ್ಡ್ ಕನ್ವರ್ಷನ್’ ಇದ್ದರೂ ಸಹ, ಈ ಪ್ರಕ್ರಿಯೆಯು ಕನಿಷ್ಠ 4 ರಿಂದ 6 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಈ ವಿಳಂಬ ನೀತಿಯಿಂದಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿತ್ತು. ಆದರೆ, ನೂತನ ತಂತ್ರಾಂಶದ ಅಡಿಯಲ್ಲಿ, ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನಾ ಅನುಮೋದನೆ ಪಡೆಯಬಹುದು. ಯೋಜನೆಯ ಅನುಮೋದನೆಯ ಭಾಗವಾಗಿಯೇ ಭೂ ಪರಿವರ್ತನೆಯನ್ನು ಪರಿಗಣಿಸಲಾಗುತ್ತದೆ.
‘ಬಿ’ ಖಾತಾ ಮಾಲೀಕರಿಗೆ ಸಿಹಿ ಸುದ್ದಿ:
ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಅನಧಿಕೃತ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಿ, ‘ಬಿ’ ಖಾತಾ ಇಟ್ಟುಕೊಂಡು ಪರದಾಡುತ್ತಿದ್ದಾರೆ. ಅಂತಹ ಮಾಲೀಕರಿಗೆ ಈ ಹೊಸ ಆದೇಶ ವರದಾನವಾಗಲಿದೆ. “ಸ್ವಯಂ ಪರಿವರ್ತನೆ ನಿಯಮ ಜಾರಿಯಾಗುವುದರಿಂದ ಬಿ-ಖಾತಾ ನಿವೇಶನಗಳನ್ನು ಎ-ಖಾತಾ (A-Khata) ಆಗಿ ಪರಿವರ್ತಿಸಲು ಜಿಬಿಎ ಕಾನೂನು ಚೌಕಟ್ಟನ್ನು ಸರಳಗೊಳಿಸಿದೆ. ಇದರಿಂದ ನಿಮ್ಮ ಆಸ್ತಿಗೆ ಸಂಪೂರ್ಣ ಕಾನೂನು ಬಲ ಸಿಗಲಿದ್ದು, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಮತ್ತು ಆಸ್ತಿ ಮಾರಾಟ ಮಾಡಲು ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ,” ಎಂದು ಸಚಿವರು ಭರವಸೆ ನೀಡಿದರು.
ಭ್ರಷ್ಟಾಚಾರಕ್ಕೆ ಬ್ರೇಕ್, ಜನಸಾಮಾನ್ಯರಿಗೆ ನೆಮ್ಮದಿ
ಹಳೇ ಪದ್ಧತಿಯಿಂದಾಗಿ ಡೆವಲಪರ್‌ಗಳು ಮತ್ತು ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಅನಗತ್ಯ ವಿಳಂಬದಿಂದಾಗಿ ವೆಚ್ಚವೂ ಹೆಚ್ಚಾಗುತ್ತಿತ್ತು. ಅಂತಿಮವಾಗಿ ಈ ಹೊರೆ ನಿವೇಶನ ಖರೀದಿದಾರರ ತಲೆಗೆ ಬೀಳುತ್ತಿತ್ತು. ಆದರೆ, ನೂತನ ‘ಸ್ವಯಂ ಪರಿವರ್ತನೆ’ ವ್ಯವಸ್ಥೆಯು ಪಾರದರ್ಶಕವಾಗಿದ್ದು, ಆನ್‌ಲೈನ್ ಮೂಲಕ ಸಮಯಮಿತಿಯೊಳಗೆ ಕೆಲಸವಾಗಲಿದೆ. ಇದು ಆಡಳಿತದಲ್ಲಿ ಸುಧಾರಣೆ ತರುವುದಲ್ಲದೆ, ಕಂದಾಯ ಇಲಾಖೆಯ ಮೇಲಿದ್ದ ಅಪಖ್ಯಾತಿಯನ್ನು ತೊಡೆದುಹಾಕಲು ನೆರವಾಗಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಇ-ಖಾತಾ ಜೊತೆ ಜೋಡಣೆ:
ಕೇವಲ ಪರಿವರ್ತನೆ ಸುಲಭ ಮಾಡುವುದಷ್ಟೇ ಅಲ್ಲದೆ, ಈ ಪ್ರಕ್ರಿಯೆಯನ್ನು ಇ-ಖಾತಾ (E-Khata) ಜೊತೆಗೆ ಇಂಟಿಗ್ರೇಷನ್ ಮಾಡಲಾಗಿದೆ. ಇದರಿಂದಾಗಿ ಆಸ್ತಿಯ ದಾಖಲೆಗಳು ಡಿಜಿಟಲೀಕರಣಗೊಂಡು, ಮಾಲೀಕತ್ವಕ್ಕೆ ಹೆಚ್ಚಿನ ಭದ್ರತೆ ದೊರೆಯಲಿದೆ. ಭವಿಷ್ಯದಲ್ಲಿ ಯಾವುದೇ ಕಾನೂನು ತಕರಾರುಗಳು ಉಂಟಾಗದಂತೆ ಇದು ತಡೆಯಲಿದೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸರ್ಕಾರದ ಪ್ರಧಾನ ಕಾರ್ದರ್ಶಿಗಳಾದ (ವಿಪತ್ತು ನಿವರ್ಹಣೆ) ಮೌನೀಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟಾರೆಯಾಗಿ, ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವ ಜನಸಾಮಾನ್ಯರಿಗೆ ಮತ್ತು ಕಾನೂನು ತೊಡಕಿನಲ್ಲಿ ಸಿಲುಕಿದ್ದ ನಿವೇಶನದಾರರಿಗೆ ರಾಜ್ಯ ಸರ್ಕಾರ ಈ ಮೂಲಕ ದೊಡ್ಡ ಉಡುಗೊರೆ ನೀಡಿದಂತಾಗಿದೆ.























