ಬೆಂಗಳೂರು, ಫೆ.03 www.bengaluruwire.com : ಗ್ರಾಮೀಣ ಭಾಗದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ‘ಇ-ಸ್ವತ್ತು 2.0’ ಯೋಜನೆಯು ತಾಂತ್ರಿಕ ಅಡಚಣೆಗಳ ಸುಳಿಯಲ್ಲಿ ಸಿಲುಕಿದೆ.
2025ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಹೊಸ ಸಾಫ್ಟ್‌ವೇರ್‌ಗೆ ಚಾಲನೆ ನೀಡಲಾಯಿತಾದರೂ, ಎನ್‌ಐಸಿ (NIC) ರೂಪಿಸಿದ ಈ ತಂತ್ರಾಂಶದ ದೋಷಗಳಿಂದಾಗಿ ರಾಜ್ಯಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ.
ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಸಾಫ್ಟ್‌ವೇರ್ ಜಾರಿಯಾದ ನಂತರ ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ ಕೇವಲ ಶೇ.18 ರಷ್ಟು ಮಾತ್ರ ವಿಲೇವಾರಿಯಾಗಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) ಸುಮಾರು 97 ಲಕ್ಷ ಆಸ್ತಿಗಳನ್ನು ಕ್ರಮಬದ್ಧಗೊಳಿಸುವ ಗುರಿ ಹೊಂದಿತ್ತು. ಆದರೆ ಜನವರಿ 27 ರವರೆಗಿನ ಮಾಹಿತಿಯಂತೆ, ಕೇವಲ 44,508 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಕೇವಲ 7,978 ಆಸ್ತಿಗಳಿಗೆ ಮಾತ್ರ ಪ್ರಮಾಣಪತ್ರ ವಿತರಿಸಲಾಗಿದೆ.
ಹಾವೇರಿಯಲ್ಲಿ ಅತಿ ಹೆಚ್ಚು ಅರ್ಜಿ, ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ:

ಜಿಲ್ಲಾವಾರು ಅಂಕಿಅಂಶಗಳನ್ನು ನೋಡುವುದಾದರೆ, ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 15,768 ಅರ್ಜಿಗಳು ಸಲ್ಲಿಕೆಯಾಗಿವೆ. ಧಾರವಾಡ (4,159) ಮತ್ತು ಬೆಂಗಳೂರು ನಗರ (4,149) ನಂತರದ ಸ್ಥಾನದಲ್ಲಿವೆ. ಆದರೆ, ಕೊಡಗು ಜಿಲ್ಲೆಯಲ್ಲಿ ಕೇವಲ 20 ಅರ್ಜಿಗಳು ಸಲ್ಲಿಕೆಯಾಗಿರುವುದು ಯೋಜನೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,854 ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ಉಳಿದ 29 ಜಿಲ್ಲೆಗಳಲ್ಲಿ ಈ ಸಂಖ್ಯೆ 500 ರ ಗಡಿಯನ್ನೂ ದಾಟಿಲ್ಲ.
ಮುಂದುವರಿದ ತಾಂತ್ರಿಕ ಸಮಸ್ಯೆಗಳು:
11-ಬಿ ಖಾತಾವನ್ನು 11-ಎ ಖಾತಾವನ್ನಾಗಿ ಪರಿವರ್ತಿಸುವುದು, ಹೊಸ ಲೇಔಟ್‌ಗಳು ಮತ್ತು ಬಹುಮಹಡಿ ಕಟ್ಟಡಗಳಿಗೆ ಅರ್ಜಿ ಸಲ್ಲಿಸುವುದು, ಹಾಗೂ ಕೆಐಎಡಿಬಿ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣಪತ್ರ ಪಡೆಯುವಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಎನ್‌ಐಸಿ ಸಂಸ್ಥೆಯು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ, ನವೆಂಬರ್ 28 ರ ಸುಮಾರಿಗೆ ಹೊಸ ಖಾತಾ ಪ್ರಕ್ರಿಯೆ ಸಂಪೂರ್ಣವಾಗಿ ನಿಂತು ಹೋಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರಕ್ಕೆ ಸಚಿವರ ಪತ್ರ:
ಈ ಗಂಭೀರ ಸಮಸ್ಯೆಯನ್ನು ಗಮನಿಸಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜನವರಿ 14 ರಂದು ಪತ್ರ ಬರೆದಿದ್ದಾರೆ. ಎನ್‌ಐಸಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ತುರ್ತಾಗಿ ಸರಿಪಡಿಸಿ, ಗ್ರಾಮೀಣ ಜನರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.

























