ಬೆಂಗಳೂರು, ಜ.13 www.bengaluruwire.com : ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ (German Chancellor) ಫೆಡ್ರಿಕ್ ಮೆರ್ಜ್ ಅವರು ತಮ್ಮ ಉನ್ನತ ಮಟ್ಟದ ನಿಯೋಗದೊಂದಿಗೆ ಮಂಗಳವಾರ ಬೆಂಗಳೂರಿಗೆ ಆಗಮಿಸಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜರ್ಮನ್ ಚಾನ್ಸೆಲರ್ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಜರ್ಮನಿ ಮತ್ತು ಕರ್ನಾಟಕದ ನಡುವಿನ ವಾಣಿಜ್ಯ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದ್ದು, ಚಾನ್ಸೆಲರ್ ಅವರೊಂದಿಗೆ ಆಗಮಿಸಿರುವ ನಿಯೋಗವನ್ನು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್, ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಉಪಸ್ಥಿತರಿದ್ದರು. ಅಲ್ಲದೆ, ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗಳು ಮತ್ತು ನವದೆಹಲಿಯ ಜರ್ಮನ್ ಕಾನ್ಸುಲೇಟ್ ಜನರಲ್ ಕಚೇರಿಯ ಅಧಿಕಾರಿಗಳು ಹಾಜರಿದ್ದು, ನಿಯೋಗವನ್ನು ಬರಮಾಡಿಕೊಂಡರು.

ಇಂದಿನ ಕಾರ್ಯಕ್ರಮಗಳು:
ಬೆಂಗಳೂರು ಭೇಟಿಯ ಭಾಗವಾಗಿ ಫೆಡ್ರಿಕ್ ಮೆರ್ಜ್ ಮತ್ತು ಅವರ ನಿಯೋಗವು ನಗರದ ಪ್ರಮುಖ ಸಂಸ್ಥೆಗಳಿಗೆ ಭೇಟಿ ನೀಡಲಿದೆ. ತಂತ್ರಜ್ಞಾನ, ಕೈಗಾರಿಕೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ವೀಕ್ಷಿಸಿದ ನಂತರ, ಇಂದು ಸಂಜೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಿಯೋಗವು ನಿರ್ಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























