ನವದೆಹಲಿ/ಬೆಂಗಳೂರು, ಜ.12 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿಯಲು ಕಾತರರಾಗಿರುವವರಿಗೆ ಮತ್ತು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಮುಖ ಆದೇಶ ನೀಡಿದೆ.
ನೂತನವಾಗಿ ರಚನೆಯಾಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (GBA) ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು 2026ರ ಜೂನ್ 30ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಖಡಕ್ ನಿರ್ದೇಶನ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರಿದ್ದ ದ್ವಿಸದಸ್ಯ ಪೀಠವು ಸೋಮವಾರ ಈ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಕಳೆದ ಐದಾರು ವರ್ಷಗಳಿಂದ ವಿವಿಧ ಕಾರಣಗಳಿಗೆ ಮುಂದೂಡಲ್ಪಡುತ್ತಲೇ ಬಂದಿದ್ದ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪಷ್ಟ ಕಾಲಮಿತಿ ದೊರೆತಂತಾಗಿದೆ.
ಫೆ.20ರೊಳಗೆ ಮೀಸಲಾತಿ ಪಟ್ಟಿ ಪ್ರಕಟ ಕಡ್ಡಾಯ:

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ,” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು, ಬರುವ ಫೆಬ್ರವರಿ 20, 2026ರೊಳಗೆ ಅಂತಿಮ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದೆ.

ಪರೀಕ್ಷೆ ಅಡ್ಡಿ: ಚುನಾವಣಾ ಆಯೋಗದ ಮನವಿ ಏನಿತ್ತು?:
ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು ಪ್ರಾಯೋಗಿಕ ಸಮಸ್ಯೆಗಳನ್ನು ನ್ಯಾಯಾಲಯದ ಮುಂದಿಟ್ಟರು. “ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯವು ಮಾರ್ಚ್ 16ರವರೆಗೆ ನಡೆಯಲಿದೆ. ಆನಂತರ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಆರಂಭವಾಗಲಿವೆ. ಈ ಸಮಯದಲ್ಲಿ ಚುನಾವಣಾ ಕಾರ್ಯಕ್ಕೆ ಶಿಕ್ಷಕರು ಮತ್ತು ಸರ್ಕಾರಿ ಸಿಬ್ಬಂದಿಯ ಕೊರತೆ ಎದುರಾಗಲಿದೆ. ಹೀಗಾಗಿ, ಮೇ ತಿಂಗಳ ಅಂತ್ಯದವರೆಗೂ ಚುನಾವಣೆ ನಡೆಸುವುದು ಕಷ್ಟಸಾಧ್ಯ. ಸಂಪೂರ್ಣ ಪ್ರಕ್ರಿಯೆ ಮುಗಿಸಲು ಜೂನ್‌ವರೆಗೂ ಕಾಲಾವಕಾಶ ಬೇಕು,” ಎಂದು ಮನವಿ ಮಾಡಿದರು.
ಆಯೋಗದ ಈ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಪೋರ್ಡ್ ಪರೀಕ್ಷೆಗಳು ಮುಗಿದ ತಕ್ಷಣವೇ ಚುನಾವಣೆ ನಡೆಸುವಂತೆ ಸೂಚಿಸಿತು. “ಯಾವುದೇ ಸಂದರ್ಭದಲ್ಲೂ 2026ರ ಜೂನ್ 30ರ ಒಳಗೆ ಚುನಾವಣಾ ಪ್ರಕ್ರಿಯೆ ಮುಗಿದಿರಬೇಕು,” ಎಂದು ಪೀಠವು ಸ್ಪಷ್ಟವಾಗಿ ಆದೇಶಿಸಿತು.
ಪಾಲಿಕೆ ಚುನಾವಣೆ ತಕರಾರಿನ ಹಿನ್ನೆಲೆ ಏನು?:
ಬಿಬಿಎಂಪಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮತ್ತು ಡಿಸೆಂಬರ್ 4, 2020ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ತನ್ನ ಆದೇಶದಲ್ಲಿ, ಮತದಾರರ ಪಟ್ಟಿ ಪ್ರಕಟವಾದ ಆರು ವಾರಗಳಲೊಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ, 5 ಪ್ರತ್ಯೇಕ ಪಾಲಿಕೆಗಳಾಗಿ ವಿಂಗಡಣೆಯಾಗಿರುವುದರಿಂದ ಹೊಸ ಸ್ವರೂಪದಲ್ಲಿ ಚುನಾವಣೆ ನಡೆಯಲಿದೆ.























