ಬೆಂಗಳೂರು, ಜ.07 www.bengaluruwire.com : ಬಳ್ಳಾರಿಯಲ್ಲಿ ಜನವರಿ 1 ರಂದು ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಬಳ್ಳಾರಿ ವಲಯ ಐಜಿಪಿ ಹಾಗೂ ಎಸ್‌ಪಿ ಆಗಿ ದಕ್ಷ ಅಧಿಕಾರಿಗಳನ್ನು ರಾಜ್ಯ ಸರ್ಕಾರ ನೇಮಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ ಸೇರಿದಂತೆ ಮೂವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ (ಜ.07) ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ 2004ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ (Dr. P.S. Harsha) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ವಲಯದ ಐಜಿಪಿಯಾಗಿ (Inspector General of Police, Ballari Range) ನೇಮಕ ಮಾಡಿದ್ದು, ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆಯೇ ಬಳ್ಳಾರಿ ವಲಯದ ಐಜಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.


ಇದುವರೆಗೂ ಬಳ್ಳಾರಿ ವಲಯದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಡಾ. ಹರ್ಷ ಅವರನ್ನು ನೇಮಿಸಲಾಗಿದೆ.

ಇತರೆ ವರ್ಗಾವಣೆಗಳ ವಿವರ:
ಬಳ್ಳಾರಿ ವಲಯದ ಡಿಐಜಿಯಾಗಿದ್ದ 2010ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ (Smt. Vartika Katiyar) ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (Directorate of Civil Rights Enforcement) ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಅಲ್ಲದೆ, ಗುಪ್ತಚರ ಇಲಾಖೆಯ ಡಿಸಿಪಿಯಾಗಿದ್ದ 2013ರ ಬ್ಯಾಚ್‌ನ ಅಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ (Dr. Suman D. Pennekar) ಅವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP, Ballari District) ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ವ್ಯಾಪಕ ಗಲಭೆ ನಡೆದು, ಭರತ್ ರೆಡ್ಡಿ ಆಪ್ತ ರಾಜಶೇಖರ್ ರೆಡ್ಡಿ ಎಂಬ ಕಾರ್ಯಕರ್ತನ ಹತ್ಯಯಾಗಿತ್ತು. ಆಗ ಇಡೀ ಬಳ್ಳಾರಿ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿತ್ತು.
ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೊಸದಾಗಿ ಅಧಿಕಾರಿ ವಹಿಸಿಕೊಂಡಿದ್ದ ಪವನ್ ನೆಜ್ಜೂರು ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಈಗ ಆ ಸ್ಥಾನಕ್ಕೆ ಸುಮನ್ ಡಿ ಪನ್ನೇಕರ್ ಅವರನ್ನು ನೇಮಿಸಲಾಗಿದೆ.






















