ಬೆಂಗಳೂರು, ಜ.05 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಬ್ಬಹರಿದಿನಗಳು ಬಂತೆಂದರೆ ಸಾಕು, ನಗರದ ಸೌಂದರ್ಯಕ್ಕೆ ಗ್ರಹಣ ಹಿಡಿದಂತೆಯೇ ಸರಿ. ಇದೀಗ ಹೊಸ ವರ್ಷದ ಸಂಭ್ರಮ ಕಳೆದು ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳ ಹಾವಳಿ ಮಿತಿಮೀರಿದೆ.
ರಾಜಕೀಯ ನಾಯಕರಿಗೆ ಶುಭಾಶಯ ಕೋರುವ ನೆಪದಲ್ಲಿ ಹಿಂಬಾಲಕರು ಹಾಕುವ ಫ್ಲೆಕ್ಸ್‌ಗಳು ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿವೆ. ಹೈಕೋರ್ಟ್‌ನ ಚಾಟಿ ಏಟಿನ ಹೊರತಾಗಿಯೂ ರಾಜಧಾನಿಯಲ್ಲಿ ಅಕ್ರಮ ಜಾಹೀರಾತುಗಳ ದರ್ಬಾರ್ ಎಗ್ಗಿಲ್ಲದೆ ಸಾಗಿದೆ.
ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಆರ್ಭಟ:
ಬಿಬಿಎಂಪಿ ವಿಭಜನೆಯಾಗಿ ಐದು ಹೊಸ ನಗರ ಪಾಲಿಕೆಗಳು ರಚನೆಯಾದ ಬಳಿಕ, ಆಡಳಿತ ಯಂತ್ರ ಚುರುಕಾಗಲಿದೆ ಎಂಬ ನಿರೀಕ್ಷೆಯಿತ್ತು. ಆರಂಭದಲ್ಲಿ ಕೆಲವೊಂದು ಪಾಲಿಕೆಗಳಲ್ಲಿ ಅಕ್ರಮ ಜಾಹೀರಾತು ತೆರವು ಕಾರ್ಯಾಚರಣೆಯನ್ನು ನಾಮಕಾವಸ್ತೆಗೆ ಎಂಬಂತೆ ನಡೆಸಲಾಗಿತ್ತು. ಆದರೆ, ಪ್ರಸ್ತುತ ಈ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಂತಿದೆ.


ವಿಶೇಷವಾಗಿ ವಿಜಯನಗರ, ಗೋವಿಂದರಾಜನಗರ, ಚಾಮರಾಜಪೇಟೆ, ನಾಗರಬಾವಿ, ರಾಜರಾಜೇಶ್ವರಿನಗರ ಮತ್ತು ಉಲ್ಲಾಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅಕ್ರಮ ಜಾಹೀರಾತುಗಳ ಅಳವಡಿಕೆ ಜೋರಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಕೃಪಾಪೋಷಿತ ಬೆಂಬಲಿಗರೇ ಈ ಕೃತ್ಯದಲ್ಲಿ ತೊಡಗಿರುವುದರಿಂದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸವಾರರ ಪಾಲಿಗೆ ಮೃತ್ಯುಕೂಪವಾಗುತ್ತಿರುವ ಡಿವೈಡರ್‌ಗಳು:
ಫ್ಲೆಕ್ಸ್ ಹಾಕುವ ಭರಾಟೆಯಲ್ಲಿ ರಸ್ತೆ ಸುರಕ್ಷತೆಯನ್ನೇ ಗಾಳಿಗೆ ತೂರಲಾಗಿದೆ. ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ (Road Dividers) ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳು ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರ ಸುಗಮ ಚಾಲನೆಗೆ ಅಡ್ಡಿಯುಂಟು ಮಾಡುತ್ತಿವೆ. ಎದುರಿನಿಂದ ಬರುವ ವಾಹನಗಳು ಕಾಣದಂತೆ ಮರೆಮಾಚುವ ಈ ಜಾಹೀರಾತು ಫಲಕಗಳು, ತಿರುವುಗಳಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. “ಗಾಳಿಗೆ ಅಥವಾ ಕೆಲವು ವಾಹನಗಳು ತಾಕಿ ಜಾಹೀರಾತುಗಳು ವಾಲಿಕೊಂಡರೆ, ಟೂವೀಲರ್ ಸವಾರರ ಅಪಘಾತಕ್ಕೂ ಕಾರಣವಾಗುತ್ತದೆ. ಇದಕ್ಕೆ ಯಾರೂ ಹೊಣೆ?” ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಘಟನೆ ಪಾಠವಾಗಲಿ:
ಇತ್ತೀಚೆಗೆ ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇಡೀ ಊರು ಬೂದಿ ಮುಚ್ಚಿದ ಕೆಂಡದಂತಾಗಿತ್ತು. ರಾಜಧಾನಿ ಬೆಂಗಳೂರಿನಲ್ಲೂ ಫ್ಲೆಕ್ಸ್ ಹಾಕುವ ಮತ್ತು ಕೀಳುವ ವಿಚಾರದಲ್ಲಿ ಆಗಾಗ ಸಣ್ಣಪುಟ್ಟ ರಂಪಾಟಗಳು ನಡೆಯುತ್ತಲೇ ಇವೆ. ಇವು ವಿಕೋಪಕ್ಕೆ ಹೋಗುವ ಮುನ್ನವೇ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ನಾಗರಿಕರ ಆಗ್ರಹವೇನು?:
ನಗರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಜಿಬಿಎ ವ್ಯಾಪ್ತಿಯ ಎಲ್ಲ ನಗರ ಪಾಲಿಕೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇವಲ ಫ್ಲೆಕ್ಸ್ ತೆರವುಗೊಳಿಸಿದರೆ ಸಾಲದು, ಅಂತಹ ಅನಧಿಕೃತ ಜಾಹೀರಾತು ಅಳವಡಿಸುವವರ ವಿರುದ್ಧ ಭಾರಿ ದಂಡ ವಿಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.























