ಬೆಂಗಳೂರು/ಬಳ್ಳಾರಿ, ಜ.04 www.bengaluruwire.com : ಬಳ್ಳಾರಿಯಲ್ಲಿ ಜನವರಿ 1 ರಂದು ನಡೆದ ಬ್ಯಾನರ್ ವಿವಾದ, ಘರ್ಷಣೆ ಮತ್ತು ಫೈರಿಂಗ್ ಘಟನೆಯು ರಾಜಕೀಯ ತಿರುವು ಪಡೆದುಕೊಂಡಿದೆ.
ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ತಮಗೆ ಕೇಂದ್ರ ಭದ್ರತಾ ಪಡೆಗಳ (Central Forces) ರಕ್ಷಣೆ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತುರ್ತು ಪತ್ರ ಬರೆದಿದ್ದಾರೆ.
ಜೀವ ಬೆದರಿಕೆ ಮತ್ತು ರಕ್ಷಣೆಯ ಮನವಿ:
ಜನವರಿ 3 ರಂದು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ, ಜನಾರ್ದನ ರೆಡ್ಡಿ ಅವರು ಬಳ್ಳಾರಿಯ ಹಾಲಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜನವರಿ 1 ರಂದು ನಾರಾ ಭರತ್ ರೆಡ್ಡಿ ಅವರ ಕಡೆಯವರು ಮಾರಕ ಅಸ್ತ್ರಗಳು, ಆಸಿಡ್ ಬಾಟಲಿಗಳೊಂದಿಗೆ ತಮ್ಮ ಮನೆಯ ಮುಂದೆ ಜಮಾಯಿಸಿ ಹಲ್ಲೆಗೆ ಯತ್ನಿಸಿದರು ಎಂದು ರೆಡ್ಡಿ ದೂರಿದ್ದಾರೆ.

ಈ ಘಟನೆಯಲ್ಲಿ ನಾರಾ ಭರತ್ ರೆಡ್ಡಿ ಅವರ ಗನ್ ಮ್ಯಾನ್ ಹಾರಿಸಿದ ಗುಂಡಿನಿಂದ ರಾಜಶೇಖರ್ ಎಂಬುವವರು ಮೃತಪಟ್ಟಿದ್ದಾರೆ ಎಂದು ಜನಾರ್ದನ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ, ರಾಜ್ಯ ಪೊಲೀಸರಿಂದ ತಮಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿದಿದೆ ಎಂದು ಅವರು ಆರೋಪಿಸಿದ್ದಾರೆ.
ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ತಮಗೆ ಬದುಕುವ ಹಕ್ಕಿದ್ದು, ರಾಜ್ಯ ಸರ್ಕಾರವು ರಕ್ಷಣೆ ನೀಡಲು ವಿಫಲವಾಗಿರುವ ಕಾರಣ ಕೇಂದ್ರ ಪಡೆಗಳ ಮೂಲಕ ತಕ್ಷಣವೇ ಭದ್ರತೆ ಒದಗಿಸಬೇಕೆಂದು ಅವರು ಅಮಿತ್ ಶಾ ಅವರನ್ನು ಕೋರಿದ್ದಾರೆ.
ಬಿಜೆಪಿ ಬೆಳವಣಿಗೆಯಿಂದ ಕಾಂಗ್ರೆಸ್‌ನಲ್ಲಿ ನಡುಕ :
ತಾವು ಬಳ್ಳಾರಿ ಮತ್ತು ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವುದು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿರುವುದು ಕಾಂಗ್ರೆಸ್ ನಾಯಕರಲ್ಲಿ, ವಿಶೇಷವಾಗಿ ಬಳ್ಳಾರಿ ಶಾಸಕರಲ್ಲಿ ನಡುಕ ಹುಟ್ಟಿಸಿದೆ ಎಂದು ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ. ಈ ರಾಜಕೀಯ ದ್ವೇಷವೇ ತಮ್ಮ ಮೇಲಿನ ದಾಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ಶುರುವಾದ ಗಲಾಟೆ ಈಗ ದೆಹಲಿ ಅಂಗಳ ತಲುಪಿದ್ದು, ಕೇಂದ್ರ ಗೃಹ ಸಚಿವಾಲಯ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಜಿ.ಪರಮೇಶ್ವರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ತುರ್ತಾಗಿ ನನಗೆ ಹಾಗೂ ತಮ್ಮ ಕುಟುಂಬಕ್ಕೆ ಝಡ್ ಶ್ರೇಣಿ ಅಥವಾ ಅದಕ್ಕೆ ಸಮಾನವಾದ ಉನ್ನತ ಪೊಲೀಸ್ ಭದ್ರತೆ ಒದಗಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ ಒಂದು ವೇಳೆ ಮತ್ತೆ ದಾಳಿ ನಡೆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.






















