ಬೆಳಗಾವಿ (ಸುವರ್ಣ ವಿಧಾನಸೌಧ) ಡಿ.18 www.bengaluruwire.com : ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ವೃಷಭಾವತಿ ಏತ ನೀರಾವರಿ ಯೋಜನೆಯನ್ನು ಒಟ್ಟು 1,731 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಗುರುವಾರ ವಿಧಾನಮಂಡಲದ ಅಧಿವೇಶನದಲ್ಲಿ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಶ್ರೀನಿವಾಸಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಯೋಜನೆಯ ಹಂತ ಹಂತದ ಬೆಳವಣಿಗೆ ಮತ್ತು ಅದರ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ವೆಚ್ಚದ ವಿವರ ಮತ್ತು ಯೋಜನೆಯ ವ್ಯಾಪ್ತಿ :
ಈ ಯೋಜನೆಯು 2017-18ರಲ್ಲಿ ಅಂದಿನ ಸರ್ಕಾರದಿಂದ 851 ಕೋಟಿ ರೂ. ಮೊತ್ತದಲ್ಲಿ ರೂಪಿತವಾಗಿತ್ತು. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಎಸ್‌ಟಿ ಹಾಗೂ ಇತರೆ ವೆಚ್ಚಗಳೂ ಸೇರಿ ಮೊತ್ತವು 1081 ಕೋಟಿ ರೂ.ಗೆ ಏರಿಕೆಯಾಯಿತು. ತದನಂತರ ಹೆಚ್ಚುವರಿಯಾಗಿ 650 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಒಟ್ಟು 1,731 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆ :
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಘಟಕಗಳಿಂದ ಪ್ರತಿದಿನ 148 ಎಂ.ಎಲ್.ಡಿ ಸಂಸ್ಕರಿಸಿದ ನೀರನ್ನು ಕೆ.ಸಿ. ವ್ಯಾಲಿ ಹಾಗೂ ಹೆಚ್.ಎನ್. ವ್ಯಾಲಿಗಳ ಮೂಲಕ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆರೆಗಳಿಗೆ ತುಂಬಿಸಲಾಗುತ್ತಿದೆ.
“ಈ ಯೋಜನೆಯಿಂದ ಈ ಭಾಗದ ಅಂತರ್ಜಲ ಮಟ್ಟವು 1500 ಅಡಿಗಳಿಂದ 250 ಅಡಿಗಳಿಗೆ ಏರಿಕೆಯಾಗಿದೆ. ಇದು ಏಷ್ಯಾ ಖಂಡದಲ್ಲೇ ಮಾದರಿ ಯೋಜನೆಯಾಗಿದ್ದು, ಕೇಂದ್ರ ಜಲಶಕ್ತಿ ಮಂತ್ರಾಲಯವೂ ಇದನ್ನು ಶ್ಲಾಘಿಸಿದೆ,” ಎಂದು ಬೋಸರಾಜು ಹೆಮ್ಮೆಯಿಂದ ನುಡಿದರು.
ನೀರಿನ ಗುಣಮಟ್ಟದ ಕುರಿತು ವಿವಾದ :
ನೆಲಮಂಗಲ ಶಾಸಕ ಶ್ರೀನಿವಾಸಯ್ಯ ಅವರು ಮಾತನಾಡಿ, “ಸಂಸ್ಕರಿಸಿದ ನೀರು ಕಲುಷಿತ ಮುಕ್ತವಾಗಿಲ್ಲ ಎಂದು ವಿಜ್ಞಾನಿಗಳು ಹಾಗೂ ನಿವೃತ್ತ ನ್ಯಾಯಾಧೀಶರು ಹೋರಾಟ ಮಾಡುತ್ತಿದ್ದಾರೆ. ಮೂರನೇ ಹಂತದ ಸಂಸ್ಕರಣೆ ಮಾಡುವುದಾದರೆ ಮಾತ್ರ ಕೆರೆಗಳಿಗೆ ನೀರು ತುಂಬಿಸಿ, ಇಲ್ಲದಿದ್ದರೆ ಬೇಡ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಎರಡು ಹಂತದ ಸಂಸ್ಕರಣೆಯಿಂದ ರೈತರಿಗೆ ಯಾವುದೇ ಹಾನಿಯಿಲ್ಲ ಎಂದು ಪ್ರತಿಷ್ಠಿತ ಸಂಸ್ಥೆಗಳು ವರದಿ ನೀಡಿವೆ. ಈ ನೀರು ನೇರ ಬಳಕೆಗೆ ಯೋಗ್ಯವಲ್ಲ, ಕೇವಲ ಅಂತರ್ಜಲ ಮರುಪೂರಣಕ್ಕಾಗಿ ಮಾತ್ರ. ಒಂದು ವೇಳೆ ಶಾಸಕರಿಗೆ ತಮ್ಮ ಕ್ಷೇತ್ರದ ಕೆರೆಗಳನ್ನು ತುಂಬಿಸುವುದು ಬೇಡವೆಂದಿದ್ದರೆ, ಆ ನೀರನ್ನು ಬೇರೆ ಕ್ಷೇತ್ರಗಳಿಗೆ ಬಳಸಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ,” ಎಂದು ಕಡಕ್ ಆಗಿ ಉತ್ತರಿಸಿದರು.
ಅಂತಿಮವಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಧ್ಯಪ್ರವೇಶಿಸಿ, ನೀರು ನಿಲ್ಲಿಸುವ ಮುನ್ನ ಸಂಬಂಧಪಟ್ಟ ಶಾಸಕರೊಂದಿಗೆ ಸಭೆ ನಡೆಸಿ ಚರ್ಚಿಸುವಂತೆ ಸಲಹೆ ನೀಡಿದರು.






















