ಬೆಂಗಳೂರು, ಡಿ.15 www.bengaluruwire.com :: ಪ್ರವಾಸಿಗರ ನೆಚ್ಚಿನ ತಾಣವಾದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (BBP) ಎಂಟು ವಿದೇಶಿ ಅತಿಥಿಗಳ ಆಗಮನವಾಗಿದೆ.
ದಕ್ಷಿಣ ಆಫ್ರಿಕಾದಿಂದ ಎಂಟು ಅಪರೂಪದ ‘ಬ್ಲ್ಯಾಕ್ ಕ್ಯಾಪ್ಡ್ ಕ್ಯಾಪುಚಿನ್’ (Black-capped Capuchin) ಕೋತಿಗಳನ್ನು ಯಶಸ್ವಿಯಾಗಿ ಆಮದು ಮಾಡಿಕೊಳ್ಳಲಾಗಿದ್ದು, ಉದ್ಯಾನವನದ ಪ್ರಾಣಿ ಸಂಕುಲಕ್ಕೆ ಹೊಸ ಸೇರ್ಪಡೆಯಾಗಿದೆ.
ಡಿಸೆಂಬರ್ 14ರ ರಾತ್ರಿ ಸುಮಾರು 9 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಈ ಕೋತಿಗಳನ್ನು ಬೆಂಗಳೂರಿಗೆ ಕರೆತರಲಾಯಿತು. ದಕ್ಷಿಣ ಆಫ್ರಿಕಾದ ಇಂದುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್‌ನಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಇವುಗಳನ್ನು ತರಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಆಮದು ಮಾಡಿಕೊಳ್ಳಲಾದ ಎಂಟು ಕೋತಿಗಳಲ್ಲಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಕೋತಿಗಳಿದ್ದು, ಇವುಗಳ ವೈಜ್ಞಾನಿಕ ಹೆಸರು ಸಪಾಜಸ್ ಅಪೆಲ್ಲಾ (Sapajus apella) ಆಗಿದೆ.

ಪ್ರಾಣಿ ವಿನಿಮಯದ ಉದ್ದೇಶವೇನು? :

ಅಂತರಾಷ್ಟ್ರೀಯ ಮಟ್ಟದ ಈ ಪ್ರಾಣಿ ವಿನಿಮಯ ಕಾರ್ಯಕ್ರಮವು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ, ವನ್ಯಜೀವಿ ಸಂರಕ್ಷಣಾ ಉಪಕ್ರಮಗಳನ್ನು ಬಲಪಡಿಸುವುದು, ಮೃಗಾಲಯದಲ್ಲಿರುವ ಪ್ರಾಣಿಗಳ ಆನುವಂಶಿಕ ವೈವಿಧ್ಯತೆಯನ್ನು (Genetic Diversity) ಹೆಚ್ಚಿಸುವುದು ಮತ್ತು ಪ್ರವಾಸಿಗರಲ್ಲಿ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಪ್ರಾಣಿಶಾಸ್ತ್ರದ ವೈಜ್ಞಾನಿಕ ಸಂಶೋಧನೆಗೂ ಈ ವಿನಿಮಯ ಸಹಕಾರಿಯಾಗಲಿದೆ.
ನಿಯಮಗಳ ಕಟ್ಟುನಿಟ್ಟಿನ ಪಾಲನೆ:
ವಿದೇಶದಿಂದ ಪ್ರಾಣಿಗಳನ್ನು ಕರೆತರುವುದು ಸುಲಭದ ಮಾತಲ್ಲ. ಈ ಪ್ರಕ್ರಿಯೆಯಲ್ಲಿ ಎಲ್ಲಾ ಶಾಸನಬದ್ಧ ಮತ್ತು ನಿಯಂತ್ರಣಾತ್ಮಕ ಅವಶ್ಯಕತೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕಟ್ಟುನಿಟ್ಟಾಗಿ ಪಾಲಿಸಿದೆ ಬಿಬಿಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರ (CZA), ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC), ಪಶುಸಂಗೋಪನೆ ಇಲಾಖೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB) ಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (NOC) ಪಡೆದ ಬಳಿಕವೇ ಈ ಪ್ರಕ್ರಿಯೆ ನಡೆದಿದೆ.
ಅಂತಿಮವಾಗಿ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದಿಂದ (DGFT) ಅಗತ್ಯ ಆಮದು ಪರವಾನಗಿಯನ್ನು ಪಡೆಯಲಾಗಿದೆ.
ಕ್ವಾರಂಟೈನ್ ನಂತರ ಪ್ರವಾಸಿಗರಿಗೆ ಕೋತಿಗಳ ದರ್ಶನ:
ಸದ್ಯಕ್ಕೆ ಈ ಕೋತಿಗಳನ್ನು ಪ್ರವಾಸಿಗರು ನೋಡಲು ಸಾಧ್ಯವಿಲ್ಲ. ಪಶುಸಂಗೋಪನಾ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, ಇವುಗಳನ್ನು ನಿಗದಿತ ಕ್ವಾರಂಟೈನ್ (ಸಂಪರ್ಕತಡೆ) ಕೇಂದ್ರದಲ್ಲಿ ಇರಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿಯೇ ಇವುಗಳ ಆರೋಗ್ಯ ತಪಾಸಣೆ ನಡೆದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿಯೂ ನಿಗಾ ವಹಿಸಲಾಗುತ್ತದೆ.
ಕ್ವಾರಂಟೈನ್ ಅವಧಿ ಮುಗಿದ ಬಳಿಕ, ತಜ್ಞ ವೈದ್ಯರು ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಅನುಮತಿ ನೀಡಿದ ನಂತರವಷ್ಟೇ ಇವುಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗುವುದು.
ಈ ಪ್ರಕ್ರಿಯೆಯು ಜಾಗತಿಕ ಸಂರಕ್ಷಣಾ ಸಹಯೋಗ ಮತ್ತು ವೈಜ್ಞಾನಿಕ ಪ್ರಾಣಿ ನಿರ್ವಹಣೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬದ್ಧತೆಯನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.























