ಬೆಂಗಳೂರು,ಡಿ.02 www.bengaluruwire.com : ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಟರ್ಮಿನಲ್ ಮುಂಭಾಗದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಇದೇ ಡಿಸೆಂಬರ್ 8ರಿಂದ ಅನ್ವಯವಾಗುವಂತೆ ನೂತನ ಪಿಕ್-ಅಪ್ (Pick-up) ಹಾಗೂ ಸಂಚಾರ ನಿಯಮಗಳನ್ನು ಜಾರಿಗೆ ತರುತ್ತಿದೆ.
ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರತಿದಿನ ಸುಮಾರು 1.30 ಲಕ್ಷ ಪ್ರಯಾಣಿಕರು ಮತ್ತು 1 ಲಕ್ಷಕ್ಕೂ ಅಧಿಕ ವಾಹನಗಳು ಭೇಟಿ ನೀಡುತ್ತವೆ. ಇದರಿಂದ ಟರ್ಮಿನಲ್ ಮುಂಭಾಗದ ಕರ್ಬ್‌ಸೈಡ್‌ನಲ್ಲಿ (Curbside) ವಿಪರೀತ ಟ್ರಾಫಿಕ್ ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ಬಿಐಎಎಲ್ (BIAL) ಆಡಳಿತ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಖಾಸಗಿ ವಾಹನಗಳಿಗೆ ‘ಸಮಯ ಮಿತಿ’ ಮತ್ತು ದಂಡದ ವಿವರ:
ಹೊಸ ನಿಯಮದ ಪ್ರಕಾರ, ಟರ್ಮಿನಲ್ 1 ಮತ್ತು ಟರ್ಮಿನಲ್ 2ರ ಆಗಮನ (Arrival) ವಲಯಕ್ಕೆ ಬರುವ ಖಾಸಗಿ ವಾಹನಗಳಿಗೆ (ಬಿಳಿ ಬೋರ್ಡ್) ನಿಗದಿಪಡಿಸಿದ ಪಿಕ್-ಅಪ್ ವಲಯದಲ್ಲಿ ಮೊದಲ 8 ನಿಮಿಷಗಳ ಕಾಲ ಉಚಿತ ಪ್ರವೇಶವಿರುತ್ತದೆ. ಇದು ಅಂತರರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚೇ ಆಗಿದೆ. ಆದರೆ, ಈ ಸಮಯ ಮೀರಿದರೆ ದಂಡ ಪಾವತಿಸಬೇಕಾಗುತ್ತದೆ.


* 0 – 8 ನಿಮಿಷ: ಉಚಿತ
* 8 – 13 ನಿಮಿಷ: ₹150 ದಂಡ
* 13 – 18 ನಿಮಿಷ: ₹300 ದಂಡ
* 18 ನಿಮಿಷಕ್ಕಿಂತ ಹೆಚ್ಚು: ವಾಹನವನ್ನು ಟೋಯಿಂಗ್ ಮಾಡಲಾಗುತ್ತದೆ ಮತ್ತು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗುತ್ತದೆ.
ಅನಗತ್ಯವಾಗಿ ದೀರ್ಘಕಾಲ ವಾಹನ ನಿಲ್ಲಿಸಿ ಕೃತಕ ದಟ್ಟಣೆ ಉಂಟುಮಾಡುವವರಿಗೆ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ:
ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ವಾಹನಗಳು (Ola, Uber, ಇತ್ಯಾದಿ) ಇನ್ನು ಮುಂದೆ ಟರ್ಮಿನಲ್ ಬಾಗಿಲಲ್ಲಿ ಪ್ರಯಾಣಿಕರಿಗಾಗಿ ಕಾಯುವಂತಿಲ್ಲ.
ಇವುಗಳಿಗೆ ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲೇ ಕಾಯಬೇಕು.

* ಟರ್ಮಿನಲ್ 1: P3 ಮತ್ತು P4 ಪಾರ್ಕಿಂಗ್ ವಲಯ.
* ಟರ್ಮಿನಲ್ 2: P2 ಪಾರ್ಕಿಂಗ್ ವಲಯ.
ಈ ಪಾರ್ಕಿಂಗ್ ವಲಯಗಳಲ್ಲಿ ವಾಣಿಜ್ಯ ವಾಹನಗಳಿಗೆ ಮೊದಲ 10 ನಿಮಿಷಗಳ ಪ್ರವೇಶ ಉಚಿತವಾಗಿರುತ್ತದೆ.
ಬಿಐಎಎಲ್ ಮುಖ್ಯಸ್ಥರು ಹೇಳಿದ್ದೇನು? :
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಐಎಎಲ್ ಎಂ.ಡಿ. ಮತ್ತು ಸಿಇಒ ಹರಿ ಮರಾರ್, “ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಿಕ್-ಅಪ್ ವಲಯಗಳಲ್ಲಿ ಶಿಸ್ತು ಕಾಪಾಡುವುದು ಅತ್ಯಗತ್ಯ. ಹೊಸ ನಿಯಮಗಳು ಪ್ರಯಾಣಿಕರಿಗೆ ತ್ವರಿತ ಮತ್ತು ಸುರಕ್ಷಿತ ಅನುಭವವನ್ನು ನೀಡಲಿವೆ. ಇದಕ್ಕೆ ಎಲ್ಲರ ಸಹಕಾರ ಕೋರುತ್ತೇವೆ,” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಅನಧಿಕೃತ ಕ್ಯಾಬ್‌ಗಳು ಮತ್ತು ನಿಯಮಬಾಹಿರ ಪಾರ್ಕಿಂಗ್‌ನಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇದನ್ನು ತಡೆಯಲು ‘#BeCabWise’ (#ಜಾಣ್ಮೆಯಿಂದಕ್ಯಾಬ್‌ಆರಿಸಿ) ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣಿಕರು ಅಧಿಕೃತ ಪಿಕ್-ಅಪ್ ಪಾಯಿಂಟ್‌ಗಳನ್ನೇ ಬಳಸುವಂತೆ ಬಿಐಎಎಲ್ ಆಡಳಿತ ಮಂಡಳಿ ಮನವಿ ಮಾಡಿದೆ.






















