ಬೆಂಗಳೂರು, ಡಿ.02 www.bengaluruwire.com : ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಇನ್ಮುಂದೆ ಪೌಷ್ಟಿಕಾಂಶಯುಕ್ತ ‘ಇಂದಿರಾ ಆಹಾರ ಕಿಟ್’ (Indira Food Kit) ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪಡಿತರ ಚೀಟಿದಾರರಿಗೆ ಈ ಕಿಟ್ ತಲುಪಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ (QR Code) ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಆಹಾರ ಇಲಾಖೆಯ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. ಪಡಿತರ ವಿತರಣೆಯಲ್ಲಿ ಸೋರಿಕೆ ತಡೆಗಟ್ಟಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ.

ಕ್ಯೂಆರ್ ಕೋಡ್ ಇಲ್ಲದೆ ರೇಷನ್ ಇಲ್ಲ :
ಯೋಜನೆಯ ಅತ್ಯಂತ ಪ್ರಮುಖ ಅಂಶವೆಂದರೆ ತಂತ್ರಜ್ಞಾನದ ಅಳವಡಿಕೆ. ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿರಾ ಕಿಟ್ ವಿತರಣೆಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ತಂತ್ರಾಂಶವನ್ನು (Software) ಅಳವಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪಡಿತರ ಚೀಟಿದಾರರ ಕಾರ್ಡ್ ಸ್ಕ್ಯಾನ್ ಆದ ಬಳಿಕವಷ್ಟೇ ಆಹಾರ ಕಿಟ್ ವಿತರಣೆಯಾಗಲಿದ್ದು, ಇದರಿಂದ ನಕಲಿ ಫಲಾನುಭವಿಗಳಿಗೆ ಕಡಿವಾಣ ಬೀಳಲಿದೆ.

ಇಂದಿರಾ ಆಹಾರ ಕಿಟ್‌ನಲ್ಲಿ ಏನೇನಿರಲಿದೆ? :
ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕಿಟ್ ವಿತರಣೆಯಾಗಲಿದ್ದು, ಇದರಲ್ಲಿ ಪ್ರಮುಖವಾಗಿ ಈ ಕೆಳಗಿನ ವಸ್ತುಗಳಿರಲಿವೆ:
* ಪೌಷ್ಟಿಕಾಂಶಯುಕ್ತ ತೊಗರಿ ಬೇಳೆ
* ಸೂರ್ಯಕಾಂತಿ ಎಣ್ಣೆ
* ಸಕ್ಕರೆ
* ಉಪ್ಪು
ತಿಂಗಳಿಗೆ 466 ಕೋಟಿ ರೂ. ವೆಚ್ಚ :
ರಾಜ್ಯದಲ್ಲಿ ಪ್ರಸ್ತುತ ಪ್ರತಿ ತಿಂಗಳು ಸುಮಾರು 1,25,08,262 ಇಂದಿರಾ ಆಹಾರ ಕಿಟ್ ಗಳ ಅಗತ್ಯವಿದ್ದು, ಇದಕ್ಕಾಗಿ 466 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ತಿಂಗಳಿಗೆ ಅಗತ್ಯವಿರುವ ತೊಗರಿ ಬೇಳೆ: 18,628 ಮೆಟ್ರಿಕ್ ಟನ್ ಹಾಗೂ ಅವಶ್ಯಕವಿರುವ ಎಣ್ಣೆ, ಸಕ್ಕರೆ, ಉಪ್ಪು: ತಲಾ 12,419 ಮೆಟ್ರಿಕ್ ಟನ್ ಗಳಾಗಿದೆ.
ಗುಣಮಟ್ಟದಲ್ಲಿ ರಾಜಿ ಇಲ್ಲ: ಸಿಎಂ ಖಡಕ್ ವಾರ್ನಿಂಗ್ :
“ಜನರಿಗೆ ನೀಡುವ ಆಹಾರ ಸಾಮಾಗ್ರಿಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ತೂಕದಲ್ಲಿ ಮೋಸವಾಗಬಾರದು ಅಥವಾ ಕಳಪೆ ವಸ್ತುಗಳನ್ನು ನೀಡುವಂತಿಲ್ಲ. ಒಂದು ವೇಳೆ ಗುಣಮಟ್ಟದ ಬಗ್ಗೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ತೊಗರಿ ಬೇಳೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀಡಲು ಮತ್ತು ಖರೀದಿ ಪ್ರಕ್ರಿಯೆಯನ್ನು ನಾಫೆಡ್ (NAFED) ಅಥವಾ ಎನ್‌ಸಿಸಿಎಫ್ (NCCF) ನಂತಹ ಕೇಂದ್ರ ಸಂಸ್ಥೆಗಳ ಮೂಲಕ ಪಾರದರ್ಶಕವಾಗಿ (ಕೆಟಿಪಿಪಿ ಅನ್ವಯ) ನಡೆಸಲು ಸೂಚಿಸಲಾಗಿದೆ.
ಕಿಟ್ ವಿತರಣೆ ಯಾವಾಗ? :
ಸರಬರಾಜಾದ ಫುಡ್‌ಕಿಟ್‌ಗಳನ್ನು ನಿಗಮದ ಗೋದಾಮುಗಳ ಮೂಲಕ ಪ್ರತಿ ತಿಂಗಳು 10ನೇ ತಾರೀಖಿನ ಒಳಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಬೇಕು ಎಂದು ಗಡುವು ವಿಧಿಸಲಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















