ಬೆಂಗಳೂರು, ಡಿ.02 www.bengaluruwire.com : ಪತ್ರಿಕೋದ್ಯಮ ಮತ್ತು ಕ್ರೀಡಾ ಸ್ಫೂರ್ತಿಯನ್ನು ಬೆಸೆಯುವ ಜೊತೆಗೆ, ಸಮಾಜದಲ್ಲಿ ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದೊಂದಿಗೆ ಹೈಪರ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಟ್ರಸ್ಟ್ ವತಿಯಿಂದ ‘ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026’ (KMCL) ಟೂರ್ನಿಯನ್ನು ಆಯೋಜಿಸಲಾಗಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್‌ನ ಮುಖ್ಯಸ್ಥರಾದ ಕಿರಣ್ ಶೆಟ್ಟಿ ಈ ವಿಷಯವನ್ನು ಪ್ರಕಟಿಸಿದರು. 2026ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಈ ಪ್ರತಿಷ್ಠಿತ ಅಂತರ್ ಮಾಧ್ಯಮ ಟೂರ್ನಿ ನಡೆಯಲಿದ್ದು, ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ ಸಮಾಜಮುಖಿ ಸಂದೇಶವನ್ನು ಸಾರಲಿದೆ ಎಂದು ಅವರು ತಿಳಿಸಿದರು.
ಬೃಹತ್ ಮೊತ್ತದ ನಗದು ಬಹುಮಾನ:
ಸಾಮಾನ್ಯವಾಗಿ ಮಾಧ್ಯಮ ಟೂರ್ನಿಗಳಲ್ಲಿ ಕಾಣಸಿಗದಂತಹ ಬೃಹತ್ ಮೊತ್ತದ ಬಹುಮಾನವನ್ನು ಈ ಬಾರಿ ಘೋಷಿಸಲಾಗಿದೆ. ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ಬರೋಬ್ಬರಿ ₹10 ಲಕ್ಷ ನಗದು ಬಹುಮಾನ ನೀಡಲಾಗುವುದು. ರನ್ನರ್ ಅಪ್ ಸ್ಥಾನ ಪಡೆಯುವ ತಂಡಕ್ಕೆ ₹5 ಲಕ್ಷ ಹಾಗೂ ಸೆಮಿಫೈನಲ್ ಪ್ರವೇಶಿಸುವ ಉಳಿದ ಎರಡು ತಂಡಗಳಿಗೆ ತಲಾ ₹2.5 ಲಕ್ಷ ಬಹುಮಾನ ನೀಡಲಾಗುವುದು ಎಂದು ಕಿರಣ್ ಶೆಟ್ಟಿ ಮಾಹಿತಿ ನೀಡಿದರು. ವಿಶೇಷವೆಂದರೆ, ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಮಾಧ್ಯಮ ತಂಡಗಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ತಂಡಗಳ ನೋಂದಣಿ ಪ್ರಕ್ರಿಯೆ, ಪಂದ್ಯಗಳ ವೇಳಾಪಟ್ಟಿ ಮತ್ತು ಮೈದಾನಗಳ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು.
ಕ್ಯಾನ್ಸರ್ ವಿರುದ್ಧ ಜಾಗೃತಿ ಅಸ್ತ್ರ:
ಕ್ರೀಡೆಯ ಮೂಲಕ ಆರೋಗ್ಯದ ಕಾಳಜಿ ಮೂಡಿಸುವುದು ಈ ಟೂರ್ನಿಯ ಪ್ರಮುಖ ಧ್ಯೇಯವಾಗಿದೆ.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಮಾತನಾಡಿ, “ಭಾರತದಲ್ಲಿ ಮಹಿಳೆಯರನ್ನು ಗರ್ಭಾಶಯ ಕ್ಯಾನ್ಸರ್ (Cervical Cancer) ಗಂಭೀರವಾಗಿ ಕಾಡುತ್ತಿದೆ. ಆದರೆ, ಮುಂಚಿತವಾಗಿಯೇ ತಪಾಸಣೆ ಮಾಡಿಸುವುದು ಮತ್ತು ಎಚ್‌ಪಿವಿ (HPV) ಲಸಿಕೆ ಹಾಕಿಸುವ ಮೂಲಕ ಇದನ್ನು ತಡೆಗಟ್ಟಲು ಸಾಧ್ಯವಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದ್ದು, ಈ ಟೂರ್ನಿ ಅದಕ್ಕೆ ವೇದಿಕೆಯಾಗಲಿದೆ,” ಎಂದು ಅಭಿಪ್ರಾಯಪಟ್ಟರು.






















